ಮಹದಾಯಿ ಕಾಮಗಾರಿ ಆರಂಭ ಯಾವಾಗ?: ಈ ಬಗ್ಗೆ ಸಚಿವ ಎಚ್.ಕೆ.ಪಾಟೀಲ್‌ರಿಂದ ಮಹತ್ವದ ಸುಳಿವು
ಬೆಳಗಾವಿ, ಡಿಸೆಂಬರ್, 12: ಮಹದಾಯಿ ಯೋಜನೆಯ ಕಾಮಗಾರಿ ಆರಂಭಕ್ಕೆ ಕೇಂದ್ರ ಸರ್ಕಾರದಿಂದ ಕೆಲವು ಅನುಮತಿಗಳು ಬರಬೇಕಿದೆ. ಕೇಂದ್ರವು ಅನುಮತಿ ನೀಡಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಕಾನೂನ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಕಾಂಗ್ರೆಸ್‌ನ ಎನ್.ಎಚ್.ಕೋನರಡ್ಡಿ, ಎಚ್.ವೈ.ಮೇಟಿ, ವಿನಯ ಕುಲಕರ್ಣಿ ಮತ್ತಿತರರು ನಿಯಮ 69ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದರು. ಹಲವು ಜಿಲ್ಲೆಗಳಿಗೆ ಅನುಕೂಲ ಆಗುವ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವಂತೆ ಆಗ್ರಹಿಸಿದರು.

ಜಲ ಸಂಪನ್ಮೂಲ ಸಚಿವರ ಪರವಾಗಿ ಉತ್ತರ ನೀಡಿದ ಪಾಟೀಲ್ ಅವರು, ಮಹದಾಯಿ ಯೋಜನೆಯಡಿ ಕಳಸಾ ಬಂಡೂರಿ ನಾಲಾ ತಿರುವು ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಈಗಾಗಲೇ ಅಂದಾಜು ಪಟ್ಟಿಗಳು ಮತ್ತು ವಿಸ್ತೃತ ಯೋಜನಾ ವರದಿಗಳಿಗೆ ಅನುಮೋದನೆ ನೀಡಲಾಗಿದೆ. 49.73 ಹೆಕ್ಟೇರ್ ಅರಣ್ಯ ಜಮೀನನ್ನು ಯೋಜನೆಗೆ ಬಳಸಿಕೊಳ್ಳಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ಕೋರಲಾಗಿದೆ ಎಂದರು.
ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ ಕೂಡ ಬೇಕಿದೆ. ರಾಜ್ಯ ವನ್ಯಜೀವಿ ಮಂಡಳಿಯು ತನ್ನ ಶಿಫಾರಸಿನೊಂದಿಗೆ ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಎಲ್ಲ ಅನುಮತಿಗಳನ್ನೂ ತ್ವರಿತವಾಗಿ ಕೊಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಿದೆ. ಅನುಮತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದರು.
ಅಥಣಿಯನ್ನು ಜಿಲ್ಲೆಯಾಗಿ ಘೋಷಿಸಲು ಹೋರಾಟ
ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಸೋಮವಾರ ಅಥಣಿ ಜಿಲ್ಲಾ ಹೋರಾಟ ಸಮಿತಿ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಕರೆ ಕೊಟ್ಟಿದ್ದ ಅಥಣಿ ಬಂದ್ ಅತ್ಯಂತ ಯಶಸ್ವಿಯಾಯಿತು. ಬೆಳಗ್ಗೆಯಿಂದ ಪಟ್ಟಣದ ಎಲ್ಲಾ ಅಂಗಡಿ-ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ-ವಹಿವಾಟುಗಳುಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ರ‍್ಯಾಲಿ ಪ್ರಾರಂಭ ಮಾಡಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾದು ಬಸವೇಶ್ಬರ ವೃತ್ತದಲ್ಲಿ ಸಮವೇಶಗೊಂಡಿತು. ಈ ಸಮಾವೇಶದಲ್ಲಿ 10ಕ್ಕೂ ಅಧಿಕ ಸಂಖ್ಯೆಯ ಮಠಾಧೀಶರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.
ಸಭೆಯನ್ನು ಉದ್ದೇಶಿಸಿ ಗಜಾನನ ಮಂಗಸೂಳಿ, ಷಹಜಹಾನ್ ಡೊಂಗರಗಾವ, ವಿನಾಯಕ ಬಾಗಡಿ, ಎ ಎಮ್ ಖೊಬ್ರಿ, ಅರುಣ ಯಲಗುದ್ರಿ, ಎಸ್ ಎ ಸಂಕ, ಶೇಖರ ನೇಮಗೌಡ ಮಾತನಾಡಿ ಅಥಣಿ ಜಿಲ್ಲೆಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲವಿದೆ ಎಂದರು. ಅನಂತರ ಮಠಾಧೀಶರಾದ ಮರುಳಸಿದ್ದ ಸ್ವಾಮಿಗಳು, ಶಿವಬಸವ ಸ್ವಾಮಿಗಳು, ಪ್ರಭುಚನ್ನಬಸವ ಸ್ವಾಮಿಗಳು, ಸಿದ್ದಲಿಂಗ ಸ್ವಾಮಿಗಳು, ಅಮರೇಶ್ವರ ಸ್ವಾಮಿಗಳು, ಶಶಿಕಾಂತ ಪಡಸಲಗಿ ಹೋರಾಟಕ್ಕೆ ಬೆಂಬಲ ಸೂಚಿಸಿ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.
ಅಥಣಿ ಜಿಲ್ಲಾ ಹೋರಾಟ ಸಮಿತಿ ಗೌರವಾಧ್ಯಕ್ಷ ಶಿವಕುಮಾರ ಸವದಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ರಮೇಶ್ ಕಾಗಲೆ, ಅರುಣ ಭಾಸಿಂಗಿ, ಶಶಿಧರ ಬರ್ಲಿ, ರವಿ ಬಡಕಂಬಿ, ಪರಶುರಾಮ ಸೋನಕರ, ಅಪ್ಪು ಪೂಜಾರಿ, ಶಬ್ಬೀರ ಸಾತಬಚ್ಚೆ, ದೇವೇಂದ್ರ ಬಿಸ್ವಾಗರ, ಸಂತೋಷ್ ಬಡಕಂಬಿ, ದೀಪಕ ಬುರ್ಲಿ, ಮಿಥೇಶ ಪಟ್ಟಣ, ತುಕಾರಾಮ ದೇವಕಾತೆ, ಸಂಜಯ ಬಕಾರಿ, ಸಚಿನ ಬುಟಾಳಿ, ಉದಯ ಸೊಳಸಿ ಇದ್ದರು.
ಇದೇ ವೇಳೆ ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಅಥಣಿ ಜಿಲ್ಲಾ ಹೋರಾಟ ಸಮಿತಿ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಹೋರಾಟಗಾರರು ಹಾಗೂ ಸ್ವಾಮೀಜಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.












Click it and Unblock the Notifications