ಬೆಳಗಾವಿ : ನಿಲ್ಲದ ಮರಾಠಿ ಪುಂಡಾಟಿಕೆ, ಪ್ರದೇಶ ಪ್ರಕ್ಷುಬ್ಧ
ಬೆಳಗಾವಿ, ಜು.27 : ಎಳ್ಳೂರಿನಲ್ಲಿ ಮರಾಠಿ ಬೆಂಬಲಿತ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರಿಗೆ ಜಿಲ್ಲಾಡಳಿತ ಚುರುಕು ಮುಟ್ಟಿಸಿದ ಬೆನ್ನಲ್ಲೇ ಎಂಇಎಸ್ ಮತ್ತೆ ಪುಂಡಾಟಕ್ಕೆ ಮುಂದಾಗಿದೆ. ಎಂಇಎಸ್ ನೆಟ್ಟಿದ್ದ ನಾಮಫಲಕ ತೆರವುಗೊಂಡಿರುವುದಕ್ಕೆ ಆಕ್ರೋಶಗೊಂಡ ಎಂಇಎಸ್ ಭಾನುವಾರ ಬೆಳಗ್ಗೆ ಸಿಕ್ಕ ಸಿಕ್ಕವರ ಮೇಲೆ ಕಲ್ಲು ತೂರಾಟ ನಡೆಸಿದೆ. ಎಳ್ಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ನಿಷೇಧಾಜ್ಞೆ ಮುಂದುವರೆಸಲಾಗುವುದು ಎಂದು ಡಿಸಿ ಜಯರಾಮ್ ಹೇಳಿದ್ದಾರೆ.
ಬಡಿಗೆ ಹಿಡಿದು ಗಸ್ತು ತಿರುಗುತ್ತಿರುವ ಎಂಇಎಸ್ ಪುಂಡರು ವಿವಾದಿತ ಸ್ಥಳದ ಹತ್ತಿರ ಯಾರು ಬರದಂತೆ ಎಚ್ಚರವಹಿಸಿದ್ದಾರೆ. ಎಳ್ಳೂರು ಗ್ರಾಮದಲ್ಲಿ ಬಿಗುವಿನ ವಾತಾವರಣ ಮುಂದುವರೆದಿತ್ತು ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪತ್ರಕರ್ತರಿಗೆ ರಕ್ಷಣೆ ನೀಡಲಾಗಿದೆ ಎಂದು ಉತ್ತರವಲಯ ಐಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಳಿಸಲು ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಗಳನ್ನು ಬಳಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಎಂಇಎಸ್ ಪುಂಡರಿರುವ ಸುಮಾರು 150ಕ್ಕೂ ಅಧಿಕ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಎಲ್ಲೂರಿನ ಗ್ರಾಮ ಪಂಚಾಯತಿ ಮುಖ್ಯಸ್ಥರೊಡನೆ ಸೋಮವಾರ ಚರ್ಚೆ ನಡೆಸಲಾಗುವುದು ಎಂದು ಐಜಿಪಿ ಭಾಸ್ಕರ್ ರಾವ್ ಹೇಳಿದರು.
ಹೈಕೋರ್ಟ್ ಆದೇಶದಂತೆ ಜಿಲ್ಲಾಡಳಿತ 'ಎಳ್ಳೂರು, ಮಹಾರಾಷ್ಟ್ರ ರಾಜ್ಯ' ಎಂಬ ನಾಮಫಲಕವನ್ನು ತೆರವುಗೊಳಿಸಿತ್ತು. ಬಿಗಿ ಪೊಲೀಸ್ ಭದ್ರತೆಯಿಂದಿಗೆ 4 ಜೆಸಿಬಿಗಳ ಸಹಾಯದಿಂದ ನಾಮಫಲಕವನ್ನು ತೆರವುಗೊಳಿಸಲಾಯ್ತು. ಬೆಳಗಾವಿ ಎಸ್.ಪಿ ಚಂದ್ರಗುಪ್ತ, ಡಿಸಿ ಜಯರಾಂ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು. ಅಲ್ಲದೇ ಆ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

ನಂತರ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಪೊಲೀಸರು ಪತ್ರಕರ್ತರಿಗೆ ರಕ್ಷಣೆ ನೀಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಎಂಇಎಸ್ ಕಾರ್ಯಕರ್ತರು ಬೆಳಗಾವಿ ಬಂದ್ ಕರೆ ನೀಡುವ ಬಗ್ಗೆ ಸುದ್ದಿ ಬಂದಿದೆ. ಪುಂಡಾಟ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಕರ್ನಾಟಕ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಇಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕಾಗಿ ನಿಯೋಜನೆ ಮಾಡಿದೆ. ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಹೇಳಿದರು. [ಮರಾಠಿ ನಾಮಫಲಕ : ಎಳ್ಳೂರಲ್ಲಿ ಎಂಇಎಸ್ ಪುಂಡಾಟಿಕೆ]
ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆ ಹೀಗೇ ಮುಂದುವರಿದರೆ ಮರಾಠಿಗರೆಲ್ಲ ಬೆಳಗಾವಿ ಬಿಟ್ಟು ಹೋಗಬೇಕಾಗುತ್ತದೆ. ಎಳ್ಳೂರಿನಲ್ಲಿ ನಡೆದ ಅವಮಾನಕರ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಬೆಳಗಾವಿಗೆ ತಲುಪಿ ಪ್ರತಿಭಟನೆ ನಡೆಸುವ ಬಗ್ಗೆ ವಿವಿಧ ಕನ್ನಡ ಪರ ಸಂಘಟನೆಗಳು ಉತ್ಸುಕವಾಗಿವೆ ಎಂದು ವಾಟಾಳ್ ನಾಗರಾಜ್ ನೇತೃತ್ವದ ಬಣ ಹೇಳಿದೆ.












Click it and Unblock the Notifications