ಶಾಸಕಾಂಗ ಸಭೆಯಲ್ಲಿ ಕೂಗಾಡಿದ ರಮೇಶ್ ಕುಮಾರ್
ಬೆಳಗಾವಿ, ನವೆಂಬರ್ 15 : ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ ತಿದ್ದುಪಡಿ ಕುರಿತಂತೆ ಇಂದು (ನವೆಂಬರ್ 15) ಕರೆದಿದ್ದ ಶಾಕಸಾಂಗ ಸಭೆ ಗೊಂದಲದ ಗೂಡಾಗಿದೆ. ಹಲವು ಶಾಸಕರು ವೈದ್ಯಕೀಯ ಕಾಯ್ದೆಯ ಪರ ಇದ್ದರೆ ಇನ್ನು ಕೆಲವರು ಇದಕ್ಕೆ ತೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ.
ಪಕ್ಷದ ಶಾಸಕರೇ ರಮೇಶ್ ಕುಮಾರ್ ಅವರ ಉದ್ದೇಶಿತ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ ತಿದ್ದುಪಡಿ ಕುರಿತಂತೆ ತೀರ್ವ ಅಸಮಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಚಿವ ರಮೇಶ್ ಕುಮಾರ್ ಸಿಟ್ಟುಗೊಂಡು ಸಭೆಯಲ್ಲಿ ಕೂಗಾಡಿದ್ದಾರೆ ಎನ್ನಲಾಗಿದೆ.

ಪಕ್ಷದ ಶಾಸಕರು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ಗದ್ದಲ ಸೃಷ್ಠಿಸಿದ್ದರಿಂದ ಬೇಸರಗೊಂಡು ಕೂಗಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಶಾಸಕಾಂಗ ಸಭೆಯಿಂದ ಎದ್ದು ಹೊರನಡೆದಿದ್ದಾರೆ.
ಕೆಎಂಪಿಎ ಕಾಯ್ದೆಯ ಬಗ್ಗೆ ಇಲ್ಲ ಚರ್ಚೆ ಬೇಡ ಎಂದ ಸಿ.ಎಂ. ಹಿರಿಯ ಸಚಿವರ ಜೊತೆ ಚರ್ಚೆಸಿ ನಿರ್ಣಯ ತೆಗೆದುಕೊಳ್ಳುವುದಾಗಿ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆದರು.
ಸಭೆಯಲ್ಲಿ ಕೆಎಂಪಿಎ ಕಾಯ್ದೆ ಹೊರತಾಗಿ ಸದಾಶಿವ ವರದಿ ಜಾರಿ ವಿಚಾರ, ಹಾಗೂ ಜಾತಿ ಸಮೀಕ್ಷೆ ವಿಚಾರವೂ ಕಾವೇರಿದ ಚರ್ಚೆಗೆ ಕಾರಣವಾಯಿತು.
ಕೆ.ಎಚ್.ಮುನಿಯಪ್ಪ ಮತ್ತು ಸಚಿವ ಎಚ್.ಆಂಜನೇಯ ಅವರುಗಳು ಸದಾಶಿವ ವರದಿ ಜಾರಿ ಘೋಷಣೆ ಆಗಲೇಬೇಕೆಂದು ಪಟ್ಟು ಹಿಡಿದರು. ಆದರೆ ಇದಕ್ಕೆ ನೆಲ ನರೇಂದ್ರ ಬಾಬು ಸೇರಿದಂತೆ ಕೆಲ ಬಲಫಂಥೀಯ ಶಾಸಕರು ವಿರೋಧ ವ್ಯಕ್ತಪಡಿಸಿದರು.
ಇನ್ನುಳಿದಂತೆ ಹಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಕೆಲವರು ತಮ್ಮ ಕ್ಷೇತ್ರಕ್ಕೆ ಕಡಿಮೆ ಅನುದಾನ ಕೊಟ್ಟಿದ್ದೀರೆಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಲೆಂದು ಸೇರಿದ್ದ ಶಾಸಕಾಂಗ ಸಭೆ ಗೊಂದಲದ ಗೂಡಾಗಿ ಯಾವುದೇ ಖಚಿತ ನಿರ್ಣಯಕ್ಕೆ ಬರಲು ವಿಫಲವಾಯಿತು. ಖಾಸಗಿ ವೈದ್ಯರ ಮುಷ್ಕರ ವಿಚಾರವಾಗಿ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದ ರಮೇಶ್ ಕುಮಾರ್, 'ಪ್ಲೀಸ್ ಆಸ್ಕ್ ಮೈ ಲೀಡರ್ಸ್' (ನಮ್ಮ ಮುಖಂಡರನ್ನೇ ಕೇಳಿ) ಎಂದರು.












Click it and Unblock the Notifications