ಮತಾಂತರ ನಿಷೇಧ ಮಸೂದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ: ಡಿಕೆಶಿ
ಬೆಳಗಾವಿ, ಡಿಸೆಂಬರ್ 21: ಚಳಿಗಾಲದ ಅಧಿವೇಶನದಲ್ಲಿಂದು ಪ್ರಸ್ತಾವಿತ ಮತಾಂತರ ನಿಷೇಧ ಮಸೂದೆ ಮಂಡನೆ ಮಂಡಿಸಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಲು ಅನುಮೋದನೆ ಪಡೆಯಲಾಗಿದೆ. ಈ ನಡುವೆ ವಿವಾದಿತ ವಿಧೇಯಕದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಕಾಯಿದೆಯಿಂದ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ ಎಂದಿದ್ದಾರೆ.
ಮತಾಂತರ ಕಾಯ್ದೆ ನಿಷೇಧದ ಬಗ್ಗೆ ಇಂದು ವಿರೋಧ ಮಾಡುತ್ತಿರುವವರೇ ಅಂದು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟ್ಟಿದ್ದರು. 2017 ರಲ್ಲಿ ಕಾಂಗ್ರೆಸ್‌ನವರು ಮತಾಂತರ ಕಾಯ್ದೆ ನಿಷೇಧ ಜಾರಿಗೆ ತರಲು ಹೊರಟ್ಟಿದ್ದನ್ನು ಪ್ರಸ್ತಾಪಿಸಿ ಸಿಎಂ ಬೊಮ್ಮಾಯಿ ಈಗಾಗಲೇ ತಿರುಗೇಟು ನೀಡಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ''ಬಿಜೆಪಿ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡನೆ ಮೂಲಕ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಈ ಕಾಯಿದೆಯು ರಾಜ್ಯಕ್ಕೆ ಒಂದು ಕಪ್ಪುಚುಕ್ಕೆಯಾಗಲಿದೆ. ಮಸೂದೆಗೆ ಖಡಾಖಂಡಿತ ವಿರೋಧ ಇದೆ, ಈ ಬಗ್ಗೆ ಸದನದಲ್ಲಿ ತಕ್ಕ ಉತ್ತರ ನೀಡುತ್ತೇವೆ, '' ಎಂದಿದ್ದಾರೆ.

ಪ್ರಸ್ತಾವಿತ ಮಸೂದೆಯಲ್ಲಿ ಮತ್ತೆ ತಿದ್ದುಪಡಿ:
ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಬುದ್ಧಿಮಾಂದ್ಯರು, ಅಪ್ರಾಪ್ತರು ಮತ್ತು ಹೆಂಗಸರನ್ನು ಬಲವಂತವಾಗಿ ಮತಾಂತರ ಮಾಡಿದರೆ ಕನಿಷ್ಠ ಮೂರು ವರ್ಷದಿಂದ ಹತ್ತು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರ ದಂಡ ವಿಧಿಸಲು ಪ್ರಸ್ತಾವನೆ ಮಾಡಲಾಗಿದೆ.
ಮತಾಂತರಗೊಂಡ ನಂತರ ಒಂದೊಮ್ಮೆ ಆ ವ್ಯಕ್ತಿ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಜಾತಿ, ಧರ್ಮಗಳಿಗೆ ಸೇರಿದ್ದರೆ ಅವರಿಗೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಮುಂತಾದವುಗಳಿಂದ ದೊರೆಯುವ ಸವಲತ್ತುಗಳನ್ನು ನಿಲ್ಲಿಸಲಾಗುತ್ತದೆ ಎಂಬ ಸುದ್ದಿಯಿದೆ.
ಮತಾಂತರ ಮಸೂದೆ ಕಾಯ್ದೆ ಜಾರಿಗೆ ಕ್ರೈಸ್ತ ಸಮುದಾಯದವರು ವಿರೋಧ ವ್ಯಕ್ತಪಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವಿವಿಧ ಮಠಾಧೀಶರು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಂತೆ ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ಅವರು ಮತಾಂತರ ನಿಷೇಧದ ಖಾಸಗಿ ವಿಧೇಯಕವನ್ನು ಮಂಡಿಸಲು ಸಭಾಪತಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮತಾಂತರಕ್ಕೂ ಎರಡು ತಿಂಗಳು ಮುನ್ನ ಮತಾಂತರಗೊಳ್ಳುವ ವ್ಯಕ್ತಿಯು ಈ ಕುರಿತು ನೋಟಿಸ್ ಅನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನೀಡಬೇಕಾಗುತ್ತದೆ. ಅದೇ ರೀತಿ, ಮತಾಂತರ ಮಾಡುವ ವ್ಯಕ್ತಿಯೂ ಸಹ ಈ ಬಗ್ಗೆ ಒಂದು ತಿಂಗಳಿಗೂ ಮುನ್ನ ಮ್ಯಾಜಿಸ್ಟ್ರೇಟ್ ಅವರಿಗೆ ನೋಟಿಸ್ ನೀಡಬೇಕಾಗುತ್ತದೆ. ಮತಾಂತರಗೊಂಡ ನಂತರ ವ್ಯಕ್ತಿಯು ಒಂದು ತಿಂಗಳ ಒಳಗೆ ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಮಾಹಿತಿಯನ್ನು ನೀಡಬೇಕು. ತಪ್ಪಿದಲ್ಲಿ ಮತಾಂತರಗೊಂಡವರು ಹಾಗೂ ಮತಾಂತರ ಮಾಡಿದವರು ಇಬ್ಬರೂ ಜೈಲು ಸೇರಬೇಕಾಗುತ್ತದೆ.
ಎಂಇಎಸ್ ಪುಂಡಾಟ, ಉತ್ತರ ಕರ್ನಾಟಕಕ್ಕೆ ಸಿಗಬೇಕಿರುವ ಅನುದಾನ, ಬಿಟ್ ಕಾಯಿನ್ ಹಗರಣ, ಸಚಿವರ ಅಕ್ರಮ ಆಸ್ತಿ ಪ್ರಕರಣದ ಹಗರಣ, ರಮೇಶ್ ಜಾರಕಿಹೊಳಿ ಸಿ ಡಿ ಹಗರಣದ ಬಗ್ಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ವಿರೋಧ ಪಕ್ಷ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲದರ ನಡುವೆ ಮತಾಂತರ ನಿಷೇಧ ಕಾಯಿದೆ ಬಗ್ಗೆ ಹೆಚ್ಚಿನ ಚರ್ಚೆ, ವಿರೋಧ, ಪ್ರತಿಭಟನೆಗಳ ನಿರೀಕ್ಷೆಯಿದೆ.












Click it and Unblock the Notifications