ವಿದೇಶದಲ್ಲಿ ಅಧ್ಯಯನ ಮುಗಿಸಿ ಶಾಸಕರು ವಾಪಸ್!
ಬೆಂಗಳೂರು, ಜ.9 : ಹಲವು ವಿರೋಧಗಳ ನಡುವೆಯೇ ವಿದೇಶದಲ್ಲಿ ಅಧ್ಯಯನ ನಡೆಸಲು ತೆರಳಿದ್ದ 11 ಶಾಸಕರ ತಂಡ ಕರ್ನಾಟಕಕ್ಕೆ ವಾಪಸ್ ಆಗಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಹಾಂಕಾಂಗ್ ಪ್ರವಾಸಕ್ಕೆ ತೆರಳಿದ್ದ ಶಾಸಕರು ಗುರುವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಿದ್ದು, ಅಧ್ಯಯನ ಪ್ರವಾಸದ ವರದಿಯನ್ನು ಶೀಘ್ರವಾಗಿ ನೀಡುವುದಾಗಿ ಘೋಷಿಸಿದ್ದಾರೆ.
ನರಗುಂದ ಶಾಸಕ ಬಿ.ಆರ್.ಯಾವಗಲ್ ಅವರ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿದ್ದ 11 ಶಾಸಕರ ತಂಡ, ಗುರುವಾರ ಮುಂಜಾನೆ 2.45ರ ಸುಮಾರಿಗೆ ಹಾಂಕಾಂಗ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಡಿ.25ರಂದು ಈ ಶಾಸಕರು ತಂಡ ವಿದೇಶ ಪ್ರವಾಸಕ್ಕೆ ತೆರಳಿತ್ತು. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಹಾಂಕಾಂಗ್ ಮುಂತಾದ ದೇಶಗಳಲ್ಲಿ ಈ ಶಾಸಕರು ಅಧ್ಯಯನ ನಡೆಸಿ ತವರಿಗೆ ಮರಳಿದ್ದಾರೆ. [ಶಾಸಕರ ವಿದೇಶ ಪ್ರವಾಸ ಖಚಿತ]

ರಾಜ್ಯದ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರವಿದೆ, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಆದರೆ, ಶಾಸಕರು ಅಧ್ಯಯನದ ಹೆಸರಿನಲ್ಲಿ ವಿದೇಶ ಪ್ರವಾಸ ಮಾಡುವುದುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜನರ ನಿಲುವು ಏನೇ ಇದ್ದರೂ ಶಾಸಕರು ಮಾತ್ರ ತಮ್ಮ ಅಧ್ಯಯನ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಮೋಜು ಮಸ್ತಿಗಾಗಿ ವಿದೇಶಕ್ಕೆ ಹೋಗಿಲ್ಲಾ, ರಾಜ್ಯದ ಒಳಿತಿಗಾಗಿ ಪ್ರವಾಸ ಮಾಡಿದ್ದೇವೇವೆ. ಒಂದು ತಿಂಗಳಿನೊಳಗೆ ಪ್ರವಾಸದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಬಿ.ಆರ್.ಯಾವಗಲ್ ಮಾಧ್ಯಮಗಳಿಗೆ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದರು.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳನ್ನು ಕಂಡು ಸಿಡಿಮಿಡಿಗೊಂಡ ಶಾಸಕರು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರವಾಸದ ಬಗ್ಗೆ ಮಾಹಿತಿ ನೀಡುತ್ತೇವೆ. ನಾವು ಮೊದಲ ಬಾರಿಗೆ ಪ್ರವಾಸ ಹೋಗಿಲ್ಲ, ಹಿಂದೆಯೂ ಹೋಗಿದ್ದರು. ಇದರಲ್ಲಿ ತಪ್ಪೇನು ಇಲ್ಲ. ನಾವು ಅನೈತಿಕವಾದ ಕೆಲಸವನ್ನು ಮಾಡಿಲ್ಲ ಎಂದು ಬಿ.ಆರ್.ಯಾವಗಲ್ ಹೇಳಿದರು. [ಅಧ್ಯಯನಕ್ಕಾಗಿ ಶಾಸಕರು ವಿದೇಶಕ್ಕೆ]
11 ಶಾಸಕರ ಪಟ್ಟಿ : ಬಿ.ಆರ್.ಯಾವಗಲ್, ಬಸವರಾಜ್ ನೀಲಪ್ಪ ಶಿವಣ್ಣನವರ್, ಎಸ್.ಅಂಗಾರ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ದೊಡ್ಡಮನಿ ರಾಮಕೃಷ್ಣ, ಸಿದ್ದಲಿಂಗಪ್ಪ, ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್, ಬಿ.ಎ.ಮೊಹಿದ್ದೀನ್ ಬಾವಾ, ಮಂಕಾಳ ಸುಬ್ಬ ವೈದ್ಯ, ಜಿ.ಎಚ್.ಶ್ರೀನಿವಾಸ್, ದೊಡ್ಡನಗೌಡ ಪಾಟೀಲ್ ಮತ್ತು ರುದ್ರಪ್ಪ ಲಮಾಣಿ.












Click it and Unblock the Notifications