ಗಡಿನಾಡ ಕನ್ನಡಿಗರ ಮೂಗಿಗೆ ತುಪ್ಪ ಸವರಿದ ಕುಮಾರಣ್ಣನ ಬಜೆಟ್
ಬೆಳಗಾವಿ, ಜುಲೈ.05: ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಕೇವಲ ಹಾಸನ ಮತ್ತು ಚಾಮರಾಜನಗರಕ್ಕೆ ಸೀಮೀತವಾಗಿದ್ದು, ತವರು ಜಿಲ್ಲೆಗಳಿಗೆ ಕಮಾಲು, ಉಳಿದವರೆಲ್ಲ ಕಂಗಾಲು ಎನ್ನುವಂತಿದೆ.
ಕುಮಾರಸ್ವಾಮಿ ಚೊಚ್ಚಲ ಬಜೆಟ್ ನಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ನ್ಯಾಯ ದೊರಕಿಸಿಕೊಡಬಹುದು. ಹಿಂದುಳಿದ ಭಾಗಕ್ಕೆ ಬಂಪರ್ ಕೊಡುಗೆಗಳು ಸಿಗಬಹುದು ಎನ್ನುವ ಜನರ ನೀರೀಕ್ಷೆಗಳು ಹುಸಿಯಾಗಿವೆ.
ಹಾಸನಕ್ಕೆ ತೆಲೆದಿಂಬು, ಉತ್ತರ ಕರ್ನಾಟಕಕ್ಕೆ ಬರೀ ಕಾಲುಗರು ಎನ್ನುವಂತೆ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಭರಪೂರ ಕೊಡುಗೆ ನೀಡಿರುವ ಕುಮಾರಸ್ವಾಮಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಕಿಕ್ ನೀಡಿದ್ದಾರೆ.

ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದು ಶೂನ್ಯ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದ ಸೂಪರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ಮರು ಘೋಷಣೆ ಮಾಡಿ, ಹೊಸ ಬಾಟಲಿಯಲ್ಲಿ ಹಳೆ ಮದ್ಯ ಹಾಕಿ ಗಡಿನಾಡ ಕನ್ನಡಿಗರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.
ಬಜೆಟ್ ನಲ್ಲಿ ಬೆಳಗಾವಿ ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರ, ಸುವರ್ಣ ಸೌಧದ ಪಕ್ಕದಲ್ಲಿ ಶಾಸಕರ ಭವನ ನಿರ್ಮಾಣದ ತೀರ್ಮಾನವಾಗಬಹುದು ಎಂದು ಬೆಳಗಾವಿಯ ಜನ ನಂಬಿ ಕಾದು ಕುಳಿತಿದ್ದರು. ಆದರೆ ಕುಮಾರಸ್ವಾಮಿ ಜನರ ನಂಬಿಕೆಗೆ ದ್ರೋಹ ಬಗೆದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಾಂದಿ ಹಾಡಿದ್ದಾರೆ.












Click it and Unblock the Notifications