KSRTC: ಮತ್ತೆ ಮರಾಠಿಗರ ಪುಂಡಾಟ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮುಖಕ್ಕೆ ಮಸಿ
ಬೆಳಗಾವಿ ಸೆಪ್ಟೆಂಬರ್ 28: ಬೆಳಗಾವಿ ಗಡಿ ಭಾಗದಲ್ಲಿ ಮಹಾರಾಷ್ಟ್ರದ ಮರಾಠಿಗರು ಮತ್ತೆ ಪುಂಡಾಟ ಮೆರೆದಿದ್ದು, ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮುಖಕ್ಕೆ ಕಪ್ಪು ಮಸಿ ಹಚ್ಚಿದ್ದಾರೆ. ಇದರಿಂದಾಗಿ ಕನ್ನಡಿಗರ ತಾಳ್ಮೆ ಕಟ್ಟೆ ಒಡೆದು ಹೋಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕನ್ನಡ ಪರ ಹೋರಾಟಗಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೌದು.. ಕಲಬುರಗಿ ವಿಭಾಗದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಚಾಲಕನ ಮುಖಕ್ಕೆ ಕಪ್ಪು ಮಸಿ ಬಳಿದು ಮಹಾರಾಷ್ಟ್ರ ಮರಾಠಿಗರು ಮತ್ತೆ ಸೊಕ್ಕು ತೋರಿದ್ದಾರೆ. ಮಂಗಳವಾರ ರಾತ್ರಿ ಆಳಂದ ಘಟಕಕ್ಕೆ ಸೇರಿದ ಬಸ್ಸನ್ನು ಪುಣೆಯ ಸ್ಟಾರ್‌ಗೇಟ್‌ದ ಓವರ್ ಬ್ರಿಜ್ ದಾಟುವ ಸಂದರ್ಭದಲ್ಲಿ ತಡೆದು ಬಸ್ ಚಾಲಕ ಸಾದಿಕ್ ಮುಲಗೆ ಪಡಸಾವಳಿ ಅವರ ಮುಖಕ್ಕೆ ಮುಸಿ ಬಳಿಯಲಾಗಿದೆ. ಜೊತೆಗೆ ಈ ಪುಂಡರು 'ಜೈ ಮಹಾರಾಷ್ಟ್ರ' ಎಂದು ಜೈಕಾರ ಕೂಗಿದ್ದಾರೆ. ಈ ಘಟನೆ ನಡೆದ ಬಳಿಕ ಕನ್ನಡಪರ ಹೋರಾಟಗಾರರು ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ.

ಕೆಲ ದಿನಗಳ ಹಿಂದೆ ಬಸ್ ಚಾಲಕ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಮರಾಠಿಗರು ಚಾಲಕನ ಮೇಲೆ ಹಲ್ಲೆ ಮಾಡಿದ್ದರು. ಈ ಕಿಚ್ಚು ಇನ್ನೂ ಕೂಡ ಆರಿಲ್ಲ. ಅದಾಗಲೇ ಮರಾಠಿಗರು ಮತ್ತೆ ಉದ್ಧಟತನ ತೋರಿದ್ದಾರೆ. ಅಲ್ಲದೆ ಮರಾಠಿಗರು ಕರ್ನಾಟಕ ಸರ್ಕಾರಕ್ಕೆ ಬೆದರಿಕೆ ಕೂಡ ಹಾಕಿದ್ದಾರೆ.
'ಜೈ ಮಹಾರಾಷ್ಟ್ರ, ಜೈ ಮರಾಠಿ' ಬರೆದು ನೀವು ಮರಾಠಿಗಳನ್ನು ಕೆಣಕಬೇಡಿ. ನಾವು ಪುಂಡರು ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ. ನಮ್ಮವರನ್ನು ಕರ್ನಾಟಕದಲ್ಲಿ ಏನಾದರೂ ಮಾಡಿದರೆ, ನಿಮ್ಮನ್ನು ಮಹಾರಾಷ್ಟ್ರದ ಒಳಗೆ ಬರಲು ಬಿಡುವುದಿಲ್ಲ. ನಿಮ್ಮ ಸರ್ಕಾರಕ್ಕೆ ಹೇಳಿ ನಮ್ಮ ಬಳಿ ಬೇಷರತ್ತಾಗಿ ಕ್ಷಮೆ ಕೇಳಿ ಎಂದು ಬಸ್ ಚಾಲಕ ಸಾದಿಕ್ ಮುಲಗೆ ಪಡಸಾವಳಿಗೆ ಬೆದರಿಕೆ ಹಾಕಿದ್ದಾರೆ.
ಇದಲ್ಲದೆ ಕರ್ನಾಟಕದ ಬಸ್ ಚಾಲಕರೊಂದಿಗೆ ವಿನಾಕಾರಣ ಜಗಳ ತೆಗೆದು ಹಲ್ಲೆ ಮಾಡುತ್ತಿರುವ ಘಟನೆ ನಡೆದಿದೆ. ಬೆಳಗಾವಿ ಹಲ್ಲೆ ನಂತರ ಮತ್ತೊಬ್ಬ ಬಸ್ ಕಂಡಕ್ಟರ್ ಹಾಗೂ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಹುಣಸಗಿ ತಾಲೂಕಿನ ಮಾಳನೂರ ಗ್ರಾಮದ ಸಮೀಪ ಶಹಾಪುರ ಡಿಪೋಗೆ ಸೇರದ ಬಸ್‌ನ ನಿರ್ವಾಹಕ ಬಸವರಾಜ ಹಾಗೂ ಚಾಲಕ ಶಿವಪ್ಪ ಮೇಲೆ ಬೈಕ್ ಸವಾರ ಏಕಾಏಕಿ ಹಲ್ಲೆ ಮಾಡಿದ್ದಾನೆ. ಇದರ ವಿರುದ್ಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.












Click it and Unblock the Notifications