Get Updates
Get notified of breaking news, exclusive insights, and must-see stories!

Congress Star Campaigner: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ತುಕಡೇ ತುಕಡೇ ಗ್ಯಾಂಗ್: ನೇರ ಆರೋಪಿಸಿದ ಅರುಣ್ ಸಿಂಗ್

2023ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ದಿನ (ಏಪ್ರಿಲ್ 20) ಮುಕ್ತಾಯವಾಗಿದ್ದು, ಇದಕ್ಕೂ ಒಂದು ದಿನದ ಮುಂಚೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬುಧವಾರ (ಏಪ್ರಿಲ್ 19)ದಂದು ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಉತ್ತರಪ್ರದೇಶದ ಗ್ಯಾಂಗ್‌ಸ್ಟರ್ ಇಮ್ರಾನ್ ಪ್ರತಾಪ್ ಗರ್ಹಿ ಮತ್ತು ನೆಹರು ವಿಶ್ವವಿದ್ಯಾಲಯದ ವಿವಾದಿತ ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರ ಹೆಸರಿದ್ದು, ಇದನ್ನು ಗಮನಿಸಿರುವ ಬಿಜೆಪಿ, 'ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ತುಕಡೇ ತುಕಡೇ ಗ್ಯಾಂಗ್ ಇದೆ' ಎಂದು ಆರೋಪಿಸಿದೆ.

 Arun Singh

ಗುರುವಾರದಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, "ದೇಶದ್ರೋಹ ಪ್ರಕರಣ, ಮಹಿಳೆಯರಿಗೆ ಅವಮಾನ ಮಾಡಿದವರು, ಗಲಭೆಕೋರರ ಜೊತೆ ಸಹಕರಿಸಿದವರು ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ," ಎಂದು ಟೀಕಿಸಿದರು.

"ದೇಶಕ್ಕೆ ಅವಮಾನ ಮಾಡಿದವರು, ಪ್ರತ್ಯೇಕತಾವಾದಿಗಳು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್ ಇಂತಹ ಕ್ರಿಮಿನಲ್‌ಗಳನ್ನು ಪೋಷಿಸುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಸೋಲಾಗುವುದು ಖಂಡಿತ," ಎಂದು ವಾಗ್ದಾಳಿ ನಡೆಸಿದರು.

"ನಮ್ಮ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನರೇಂದ್ರ ಮೋದಿ ಇದ್ದಾರೆ. ನಮ್ಮ ಪ್ರಚಾರ ಶುರುವಾದ ಮೇಲೆ ಕಾಂಗ್ರೆಸ್​ನವರು ಮನೆಗೆ ಹೋಗಲಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಎಲ್ಲಿಯೇ ಪ್ರಚಾರಕ್ಕೆ ಹೋದರೂ ಅಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ಪ್ರಧಾನಿ ಮೋದಿ ಪ್ರಚಾರ ಕೈಗೊಂಡರೆ ಬಿಜೆಪಿಗೆ ದೊಡ್ಡ ಶಕ್ತಿ ಬರಲಿದೆ," ಎಂದು ಅರುಣ್ ಸಿಂಗ್ ತಿಳಿಸಿದರು.

 Arun Singh

ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳನ್ನು ಬಿಜೆಪಿ ಪಕ್ಷ ಗೆದ್ದಿದೆ. ಗೆಲುವು ಬಿಜೆಪಿಯ ಟ್ರೆಂಡ್ ಆಗಿದ್ದರೆ, ಸೋಲು ಕಾಂಗ್ರೆಸ್‌ನ ಟ್ರೆಂಡ್ ಆಗಿದೆ. ಇದು ಕರ್ನಾಟಕದಲ್ಲಿಯೂ ಮುಂದುವರೆಯಲಿದ್ದು, ಕಾಂಗ್ರೆಸ್‌ಗೆ ಸೋಲು ಖಚಿತವೆಂದು ಅರುಣ್ ಸಿಂಗ್ ಹೇಳಿದರು.

