ನವರಾತ್ರಿಗೂ ಭಕ್ತರಿಗಿಲ್ಲ ಸವದತ್ತಿ ಯಲ್ಲಮ್ಮನ ದರ್ಶನ
ಬೆಳಗಾವಿ, ಅಕ್ಟೋಬರ್ 16: ಕೊರೊನಾದಿಂದ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಈ ಬಾರಿ ಸರಳವಾಗಿ ನವರಾತ್ರಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಅ.17ರಿಂದ 25ರವರೆಗೆ ಒಂಬತ್ತು ದಿನಗಳ ಕಾಲ ನಿತ್ಯ ಬೆಳಗ್ಗೆ ಮತ್ತು ಸಂಜೆ ರೇಣುಕಾ ದೇವಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಮತ್ತು ನೈವೇದ್ಯ ಅರ್ಪಣೆಯಾಗಲಿದೆ.
ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಅ.31ರವರೆಗೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಭಕ್ತಾದಿಗಳಿಗೆ ದೇಗುಲದಲ್ಲಿ ಪ್ರವೇಶ ನೀಡಲಾಗಿಲ್ಲ. ಭಕ್ತರು ತಮ್ಮ ಮನೆಗಳಲ್ಲೇ ದೇವಿಗೆ ಪೂಜೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಬರಬಾರದು ಎಂದು ಅವರು ಕೋರಿದ್ದಾರೆ.

ನವರಾತ್ರಿ ಉತ್ಸವದಲ್ಲಿ ಭಕ್ತರಿಗೆ ನಿರ್ಬಂಧ ಹೇರಿದ್ದು, ಪ್ರತಿಯೊಬ್ಬರೂ ಇದಕ್ಕೆ ಸಹಕರಿಸಬೇಕು ಎಂದು ವಿಧಾನಸಭೆ ಉಪಸಭಾಪತಿಯಾಗಿರುವ, ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಮಾಮನಿ ಮನವಿ ಮಾಡಿದ್ದಾರೆ. ಕೊರೊನಾ ಸೋಂಕಿನ ಭಯದ ನಡುವೆಯೂ ವಿವಿಧ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಬರುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಸವದತ್ತಿ ಹಾಗೂ ಜೋಗುಳಬಾವಿ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿದೆ.












Click it and Unblock the Notifications