Belthangady Elections : ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನಾನಾ..ನೀನಾ..
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಾಳಯಕ್ಕೆ ಭರ್ಜರಿ ಫಸಲನ್ನು ನೀಡಿದ್ದು ದಕ್ಷಿಣ ಕನ್ನಡ ಜಿಲ್ಲೆ. ಕಾಂಗ್ರೆಸ್ಸಿನ ಯು.ಟಿ.ಖಾದರ್ ಹೊರತಾಗಿ ಯಾರೊಬ್ಬರೂ ದಡ ಸೇರಿರಲಿಲ್ಲ. ಇದರಲ್ಲಿ ಬಂಟ್ವಾಳದಿಂದ ಸ್ಪರ್ಧಿಸಿದ್ದ ರಮಾನಾಥ ರೈ ಕೂಡಾ.. ಕರ್ನಾಟಕ ಚುನಾವಣೆಗೂ, ನರೇಂದ್ರ ಮೋದಿ ವರ್ಚಸ್ಸಿಗೂ ಸಂಬಂಧವಿಲ್ಲ ಎಂದು ಇಲ್ಲಿ ಹೇಳಲು ಬರುವುದಿಲ್ಲ.
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಬೆಳ್ತಂಗಡಿಯಲ್ಲಿ ಕಳೆದ ಬಾರಿ ಕಮಲ ಜಯಭೇರಿ ಬಾರಿಸಿತ್ತು. ಬಿಜೆಪಿಯ ಯುವ ಮುಖಂಡ ಹರೀಶ್ ಪೂಂಜಾ ಅವರು ಕಾಂಗ್ರೆಸ್ಸಿನ ಹಿರಿಯ ಮುಖಂಡ ವಸಂತ ಬಂಗೇರ ಅವರನ್ನು 22,974 ಮತಗಳ ಅಂತರದಿಂದ ಸೋಲಿಸಿದ್ದರು. ಅಲ್ಲಿಂದ ಹರೀಶ್ ಪೂಂಜಾ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸುತ್ತಾ ಬಂದಿದ್ದಾರೆ. ಕೊರೊನಾ ಮತ್ತು ಅತಿವೃಷ್ಟಿಯ ವೇಳೆ ಅವರ ಕೆಲಸ ಮೆಚ್ಚುಗೆಯನ್ನು ಪಡೆದಿತ್ತು.

ಕ್ಶೇತ್ರದಲ್ಲಿ ಬಿಲ್ಲವ-ಬಂಟ್ಸ್ ನಡುವೆ ಹೆಚ್ಚಿನ ಪೈಪೋಟಿ. ಇತ್ತೀಚಿನ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆಯಲ್ಲಿ ಸಿಕ್ಕ ಪ್ರತಿಕ್ರಿಯೆಯಿಂದ ಸ್ಥಳೀಯ ಕಾಂಗ್ರೆಸ್ ಮುಖಂಡರು ಖುಷಿಯಾಗಿದ್ದರು ಕೂಡಾ ಅದು ಮತವಾಗಿ ಪರಿವರ್ತನೆಯಾಗುತ್ತದೆ ಎನ್ನುವ ಖಾತ್ರಿ ಜಿಲ್ಲಾ ಮುಖಂಡರಿಗಿಲ್ಲ. ಇನ್ನು, ಬಿಜೆಪಿಯಲ್ಲಿ ಯಾವುದೇ ಟಿಕೆಟ್ ಗೊಂದಲವಿಲ್ಲ. ಆದರೆ, ಇದೇ ಮಾತನ್ನು ಕಾಂಗ್ರೆಸ್ ಮಟ್ಟಿಗೆ ಹೇಳಲು ಬರುವುದಿಲ್ಲ.
ಉತ್ತರ, ಈಶಾನ್ಯ ಮತ್ತು ಪೂರ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಆಗ್ನೇಯದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ, ಪಶ್ಚಿಮದಲ್ಲಿ ಕಾರ್ಕಳ ಮತ್ತು ಬಂಟ್ವಾಳ, ದಕ್ಷಿಣದಲ್ಲಿ ಪುತ್ತೂರು ತಾಲ್ಲೂಕು ಸುತ್ತುವರಿದುಕೊಂಡಿರುವ ಬೆಳ್ತಂಗಡಿ ಕ್ಷೇತ್ರ ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು ಅರವತ್ತು ಕಿಲೋಮೀಟರ್ ದೂರದಲ್ಲಿದೆ.

