ಕಳಸಾ-ಬಂಡೂರಿ ಯೋಜನಾ ಸ್ಥಳಕ್ಕೆ ತ್ರಿಸದಸ್ಯ ಸಮಿತಿ ಶೀಘ್ರ ಭೇಟಿ
ಬೆಳಗಾವಿ, ಮಾರ್ಚ್ 10: ವಿವಾದಿತ ಕಳಸಾ-ಬಂಡೂರಿ ಯೋಜನಾ ಸ್ಥಳಕ್ಕೆ ಭೇಟಿ ನೀಡಲು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರದ ಮೂರು ಅಧಿಕಾರಿಗಳನ್ನು ನೇಮಿಸಿದೆ.
ಯೋಜನಾ ಸ್ಥಳಕ್ಕೆ ತ್ರಿಸದಸ್ಯರನ್ನು ಒಳಗೊಂಡ ಸಮಿತಿ ಶೀಘ್ರವೇ ಬೆಳಗಾವಿ ಜಿಲ್ಲೆಯ ಕಣಕುಂಬಿಯಲ್ಲಿರುವ ಕಳಸಾ-ಬಂಡೂರಿ ಯೋಜನಾ ಸ್ಥಳಕ್ಕೆ ಭೇಟಿ ನೀಡಲಿದೆ.
ಕಳಸಾ-ಬಂಡೂರಿ ಯೋಜನೆಯಿಂದ ಕರ್ನಾಟಕ ಸರ್ಕಾರ ಈಗಾಗಲೇ ಮಹಾದಾಯಿ ನದಿ ನೀರನ್ನು ತನ್ನತ್ತ ತಿರುಗಿಸಿಕೊಂಡಿದೆ ಎಂದು ಗೋವಾ ಸರ್ಕಾರ ಆರೋಪಿಸಿದೆ. ಅಲ್ಲದೇ, ಈ ಸಂಬಂಧ ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಗೋವಾ ಅರ್ಜಿ ಸಲ್ಲಿಸಿದೆ.

ಗೋವಾ ಅರ್ಜಿ ಪರಿಶೀಲಿಸಿದ ಸುಪ್ರೀಂಕೋರ್ಟ್, ಮೂರು ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ ಕಳಸಾ-ಬಂಡೂರಿ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಕಳೆದ ಫೆ.22ರಂದು ನಿರ್ದೇಶನ ನೀಡಿತ್ತು.
ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕದ ಪರವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಆಣೆಕಟ್ಟಿನ ಅಧೀಕ್ಷಕ ಅಭಿಯಂತರ ಕೃಷ್ಣೋಜಿರಾವ್, ಗೋವಾ ಪರವಾಗಿ ಅಧಿಕ್ಷಕ ಅಭಿಯಂತರಾದ ಶ್ರೀಪ್ರಸಾದ ಅವರು ನೇಮಕಗೊಂಡಿದ್ದಾರೆ. ಮಹಾರಾಷ್ಟ್ರದ ಪರ ಸಿಂಧದುರ್ಗ ಕೊಂಕಣ ನೀರಾವರಿ ಯೋಜನೆ ಅಧೀಕ್ಷಕ ಅಭಿಯಂತ ವಿಜಯಕುಮಾರ ಥೋರಟ್ ಅವರನ್ನು ಸಮಿತಿಯ ಸದಸ್ಯರಾಗಿ ಬುಧವಾರವಷ್ಟೇ ನೇಮಕಗೊಂಡಿದ್ದಾರೆ.
ಜಂಟಿ ಪರಿಶೀಲನಾ ಸಮಿತಿಯ ರಚನೆ ಈಗ ಪೂರ್ಣಗೊಂಡಂತಾಗಿದ್ದು, ಈ ತಂಡ ಮಾರ್ಚ್ ಮೂರನೇ ವಾರ ಖಾನಾಪುರ ತಾಲೂಕಿನ ಕಳಸಾ-ಬಂಡೂರಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ನಾಲ್ಕು ವಾರದೊಳಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಏಪ್ರಿಲ್ 4ರಂದು ವರದಿಯ ವಿಚಾರಣೆ ನಡೆಯಲಿದೆ.
ಈ ತ್ರಿಸದಸ್ಯ ಸಮಿತಿಯು 4 ಮೀ. ಅಗಲ ಹಾಗೂ 5.8 ಮೀಟರ್ ಎತ್ತರದ ಎರಡು ಸುರಂಗದೊಳಗೆ ಪ್ರವೇಶಿಸಿ ಪರಿಶೀಲನೆ ನಡೆಸಬೇಕಾಗಿದೆ. ಒಂದು ಸುರಂಗದಲ್ಲಿ 240 ಮೀ. ಹಾಗೂ ಇನ್ನೊಂದರಲ್ಲಿ 780 ಮೀ.ನಷ್ಟು ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡೇ ಒಳಗೆ ಪ್ರವೇಶಿಸಬೇಕು.
ಒಳಗೆ ಎರಡು ಮೀಟರ್ ನಷ್ಟು ಕೆಸರು ತುಂಬಿದ್ದು, ಅಲ್ಲಿಯ ನೀರಿನಲ್ಲಿ ಹಾವು ಮತ್ತಿತರ ಜಲಚರಗಳು ತುಂಬಿವೆ ಎಂದು ಹೇಳಲಾಗಿದೆ. ತಾನು ಕರ್ನಾಟಕದ ವಿರುದ್ಧ ಮಾಡಿದ ಆರೋಪವನ್ನು ಸಾಬೀತುಗೊಳಿಸುವ ಜವಾಬ್ದಾರಿ ಗೋವಾ ಸರ್ಕಾರದ ಮೇಲಿದ್ದು, ಸ್ಥಳಕ್ಕೆ ತ್ರಿಸದಸ್ಯ ಸಮಿತಿಯ ಭೇಟಿಯೂ ಕುತೂಹಲ ಹೆಚ್ಚಿಸಿದೆ.












Click it and Unblock the Notifications