ಬೆಳಗಾವಿಗೆ ಧಾರವಾಡದ ವಂದೇ ಭಾರತ್ ಬರಲಿ, ಶೆಟ್ಟರ್ ಬೇಡ!
ಬೆಳಗಾವಿ, ಮಾರ್ಚ್ 21: ಬೆಳಗಾವಿಯ ಬಿಜೆಪಿ ಟಿಕೆಟ್ ಯಾರಿಗೆ?. ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಎಲ್ಲರ ಕುತೂಹಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಎಂಬ ಮಾತು ಹಬ್ಬಿದೆ.
#GoBackShettar ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿ ನಾಯಕರನ್ನು ಒತ್ತಾಯಿಸಲಾಗುತ್ತಿದೆ. ಮಾರ್ಚ್ 22ರಂದು ಬಿಜೆಪಿ ಪಟ್ಟಿ ಬಿಡುಗಡೆಯಾಗಲಿದ್ದು, ಯಾರು ಅಭ್ಯರ್ಥಿ? ಎಂಬುದು ಅಂತಿಮವಾಗಲಿದೆ.

ಜಗದೀಶ್ ಶೆಟ್ಟರ್ ಬೇಡ ವಂದೇ ಭಾರತ್ ರೈಲು ಬರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ. ಕೆಎಸ್ಆರ್ ಬೆಂಗಳೂರು-ಧಾರವವಾಡ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಅನುಮತಿ ಸಿಕ್ಕಿದೆ. ಇದನ್ನೇ ಧಾರವಾಡದ ಶೆಟ್ಟರ್‌ಗೆ ಹೋಲಿಕೆ ಮಾಡಿ #GoBackShettar ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಲಾಗಿದೆ.
ಪೋಸ್ಟ್‌ನಲ್ಲಿ ಇರುವುದೇನು?; 'ಹುಬ್ಬಳ್ಳಿ ಧಾರವಾಡ ವಂದೇ ಭಾರತ ಎಕ್ಸ್‌ಪ್ರೆಸ್ ಬೆಳಗಾವಿಗೆ ಕೊಡ್ತಾಇದ್ರೆ ವಿರೋಧ್ ಮಾಡಿದ್ರು, ಆದ್ರೆ @JagadishShettarಗೆ ಬೆಳಗಾವಿ ಗೆ ಕೊಡ್ತಾ ಇದ್ರೆ ಸುಮ್ಮನಿದ್ದರೆ ನಾವೂ ವಂದೇ ಭಾರತ ಎಕ್ಸ್‌ಪ್ರೆಸ್ ಬೇಕು ಅಂತೀವಿ, ಆದರೆ ಜಗದೀಶ್ ಶೆಟ್ಟರ್ ಬೇಡ ಅಂತಾ ಇದೀವಿ...ಎಲ್ಲರಿಗೂ ವಂದೇ ಭಾರತ ಬೇಕು ಅದರೆ JS ಬೇಡ...#GoBackShettar' ಎಂದು ಪೋಸ್ಟ್ ಹಾಕಲಾಗಿದೆ.
ಹುಬ್ಬಳ್ಳಿ ಧಾರವಾಡ ವಂದೇ ಭಾರತ ಎಕ್ಸ್‌ಪ್ರೆಸ್ ಬೆಳಗಾವಿ ಗೆ ಕೊಡ್ತಾಇದ್ರೆ ವಿರೋಧ್ ಮಾಡಿದ್ರು, ಆದ್ರೆ @JagadishShettar ಗೆ ಬೆಳಗಾವಿ ಗೆ ಕೊಡ್ತಾ ಇದ್ರೆ ಸುಮ್ಮನಿದ್ದರೆ
— 𝐁𝐞𝐥𝐚𝐠𝐚𝐯𝐢𝐑𝐚𝐢𝐥𝐰𝐚𝐲 🇮🇳 (@BelagaviRailway) March 21, 2024
ನಾವೂ ವಂದೇ ಭಾರತ ಎಕ್ಸ್‌ಪ್ರೆಸ್ ಬೇಕು ಅಂತೀವಿ ಆದರೆ ಜಗದೀಶ್ ಶೆಟ್ಟರ್ ಬೇಡ ಅಂತಾ ಇದೀವಿ...
