ಬೆಳಗಾವಿಯಲ್ಲಿ ಬಿಜೆಪಿ ಸೋಲು: ಸಾಹುಕಾರ್ ರಮೇಶ್ ಜಾರಕಿಹೊಳಿ ವಿರುದ್ಧ ಮೂಲ ಬಿಜೆಪಿಗರ ಆಕ್ರೋಶ
ಬೆಳಗಾವಿ, ಮೇ. 16: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಭಾಗದ ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಒಟ್ಟು 50 ಸ್ಥಾನಗಳಲ್ಲಿ ಬಹುತೇಕ ಸ್ಥಾನಗಳನ್ನು ಕಾಂಗ್ರೆಸ್ ಬಾಚಿಕೊಂಡಿದೆ. ಹಾಗೇಯೆ ಜಿಲ್ಲೆಯ ಉಸ್ತುವಾರಿ ಹೊತ್ತು ಅತೀ ಹೆಚ್ಚು ಸ್ಥಾನ ಗೆಲ್ಲಲು ಹೊರಟಿದ್ದ ರಮೇಶ್ ಜಾರಕಿಹೊಳಿಗೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನಡೆಯಾಗಿದೆ.
ಬೆಳಗಾವಿ ಜಿಲ್ಲೆಯ ಹದಿನೆಂಟು ಕ್ಷೇತ್ರದ ಪೈಕಿ ಅತೀ ಹೆಚ್ಚು ಸ್ಥಾನ ಗೆಲ್ಲಲು ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ಸಾಕಷ್ಟು ರಣತಂತ್ರ ರೂಪಿಸಿದ್ದವು. ಆದರೆ, ಈ ಜಿಲ್ಲೆಯನ್ನು ಬಿಜೆಪಿಯ ಕೋಟೆಯನ್ನಾಗಿಯೇ ಇರಿಸಿ, ಎಲ್ಲಾ ಸ್ಥಾನಗಳನ್ನು ಗೆಲ್ಲಿಸುವ ಹೊಣೆಗಾರಿಕೆ ವಹಿಸಿಕೊಂಡಿದ್ದು ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ. ಆದರೆ, ಈ 6 ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸೋಲು ಮೂಲ ಬಿಜೆಪಿಗರಿಗೆ ದಾಳವಾಗಿದೆ.

ಮೊದಲೇ ಕಾಂಗ್ರೆಸ್ ಪಕ್ಷದಿಂದ ಬಂದು ಬೆಳಗಾವಿ ಬಿಜೆಪಿಯ ಮೇಲೆ ಹಿಡಿತ ಸಾಧಿಸುತ್ತಿವೆ ರಮೇಶ್ ಜಾರಕಿಹೊಳಿ ಬಗ್ಗೆ ಪಕ್ಷದ ಮೂಲ ಸದಸ್ಯರಲ್ಲಿ ಅಸಮಾಧಾನವಿತ್ತು. ಇದಕ್ಕೆ ಪುಷ್ಠಿ ಕೊಟ್ಟಿದೆ ಬಿಜೆಪಿ ಅಭ್ಯರ್ಥಿಗಳ ಸೋಲು. ಬಿಜೆಪಿ ಹೈಕಮಾಂಡ್ ಮನವೊಲಿಸಿ, ಸ್ಥಳೀಯ ನಾಯಕರ ವಿರೋಧದ ನಡುವೆಯೂ ರಮೇಶ್ ಜಾರಕಿಹೊಳಿ ತನ್ನ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ದರು.
ತಮ್ಮ 6 ಮಂದಿ ಆಪ್ತರಿಗೆ ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸಿ ಕಣಕ್ಕಿಳಿಸಿದ್ದರು. ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್, ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ್ ಮನ್ನೊಳ್ಕರ್, ಬೆಳಗಾವಿ ಉತ್ತರದಲ್ಲಿ ಡಾ.ರವಿ ಪಾಟೀಲ್, ಯಮಕನಮರಡಿಯಲ್ಲಿ ಬಸವರಾಜ ಹುಂದ್ರಿ, ರಾಮದುರ್ಗದಲ್ಲಿ ಚಿಕ್ಕರೇವಣ್ಣ ಅವರಿಗೆ ಟಿಕೆಟ್ ಕೊಡಿಸಿದ್ದರು. ಆದರೆ, ಈವರೆಲ್ಲಾ ಸೋಲು ಕಂಡಿದ್ದಾರೆ.

