ಬೆಳಗಾವಿಯಲ್ಲಿ ಸಂಗೊಳ್ಳಿ ಉತ್ಸವ 2024; ದಿನಾಂಕ ನಿಗದಿ
ಬೆಳಗಾವಿ, ಜನವರಿ 08: ಈ ಬಾರಿಯ ಸಂಗೊಳ್ಳಿ ಉತ್ಸವವನ್ನು ಜನವರಿ 17 ಹಾಗೂ 18 ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದ್ದಾರೆ.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸ್ಮಾರಕ ಕಲ್ಯಾಣ ಮಂಟಪದಲ್ಲಿ 2024ರ ಸಂಗೊಳ್ಳಿ ರಾಯಣ್ಣ ಉತ್ಸವದ ಪೂರ್ವಭಾವಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಹಾಂತೇಶ ಕೌಜಲಗಿ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ, ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಸಂಗೊಳ್ಳಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶ ಹೊರಪೇಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ವಿದ್ಯಾವತಿ ಭಜಂತ್ರಿ ಮುಂತಾದವರು ಪಾಲ್ಗೊಂಡಿದ್ದರು.
1 ಕೋಟಿ ರೂ. ಅನುದಾನ; ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, "ಈ ಬಾರಿಯ ಉತ್ಸವಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಉತ್ಸವದ ಸಂದರ್ಭದಲ್ಲಿ ರಾಕ್ ಗಾರ್ಡನ್, ರಸ್ತೆ ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೂಡ ಉದ್ಘಾಟಿಸಲಿದ್ದಾರೆ" ಎಂದರು.
"ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಗೊಳ್ಳಿ ಸೈನಿಕ ಶಾಲೆ, ರಾಕ್ ಗಾರ್ಡನ್ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿರುತ್ತಾರೆ. ಉತ್ಸವದಲ್ಲಿ ಅವರು ಭಾಗವಹಿಸಲಿದ್ದಾರೆ. ಆದ್ದರಿಂದ ಈ ಬಾರಿ ಅಚ್ಚುಕಟ್ಟಾಗಿ ಉತ್ಸವ ಆಚರಿಸಲು ಎಲ್ಲರೂ ಸಹಕರಿಸಬೇಕು" ಎಂದು ಮಹಾಂತೇಶ ಕೌಜಲಗಿ ಹೇಳಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, "ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರ ಪ್ರಯತ್ನದ ಫಲವಾಗಿ ಈ ಬಾರಿ ಒಂದು ಕೋಟಿ ರೂಪಾಯಿ ಅನುದಾನ ಲಭಿಸಿದೆ. ಇದರಿಂದ ಹೊಸ ಹೊಸ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿದೆ" ಎಂದರು.
"ಪ್ರತಿ ವರ್ಷದಂತೆ ಅದ್ಧೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಉತ್ಸವವನ್ನು ಆಚರಿಸಲಾಗುವುದು.
ಉತ್ಸವದ ಯಶಸ್ಸಿಗಾಗಿ ಒಟ್ಟಾರೆ 13 ಉಪ ಸಮಿತಿಗಳನ್ನು ರಚಿಸಲಾಗುವುದು. ಸಮಿತಿಯಲ್ಲಿ ಹೆಸರು ನೋಂದಾಯಿಸಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗುವುದು" ಎಂದು ತಿಳಿಸಿದರು.
ಗುರುಲಿಂಗ ಶಿವಾಚಾರ್ಯ ಮಾತನಾಡಿ, "ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿದಂತೆ ಎಲ್ಲರೂ ಜಾತ್ಯಾತೀತವಾಗಿ ಗುರುತಿಸಲ್ಪಡುವಂತವರು. ಈ ಬಾರಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವುದು ಸಂತಸಕರ ಸಂಗತಿ" ಎಂದರು.
"ಉತ್ಸವದ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣನ ಕುರಿತು ಏರ್ಪಡಿಸಲಾಗುವ ವಿಚಾರ ಸಂಕಿರಣದಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು" ಎಂದು ಶಿವಾಚಾರ್ಯರು ಕರೆ ನೀಡಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಉತ್ಸವದಲ್ಲಿ ಪೌರಸನ್ಮಾನ ನೀಡಬೇಕು. ಉತ್ಸವಕ್ಕೆ ಆಗಮಿಸುವವರಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು, ಉತ್ತಮ ಕಲಾತಂಡಗಳನ್ನು ಆಹ್ವಾನಿಸಬೇಕು ಹಾಗೂ ಕುಸ್ತಿ ಸ್ಪರ್ಧೆ ಆಯೋಜಿಸಬೇಕು ಎಂದು ಜನರು ಸಲಹೆಗಳನ್ನು ನೀಡಿದರು.












Click it and Unblock the Notifications