ಗಡಿ ಭಾಷೆ ವಿಚಾರದಲ್ಲಿ ಕಿರಿಕ್: 'ಮಹಾ' ಅಧಿಕಾರಿಗಳಿಗೆ ಕರ್ನಾಟಕದಿಂದ ತರಬೇತಿ
ಬೆಳಗಾವಿ ಮಾರ್ಚ್ 8: ಗಡಿ ಭಾಷೆ ವಿಚಾರದಲ್ಲಿ ಯಾವಾಗಲು ಕಿರಿಕ್ ಮಾಡುವ ಮಹಾರಾಷ್ಟ್ರ ಕರ್ನಾಟಕದಿಂದ ತರಬೇತಿ ಪಡೆದುಕೊಂಡಿದೆ. 'ಮಹಾ' ಅಧಿಕಾರಿಗಳಿಗೆ ಕರ್ನಾಟಕದ ಅಧಿಕಾರಿಗಳು ತರಬೇತಿ ನೀಡಿದ್ದು ಗೊತ್ತಾಗಿದೆ. ಅಷ್ಟಕ್ಕೂ ಯಾವ ವಿಚಾರಕ್ಕೆ ತರಬೇತಿ ನೀಡಲಾಯ್ತು? ಗಡಿ ಭಾಷೆ ವಿಚಾರದಲ್ಲಿ ಗಲಾಟೆ ಮಾಡುವ ಮಹಾರಾಷ್ಟ್ರ ಕರ್ನಾಟಕಕ್ಕೆ ಸಹಾಯ ಕೋರಿದ್ದು ಯಾವ ವಿಚಾರಕ್ಕೆ ಗೊತ್ತಾ?
ಮಹಾರಾಷ್ಟ್ರ ಗಡಿ ಭಾಗದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದೆ. ಕಾಡಾನೆಗಳು ಹಿಂಡು ಹಿಂಡಾಗಿ ಆಗಮಿಸಿ ಸಾವಿರಾರು ಎಕರೆ ಭೂಪ್ರದೇಶದಲ್ಲಿ ಬೆಲೆದ ಬೆಳೆಯನ್ನು ಹಾನಿ ಮಾಡುತ್ತಿದ್ದು ಮಹಾ ಗಡಿ ಭಾಗದ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಮಹಾರಾಷ್ಟ್ರ ಸರ್ಕಾರಕ್ಕೆ ಕಾಡಾನೆಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಮಹಾರಾಷ್ಟ್ರ ಕರ್ನಾಟಕದ ಸಹಾಯ ಕೋರಿದೆ.

ಹೌದು.. ಮಹಾರಾಷ್ಟ್ರ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಕಾಡಾನೆ ಸೆರೆಗೆ ಕರ್ನಾಟಕ ಅರಣ್ಯ ಅಧಿಕಾರಿಗಳು ತರಬೇತಿ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದಲ್ಲಿ ಕಾಡಾನೆ ಅಟ್ಟಹಾಸ ಹೆಚ್ಚಾಗಿದ್ದು ಬೆಳೆ ಹಾನಿ ಪರಿಹಾರಕ್ಕೆ 28 ಕೋಟಿ ಖರ್ಚು ಮಾಡಲಾಗಿದೆ. ಮಹಾರಾಷ್ಟ್ರದ ಸಿಂಧೂದುರ್ಗದಲ್ಲಿ ಕಾಡಾನೆಯೊಂದು ಬೆಳೆ ಹಾನಿ ಮಾಡುತ್ತಿದ್ದು ಇದರ ಸೆರೆಗೆ ಸಹಾಯ ಕೋರಲಾಗಿತ್ತು. ಇದಕ್ಕೆ ಕರ್ನಾಟಕ ಅರಣ್ಯ ಅಧಿಕಾರಿಗಳು ತರಬೇತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸಿಎಫ್‌ಒ ಸುನಿತಾ ನಿಂಬುರಗಿ, 'ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ರೈತರ ಬೆಳೆ ಹಾನಿ ಮಾಡುವ ಕಾಡಾನೆಗಳ ಸೆರೆಗೆ ಸಹಾಯ ಕೋರಲಾಗಿತ್ತು. ಇದಕ್ಕಾಗಿ ನಮ್ಮ ತಂಡ ಮಹಾರಾಷ್ಟ್ರ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಿದೆ. ಆನೆಯನ್ನು ಹೇಗೆ ಟ್ರ್ಯಾಕ್ ಮಾಡಬೇಕು, ಅದರ ಚಲನವಲನ ತಿಳಿಯುವುದು ಹೇಗೆ, ಅದರ ಗುರುತುಪತ್ತೆ ಮಾಡುವುದು ಹೇಗೆ, ಅದರ ಸೆರೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಹೀಗೆ ಎಲ್ಲದರ ಬಗ್ಗೆ ತರಬೇತಿ ನೀಡಲಾಗಿದೆ' ಎಂದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗ ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ ಆಗಾಗ ಕಂಡುಬರುತ್ತದೆ. ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹನ ಮೇಲೆ ಹಲ್ಲೆ, ಚಾಲಕನ ಮುಖಕ್ಕೆ ಮಸಿ ಬಳೆಯುವುದು, ಕಲ್ಲು ತೂರಾಟ, ವಿನಾಕಾರಣ ಗಲಾಟೆ, ಸಂಚಾರ ಬಂದ್ ಮಾಡುವುದು ಇಂತೆಲ್ಲಾ ಪುಂಡಾಟಿಕೆಗಳನ್ನು ಮರಾಠಿಗರು ಮಾಡುತ್ತಲೇ ಇರುತ್ತಾರೆ.
ಕಳೆದ ತಿಂಗಳು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹನ ಮೇಲೆ ಹಲ್ಲೆ, ಚಾಲಕನ ಮುಖಕ್ಕೆ ಮಸಿ ಬಳೆಯುವ ಘಟನೆಯನ್ನು ಖಂಡಿಸಿ ಕನ್ನಡ ಪರ ಹೋರಾಟಗಾರರು ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದರು. ಮರಾಠಿಗರ ಪುಂಡಾಟಕ್ಕೆ ಬ್ರೇಕ್ ಹಾಕದಿದ್ದರೆ ದೊಡ್ಡ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ರಾಜ್ಯಾದ್ಯಂತ ಪ್ರತಿಭಟನೆ, ಹೋರಾಟದ ಬಳಿಕ ಮರಾಠಿ ಪುಂಡರ್ ಪುಂಡಾಟಿಕೆಗೆ ಬ್ರೇಕ್ ಬಿದ್ದಿದೆ.
ಇದೀಗ ಕಾಡಾನೆಯಿಂದ ಬೆಳೆ ರಕ್ಷಣೆ ಹಾಗೂ ಕಾಡಾನೆ ಸೆರೆಗೆ ಮಹಾರಾಷ್ಟ್ರ ಅರಣ್ಯ ಅಧಿಕಾರಿಗಳು ಕರ್ನಾಟಕ ಅರಣ್ಯ ಅಧಿಕಾರಿಗಳಿಗೆ ಸಹಾಯ ಕೋರಿದ್ದಾರೆ. ಅಲ್ಲದೆ ಕಾಡಾನೆ ಸೆರೆಗೆ ತರಬೇತಿಯನ್ನೂ ಪಡೆದಿದ್ದಾರೆ. ಎಷ್ಟೇ ಮೆರೆದಾಡಿದರೂ ಕೂಡ 'ಮಹಾ' ಸೊಕ್ಕು ಒಂದಲ್ಲ ಒಂದು ಕಾರಣಕ್ಕೆ ಮುರಿಯುತ್ತಲೇ ಇರುತ್ತದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.












Click it and Unblock the Notifications