ತುಳು ಇಲ್ಲಿನ ಪ್ರಮುಖ ಭಾಷೆಯಾಗಿದ್ದು, ತೆಂಗು, ಕಂಗು, ಭತ್ತ, ರಬ್ಬರ್ ಬೆಳೆ ಇಲ್ಲಿನ ಪ್ರಮುಖ ಆರ್ಥಿಕ ಮೂಲ. ಧರ್ಮಸ್ಥಳ ಮಂಜುನಾಥಸ್ವಾಮಿ, ಸೌತಡ್ಕ ಮಹಾಗಣಪತಿ, ಕನ್ಯಾಡಿ ಶ್ರೀರಾಮ ದೇವಾಲಯ, ಸೇಂಟ್ ಆಂಟನಿ ಚರ್ಚ್, ಚಾರ್ಮಾಡಿ ಘಾಟ್, ಜಮಲಾಬಾದ್ ಕೋಟೆ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಚಾರ್ಮಾಡಿಯಿಂದ ಪೂಂಜಾಲಕಟ್ಟೆಯವರೆಗೂ, ವೇಣೂರು ನಿಂದ ಉಪ್ಪಿನಂಗಡಿಯವರೆಗೂ ಸುತ್ತುವರಿದಿರುವ ವಿಸ್ತಾರವಾದ ಕ್ಷೇತ್ರ ಇದಾಗಿದೆ.
ಬೆಳ್ತಂಗಡಿ ಕ್ಷೇತ್ರದ ಚುನಾವಣಾ ಇತಿಹಾಸವನ್ನು ನೋಡುವುದಾದರೆ ಇಲ್ಲಿ ಬಹುತೇಕ ಬಂಗೇರ ಸಹೋದರರದ್ದೇ ರಾಜ್ಯಭಾರ. ಬೆಳ್ತಂಗಡಿಯಲ್ಲಿ ನಡೆದ ಹದಿನಾಲ್ಕು ಚುನಾವಣೆಗಳಲ್ಲಿ ಏಳು ಬಾರಿ ಬಂಗೇರ ಮನೆತನದವರದ್ದೇ ಆಯ್ಕೆಯಾಗಿದ್ದಾರೆ. 1983, 1985, 1994, 1999, 2004, 2008, 2013ರಲ್ಲಿ ಬಂಗೇರ ಮನೆತನದವರು ಆಯ್ಕೆಯಾಗಿದ್ದಾರೆ.
ಕಳೆದ ಮೂರು ಚುನಾವಣೆಯಲ್ಲಿ ಎರಡು ಬಾರಿ ಕಾಂಗ್ರೆಸ್, ಒಮ್ಮೆ ಬಿಜೆಪಿ ಜಯಬೇರಿ ಬಾರಿಸಿದೆ. ಈ ಬಾರಿ ಬಿಜೆಪಿಯಿಂದ ಹರೀಶ್ ಪೂಂಜಾ ಸ್ಪರ್ಧಿಸುವುದು ಪಕ್ಕಾ. ಇನ್ನು ಕಾಂಗ್ರೆಸ್ಸಿನಲ್ಲಿ ಟಿಕೆಟ್ ಕದನ ಜೋರಾಗಿದೆ. ವಸಂತ ಬಂಗೇರ, ಗಂಗಾಧರ ಗೌಡ ಮತ್ತು ರಕ್ಷಿತ್ ಶಿವರಾಂ (ಬಿ.ಕೆ.ಹರಿಪ್ರಸಾದ್ ಸಹೋದರನ ಮಗ) ನಡುವೆ ಟಿಕೆಟಿಗಾಗಿ ಭಾರೀ ಪೈಪೋಟಿಯುದೆ. ರಕ್ಷಿತ್ ಟಿಕೆಟ್ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ
ಬಿಜೆಪಿಯಿಂದ ಎರಡು ಬಾರಿ, ಜೆಡಿಎಸ್ ಮತ್ತು ಕಾಂಗ್ರೆಸ್ಸಿನಿಂದ ಒಮ್ಮೆ ಆಯ್ಕೆಯಾಗಿರುವ ವಸಂತ ಬಂಗೇರ ಪಕ್ಷಾತೀತವಾಗಿ ವರ್ಚಸ್ಸನ್ನು ಹೊಂದಿರುವವರು. ಕಳೆದ ಬಾರಿ 'ವಸಂತ ವಿನ್ಯಾಸ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೆಳ್ತಂಗಡಿಗೆ ಬಂದು ಹೋಗಿದ್ದರು. ಇದರಿಂದಾಗಿ, ಬಂಗೇರ ಮತ್ತೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ರಕ್ಷಿತ್ ಶಿವರಾಂಗೆ ಬಹುತೇಕ ಟಿಕೆಟ್ ಕನ್ಫರ್ಮ್ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಹರೀಶ್ ಪೂಂಜಾ ಮತ್ತು ರಕ್ಷಿತ್ ಶಿವರಾಂ
ಹರೀಶ್ ಪೂಂಜಾ ಮತ್ತು ರಕ್ಷಿತ್ ಶಿವರಾಂ ಬಹುತೇಕ ಒಂದೇ ವಯಸ್ಸಿನವರು ಮತ್ತು ಇಬ್ಬರೂ ಹೈಕೋರ್ಟ್ ವಕೀಲರು. ಇಬ್ಬರೂ ಕೊರೊನಾ ವೇಳೆ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡವರು. SDPI ತಮ್ಮ ಅಭ್ಯರ್ಥಿಯಾಗಿ ಅಕ್ಬರ್ ಬೆಳ್ತಂಗಡಿಯವರನ್ನು ಈಗಾಗಲೇ ಘೋಷಿಸಿದೆ. ಈ ಪಕ್ಷದ ಸ್ಪರ್ಧೆಯಿಂದ ಕಾಂಗ್ರೆಸ್ ಮತಬ್ಯಾಂಕಿಗೆ ಹಿನ್ನಡೆಯಾಗುತ್ತದೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
2018ರ ಅಂಕಿಅಂಶದ ಪ್ರಕಾರ, ಕ್ಷೇತ್ರದ ಮತದಾರ ಸಂಖ್ಯೆ ಹೀಗಿದೆ
| ಪುರುಷರು | ಮಹಿಳೆಯರು | ಇತರರು | ಒಟ್ಟು |
| 1,09,428 | 109506 | 01 | 2,18,935 |












Click it and Unblock the Notifications