ಈ ಆರು ಜನರಲ್ಲಿ ಜನರ ಜೊತೆಗೆ ಬೆರೆಯದವರಿಗೆ, ಪಕ್ಷದ ಜೊತೆಗೆ ಉತ್ತಮ ಸಂಬಂಧ ಇಲ್ಲದವರಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿವೆ. ಇನ್ನು, ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೇ, ತಾನೂ ಬಿಜೆಪಿಯಿಂದ ಕಣಕ್ಕಿ ಇಳಿಯುವುದಿಲ್ಲ ಎಂದು ಪಕ್ಷಕ್ಕೆ ಬೆದರಿಕೆ ಕುಡ ಹಾಕಿದ್ದರು ರಮೇಶ್ ಜಾರಕಿಹೊಳಿ. ಇಷ್ಟು ಕಷ್ಟದಿಂದ ಟಿಕೆಟ್ ಕೊಡಿಸಿದ್ದರೂ ಲಕ್ಷ್ಮಣ ಸವದಿ ವಿರುದ್ಧ ಕುಮಟಳ್ಳಿ ಸೋಲು ಕಂಡಿದ್ದಾರೆ.
ಇತ್ತ ಆಪ್ತರಿಗೆ ಟಿಕೆಟ್ ಕೊಡಿಸಿ ತಾವು ಪ್ರಚಾರ ಕೂಡ ಮಾಡಿಲ್ಲ ಎಂಬುದು ಮೂಲ ಬಿಜೆಪಿಗರ ಆಕ್ರೋಶಕ್ಕೆ ಮತ್ತಷ್ಟು ಕಾರಣ ಒದಗಿಸಿದೆ. ರಮೇಶ್ ಜಾರಕಿಹೊಳಿ ನಂಬಿಕೊಂಡು ಸರಿಯಾದ ಪ್ರಚಾರ, ಪ್ಲ್ಯಾನ್ ಮಾಡದೆ ಬಿಜೆಪಿ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳೀಯ ನಾಯಕರನ್ನು ಎದುರುಹಾಕಿಕೊಂಡು ಆಪ್ತರಿಗೆ ಮನ್ನಣೆ ನೀಡಿದ್ದ ಕಾರಣ ಹಲವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂಬ ಮಾಹಿತಿಯೂ ದೊರಕಿದೆ.
ಸೋಲಿನಿಂದ ಎಚ್ಚೆತ್ತ ಮೂಲ ಬಿಜೆಪಿಗರು ರಮೇಶ್ ವಿರುದ್ದ ಇದೀಗ ಹೈಕಮಾಂಡ್ಗೆ ದೂರು ನೀಡಿದ್ದಾರಂತೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಕೇವಲ ಏಳು ಸ್ಥಾನದಲ್ಲಿ ಗೆಲ್ಲಲು 11 ಸ್ಥಾನದಲ್ಲಿ ಸೋಲಲು ನೇರವಾಗಿ ಕಾರಣ ರಮೇಶ್ ಎಂದು ಹೇಳಿದ್ದಾರೆ. ಪಕ್ಷ ಸಂಘಟನೆ ಮಾಡುವುದನ್ನ ಬಿಟ್ಟು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸುತ್ತಾ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದಾರೆ. ಮುಮದಿನ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಯಾವುದೇ ಜವಾಬ್ದಾರಿ ನೀಡಬಾರದು ಎಂದು ಮೂಲ ಬಿಜೆಪಿಗರು ಪತ್ರ ಬರೆದಿದ್ದಾರಂತೆ.
2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ 30 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಕಾಂಗ್ರೆಸ್ 17 ಸ್ಥಾನಗಳಲ್ಲಿ ಜಯ ಕಂಡಿತ್ತು. ಜೆಡಿಎಸ್ 2 ಸ್ಥಾನದಲ್ಲಿ ಗೆದ್ದಿದ್ದರೆ, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದರು. ಆದರೆ, ಈ ಬಾರಿ ಎಲ್ಲಾ ಕಡೆ ಕಾಂಗ್ರೆಸ್ ತನ್ನ ಅಚ್ಚು ಹೊತ್ತಿದೆ.












Click it and Unblock the Notifications