ಎಲ್ಲರಿಗೂ ವಂದೇ ಭಾರತ ಬೇಕು ಅದರೆ JS ಬೇಡ ..#GoBackShettar
ಬೆಳಗಾವಿಯ ಹಾಲಿ ಸಂಸದರು ಮಂಗಲ ಸುರೇಶ್ ಅಂಗಡಿ. ಆದರೆ ಈ ಬಾರಿ ಅವರು ಕಣಕ್ಕಿಳಿಯುವುದಿಲ್ಲ. ಆದ್ದರಿಂದ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗಲಿದೆ ಎಂಬುದು ಸದ್ಯದ ಸುದ್ದಿ. ಆದರೆ ಹೊರಗಿನವರು ಬೇಡ. ಧಾರವಾಡದ ಶೆಟ್ಟರ್ ನಮಗೆ ಬೇಡ ಎಂದು ಶೆಟ್ಟರ್ ವಿರುದ್ಧ ಅಭಿಯಾನ ನಡೆಯುತ್ತಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಬಿಜೆಪಿ ತೊರೆದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, 60775 ಮತಗಳನ್ನು ಪಡೆದು ಸೋತರು. ಬಿಜೆಪಿಯ ಮಹೇಶ್ ಟೆಂಗಿನಕಾಯಿ 95064 ಮತಗಳನ್ನು ಪಡೆದು ಗೆಲುವು ಕಂಡರು.
ಆದರೆ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಈ ಕಾರಣಕ್ಕೆ ಸಹ ಬೆಳಗಾವಿಗೆ ಬರಬೇಡಿ ಎಂದು ಶೆಟ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.
ಹಾಲಿ ಸಂಸದೆ ಮಂಗಲ ಸುರೇಶ್ ಅಂಗಡಿ ಪುತ್ರಿ ಜಗದೀಶ್ ಶೆಟ್ಟರ್ ಸೊಸೆ. ಬೆಳಗಾವಿಯ ಬೀಗರು ಎಂಬ ಒಂದೇ ಅಂಶ ಮುಂದಿಟ್ಟುಕೊಂಡು ಶೆಟ್ಟರ್ ಬೆಳಗಾವಿಯ ಟಿಕೆಟ್ ಕೇಳಿದ್ದಾರೆ. ಆದರೆ ವರಿಷ್ಠರ ತೀರ್ಮಾನ ಏನು? ಎಂಬುದು ಇನ್ನೂ ಅಂತಿಮವಾಗಿಲ್ಲ.
ಬೆಳಗಾವಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್ ಅಭ್ಯರ್ಥಿ ಎಂಬ ಸುದ್ದಿ ಹಬ್ಬಿದೆ. ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗಬೇಕಿದೆ. ಮೃಣಾಲ್ ಹೆಬ್ಬಾಳ್ಕರ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ. ಆದರೆ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಸದ್ಯದ ಕುತೂಹಲವಾಗಿದೆ.
ವಂದೇ ಭಾರತ್ ಬಂದಿಲ್ಲ: ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. 2023ರ ನವೆಂಬರ್ 21ರಂದು ರೈಲ್ವೆ ಇಲಾಖೆ ಅಧಿಕಾರಿಗಳು ಬೆಂಗಳೂರು-ಬೆಳಗಾವಿ ತನಕ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸಿದ್ದಾರೆ. ಆದರೆ ಇದುವರೆಗೂ ರೈಲು ಬೆಳಗಾವಿಗೆ ಆಗಮಿಸಿಲ್ಲ.
ಯಾವುದೇ ಅಡೆ ತಡೆ ಇಲ್ಲದೇ ನಿಗದಿತ ಸಮಯಕ್ಕಿಂತ ಮೊದಲೇ ಬೆಂಗಳೂರಿನಿಂದ ರೈಲು ಬೆಳಗಾವಿಗೆ ತಲುಪಿದೆ. ಗಡಿನಾಡಿನ ಜನರು ಸಹ ಶೀಘ್ರವೇ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇನ್ನೂ ರೈಲು ಬಂದಿಲ್ಲ. ಈಗ ರೈಲು ಬರಲಿ ಶೆಟ್ಟರ್ ಬೇಡ ಎಂದು ಅಭಿಯಾನ ಮಾಡಿ, ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ವಿರೋಧಿಸಲಾಗಿದೆ.












Click it and Unblock the Notifications