ಬಿಜೆಪಿಯಲ್ಲಿ ಲಿಂಗಾಯತ ವ್ಯಕ್ತಿಯೇ ಸಿಎಂ ಆಗುತ್ತಾರೆ

ಬಿಜೆಪಿ ಸಿಎಂ ಅಭ್ಯರ್ಥಿ ಯಾರು ಪ್ರಶ್ನೆಗೆ ಉತ್ತರಿಸಿದ ಅರುಣ್ ಸಿಂಗ್, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು. ""ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತ ಕೇಳುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ, ಅವರೇ ನಮ್ಮ ಪ್ರಚಾರ ಸಮಿತಿ ಅಧ್ಯಕ್ಷರು,'' ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಬಂದಿದ್ದೇನೆ. ರೋಡ್ ಶೋನಲ್ಲಿ ಜನರ ಉತ್ಸಾಹ ಕಂಡು ಸಂತೋಷವಾಗಿದ್ದೇನೆ. ಬೆಳಗಾವಿ ಜಿಲ್ಲೆಯಲ್ಲಿ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದ ಅರುಣ್ ಸಿಂಗ್, ಈ ಬಾರಿ 72 ಹೊಸಮುಖಗಳಿಗೆ ಬಿಜೆಪಿ ಅವಕಾಶ ನೀಡಿದ್ದು, ಸಾಮಾನ್ಯ ಕಾರ್ಯಕರ್ತರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಮತ್ತು ಗೆಲುವು ಸಾಧಿಸಲಿದ್ದಾರೆ ಎಂದು ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

 Arun Singh

ಕಾಂಗ್ರೆಸ್ ಅವಧಿಯಲ್ಲಿ ಪಿಎಫ್‌ಐಗೆ ಸಹಕಾರ

ಕಾಂಗ್ರೆಸ್ ಪಕ್ಷದ ಅಧಿಕಾರವಧಿಯಲ್ಲಿ ಪಿಎಫ್‍ಐ ಜಾಲ ದೇಶಾದ್ಯಂತ ವ್ಯಾಪಕವಾಗಿ ಹಬ್ಬಿತ್ತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಯಲ್ಲಿ ಹೇಳಿದ್ದಾರೆ.

ಒಂದು ಧರ್ಮದ ಮತಗಳ ಓಲೈಕೆಗಾಗಿ ಕಾಂಗ್ರೆಸ್ ನಿರಂತರ ಕೆಲಸ ಮಾಡುತ್ತಿದೆ. ಓಲೈಕೆ ರಾಜಕೀಯ ಮಾಡುವುದು ಕಾಂಗ್ರೆಸ್‌ನ ಗುಣವಾಗಿದೆ ಎಂದು ಅರುಣ್ ಸಿಂಗ್ ಕಿಡಿಕಾರಿದರು.

ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷ ತೊರೆದ ವಿಚಾರವಾಗಿ ಮಾತನಾಡಿದ ಅರುಣ್ ಸಿಂಗ್, ಹಿರಿಯ ನಾಯಕರಾಗಿ ಪಕ್ಷ ತೊರೆಯುವ ಮುನ್ನ ಯೋಚನೆ ಮಾಡಬೇಕಿತ್ತು. ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸುವ ರಾಹುಲ್ ಗಾಂಧಿಯವರ ಪಕ್ಷಕ್ಕೆ ಹೋಗಿರುವುದು ದುರಾದೃಷ್ಟಕರ ವಿಷಯವೆಂದರು.

ದೇಶಾದ್ಯಂತ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದೆ. ಇಬ್ಬರು ಪಕ್ಷ ತೊರೆದರೆ, ಯಾವುದೇ ನಷ್ಟವಿಲ್ಲ. ಆದರೆ ಕೆಲವರು ಮುಳುಗುತ್ತಿರುವ ಹಡಗು ಕಾಂಗ್ರೆಸ್ ಕಡೆ ಪ್ರಯಾಣಿಸಿದ್ದಾರೆ ಎಂದು ಅರುಣ್ ಸಿಂಗ್ ಕಿಡಿಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+