ರಾಷ್ಟ್ರೀಯ ಹೆದ್ದಾರಿ 50 ಕಾಮಗಾರಿ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನವೇಕೆ?
ಬೆಳಗಾವಿ, ಡಿಸೆಂಬರ್, 10: ರಾಜ್ಯದ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿವೆ. ಈ ಪೈಕಿ
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೀದರ್ ಜಿಲ್ಲೆಯ ಕಮಲನಗರ-ನೌಬಾದ್‌ವರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. 396.95 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಈ ಕಾಮಗಾರಿ ಕಳಪೆ ಆಗಿರುವುದು ಕಂಡಿಬಂದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ವಿಧಾನಸಭೆಗೆ ತಿಳಿಸಿದ್ದಾರೆ.
ಬಿಜೆಪಿ ನಾಯಕ ಪ್ರಭು ಚವ್ಹಾಣ್ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲುಸ್ತುವಾರಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. 2022ರ ಜುಲೈ 15ರಂದು ಕಾಮಗಾರಿ ಪೂರ್ಣಗೊಳಿಸಿರುವುದಾಗಿ ಗುತ್ತಿಗೆದಾರರಿಗೆ ಪ್ರಮಾಣಪತ್ರವನ್ನೂ ವಿತರಣೆ ಮಾಡಲಾಗಿರುತ್ತದೆ ಎಂದರು.

ಕಾಂಕ್ರಿಟ್‌ನಿಂದ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು, ಹಲವೆಡೆ ಬಿರುಕು ಕಾಣಿಸಿಕೊಂಡಿದೆ. ಮುಂಬೈ ಐಐಟಿಯ ತಜ್ಞರಿಂದ ಸ್ಥಳ ಪರಿಶೀಲನೆ ಮಾಡಿಸಿ, ವರದಿ ಪಡೆಯಲಾಗಿದೆ. ತಜ್ಞರ ವರದಿಯನ್ನು ಆಧರಿಸಿ ಗುತ್ತಿಗೆದಾರರಿಂದಲೇ ಪರಿಹಾರ ಕಾಮಗಾರಿ ಮಾಡಿಸಲಾಗುತ್ತಿದೆ. ರಸ್ತೆ ನಿರ್ವಹಣೆಯ ಅವಧಿ 2026ರ ಜುಲೈವರೆಗೂ ಇದೆ. 2025ರ ಜನವರಿಯಲ್ಲಿ ಪರಿಹಾರ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹೆದ್ದಾರಿ ಅಪಘಾತಗಳ ತಾಣವಾಗಿದೆ. ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ಕಳಪೆ ಕಾಮಗಾರಿ ಮಾಡಿದ್ದಾರೆ. ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 120ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಚಿವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಕಳಪೆ ಕಾಮಗಾರಿಗಳಿಗೆ ಕಾರಣವಾಗಿರುವ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಪ್ರಭು ಚವ್ಹಾಣ್ ಆಗ್ರಹಿಸಿದರು.
ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಮುಕ್ತ: ದೇಶಾದ್ಯಂತ ಹಲವು ಎಕ್ಸ್‌ಪ್ರೆಸ್ ವೇಗಳ ಕಾಮಗಾರಿ ನಡೆಯುತ್ತಿವೆ. ಇನ್ನು ಕೆಲವು ಈಗಾಗಲೇ ಸಂಚಾರಕ್ಕೆ ಮುಕ್ತವಾಗಿದ್ದು, ಈ ಸಾಲಿಗೆ ಇದೀಗ ಬಹುನಿರೀಕ್ಷಿತ 260 ಕಿಲೋ ಮೀಟರ್ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕೂಡ ಸೇರಿದೆ. ಹಾಗದರ ಈ ಹೆದ್ದಾರಿ ಇದೀಗ ಯಾವ್ಯಾವ ನಗರಗಳಲ್ಲಿ ಸಂಚಾರಕ್ಕೆ ಮುಕ್ತವಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ,
ದೇಶದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಚೆನ್ನೈ ಹೆದ್ದಾರಿ ಮಾರ್ಗದ ಕರ್ನಾಟಕ ಭಾಗದಲ್ಲಿ ಕಾಮಗಾರಿ ಪೂರ್ಣ ಆಗಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಇದನ್ನು ಲಾಂಗ್ ಡ್ರೈವ್ ಮತ್ತು ಜಾಲಿ ರೈಡ್‌ಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈಗಾಗಲೇ ಇಲ್ಲಿನ ಸ್ಥಳೀಯರು ಇದನ್ನು ಬಳಕೆ ಮಾಡುತ್ತಿದ್ಧಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. 60 ಕಿಲೋ ಮೀಟರ್ ಎಕ್ಸ್‌ಪ್ರೆಸ್ ವೇ ಕಾಮಗಾರಿ ಆಗಸ್ಟ್ 2025ರ ವೇಳೆಗೆ ಸಂಪೂರ್ಣ ಕಾರ್ಯನಿರ್ವಹಿಸಲಿದೆ ಎನ್ನುವ ಭರವಸೆಯನ್ನು ಹೆದ್ದಾರಿ ಪ್ರಧಿಕಾರ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದರ ಒಟ್ಟು ಉದ್ದ ಹಾಗೂ ತಗಲಿದ ವೆಚ್ಚದ ಮಾಹಿತಿಯನ್ನು ಇಲ್ಲಿ ಗಮನಿಸಿ.
ಕರ್ನಾಟಕದಲ್ಲಿ ಈ 71 ಕಿಲೋ ಮೀಟರ್ ಹೆದ್ಧಾರಿ ಸಂಚಾರಕ್ಕೆ ಮುಕ್ತವಾಗಿದ್ದು, ಎಕ್ಸ್‌ಪ್ರೆಸ್‌ವೇ ಸುತ್ತಮುತ್ತಲಿನ ಸ್ಥಳೀಯರು ಮತ್ತು ರಸ್ತೆಯ ಕೊನೆಯವರೆಗೆ ಮತ್ತು ಹಿಂತಿರುಗುವವರೆಗೆ ಲಾಂಗ್ ಡ್ರೈವ್‌ಗೆ ಈ ದ್ದಾರಿಯನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೊಸಕೋಟೆ ಸಮೀಪದ ಜಿನ್ನಾಗೇರಾ ಕ್ರಾಸ್‌ನಲ್ಲಿರುವ ದೇವಸ್ಥಾನದಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಬಳಿಕ ದೇವಸ್ಥಾನ ಸ್ಥಳಾಂತರಿಸಲಾಗಿದ್ದು, 400 ಮೀಟರ್ ಉದ್ದದ ಕಾಮಗಾರಿ ಇದೀಗ ಮುಕ್ತಯವಾಗಿದೆ. ಕೆಲವು ಸಣ್ಣಪುಟ್ಟ ಕಾಮಗಾರಿಗಳನ್ನ ಹೊರತುಪಡಿಸಿದರೆ ರಸ್ತೆಯು ಸಂಚಾರಕ್ಕೆ ಮುಕ್ತವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿ ತಿಳಿಸಿದ್ದಾರೆ.












Click it and Unblock the Notifications