ತಾನು ಮುಖ್ಯಮಂತ್ರಿಯಾಗಲು ರಮೇಶ್ ಕಾರಣ ಎಂದು ಹೊಗಳಿದ ಯಡಿಯೂರಪ್ಪ
ನಾನು ಇಂದು ಮುಖ್ಯಮಂತ್ರಿಯಾಗಿ ನಮ್ಮ ಮುಂದೆ ಇರಲು ಮುಖ್ಯ ಕಾರಣ ರಮೇಶ್ ಜಾರಕಿಹೊಳಿ, ಆತ ರಾಜೀನಾಮೆ ನೀಡಿದ್ದರಿಂದಲೇ ನಾನು ಸಿಎಂ ಆಗಿದ್ದೇನೆ ಎಂಬುದನ್ನು ಅರಿತು ಅವರಿಗೆ ಮತ ಹಾಕಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಳಗಾವಿ, ಡಿಸೆಂಬರ್ 01: ನಾನು ಇಂದು ಮುಖ್ಯಮಂತ್ರಿಯಾಗಿ ನಮ್ಮ ಮುಂದೆ ಇರಲು ಮುಖ್ಯ ಕಾರಣ ರಮೇಶ್ ಜಾರಕಿಹೊಳಿ, ಆತ ರಾಜೀನಾಮೆ ನೀಡಿದ್ದರಿಂದಲೇ ನಾನು ಸಿಎಂ ಆಗಿದ್ದೇನೆ ಎಂಬುದನ್ನು ಅರಿತು ಅವರಿಗೆ ಮತ ಹಾಕಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗೋಕಾಕ್ ನ ಅಂಕಲಗಿಯಲ್ಲಿ ಬಿಜೆಪಿ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಸಿಎಂ, ತಮ್ಮ ಭಾಷಣದುದ್ದಕ್ಕೂ ರಮೇಶ್ ಜಾರಕಿಹೊಳಿಯನ್ನು ಹೊಗಳಿದರು. ನೀವು ಅವರನ್ನು ಬಹುಮತದಿಂದ ಗೆಲ್ಲಿಸಿದ್ರೆ ನಿಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ದಿಪಡಿಸಲಾಗುವುದು ಎಂದರು.
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಮಹಿಳೆಯರ ಸಬಲೀಕರಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ, ನೆರೆಯಿಂದ ಬಳಲಿರುವ ರಾಜ್ಯವನ್ನು ಆದಷ್ಟು ಬೇಗನೇ ಸರಿದಾರಿಗೆ ತರಲು ಯತ್ನಿಸುವುದಾಗಿ ಸಮಾವೇಶದಲ್ಲಿ ನೆರೆದವರಿಗೆ ಅಭಯ ನೀಡಿದರು.

ರಮೇಶ್ ಜಾರಕೊಹೊಳಿ 16 ಶಾಸಕರನ್ನು ಕಟ್ಟಿಕೊಂಡು ಗಟ್ಟಿಯಾಗಿ ನಿಂತಿದ್ದಕ್ಕೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣವಾಯಿತು ಮತ್ತು ನಿಮ್ಮ ಯಡಿಯೂರಪ್ಪ ಸಿಎಂ ಆಗಲು ಸಾಧ್ಯವಾಯಿತು ಎಂದರು.
ನಮ್ಮ ಒಂದೊಂದು ಮತವೂ ಅಮೂಲ್ಯವಾಗಿದ್ದು, ರಮೇಶ್ ಗೆ ನೀಡಿದರೆ ನನಗೇ ನೀಡಿದಂತೆ. ಎಲ್ಲ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಗೆದ್ದಾಗಿದೆ, ಗೆಲುವಿನ ಅಂತರವಷ್ಟೇ ಮುಖ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಹಗಲುಗನಸು ಕಾಣನುತ್ತಿದ್ದಾರೆ, ಅವರು ಈ ಚುನಾವಣೆಯಲ್ಲಿ ಒಬ್ಬಂಟಿಯಾಗಿದ್ದಾರೆ, ಕಾಂಗ್ರೆಸ್ ನ ಹಲವರು ಸಿದ್ದರಾಮಯ್ಯ ವಿರುದ್ದ ಮುನಿಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ವಿರುದ್ದ ಹರಿಹಾಯ್ದರು.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 05 ರಂದು ಉಪ ಚುನಾವಣೆಯ ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications