Ratna Mamani Nomination Accepted: ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ
ಬೆಳಗಾವಿ, ಏಪ್ರಿಲ್ 22: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಪಕ್ಷದ ಪರವಾಗಿ ಸವದತ್ತಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ರತ್ನಾ ಮಾಮನಿ ಅವರ ನಾಮಪತ್ರ ಕೊನೆಗೂ ಪುರಸ್ಕೃತವಾಗಿದೆ.
ಏಪ್ರಿಲ್ 21 ನಾಮಪತ್ರ ಪರಿಶೀಲನೆಯ ದಿನವಾಗಿತ್ತು. ಈ ವೇಳೆ ನಾಮಪತ್ರದಲ್ಲಿ ಕೆಲವು ತಾಂತ್ರಿಕ ದೋಷಗಳನ್ನು ಎತ್ತಿ ತೋರಿಸಿದ್ದ ಕಾಂಗ್ರೆಸ್ ನಾಮಪತ್ರ ಅಂಗೀಕಾರ ಮಾಡಬಾರದೆಂದು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು.

ಹೀಗಾಗಿ, ಇಂದು (ಏಪ್ರಿಲ್ 22) ಸವದತ್ತಿ ಕ್ಷೇತ್ರದ ಚುನಾವಣಾಧಿಕಾರಿಗಳು ರತ್ನಾ ಮಾಮನಿ ಅವರನ್ನು ವಿಚಾರಣೆ ನಡೆಸಿದರು. ಆ ಬಳಿಕ ನಾಮಪತ್ರವನ್ನು ಪುರಸ್ಕರಿಸಿದರು. ರತ್ನಾ ಮಾಮನಿ ಅವರು ದಿವಂಗತ ಮಾಜಿ ಶಾಸಕ ಆನಂದ್ ಮಾಮನಿ ಅವರ ಪತ್ನಿಯಾಗಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರತ್ನಾ ಮಾಮನಿ, "ಅಧಿಕಾರಿಗಳು ನಾಮಪತ್ರ ಸ್ವೀಕರಿಸಿದ್ದಾರೆ. ಮಹಿಳೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನವರು ಕುತಂತ್ರ ಮಾಡಿದ್ದರು. ಎದುರಿಸುವುದಾದರೆ ನೇರವಾಗಿ ಎದುರಿಸಲಿ, ನಮ್ಮ ಪತಿ ನೇರ ರಾಜಕಾರಣ ಮಾಡಿದವರು. ಕ್ಷೇತ್ರದ ಜನ ನನ್ನನ್ನು ಗೆಲ್ಲಿಸುತ್ತಾರೆ," ಎಂದು ಭರವಸೆ ವ್ಯಕ್ತಪಡಿಸಿದರು.
ರತ್ನಾ ಮಾಮನಿ ಪರ ವಕೀಲ ಮಾತನಾಡಿ, "ಎದುರಾಳಿಗಳು ಸಲ್ಲಿಸಿದ್ದ ತಕರಾರು ಅರ್ಜಿಯಲ್ಲೂ ಎರಡು ತಪ್ಪುಗಳಿರುವುದನ್ನು ನಾವು ತೋರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸ್ವೀಕೃತವಾಗಿದ್ದು, ಅರ್ಜಿದಾರರು ಸಲ್ಲಿಸಿದ್ದ ತಕರಾರು ಅರ್ಜಿ ತಿರಸ್ಕೃತವಾಗಿದೆ," ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರತ್ನಾ ಮಾಮನಿ ನಾಮಪತ್ರ ಸಲ್ಲಿಸಿದ್ದರು. ಆದರೆ ಸಲ್ಲಿಸಿದ ನಾಮಪತ್ರದಲ್ಲಿ ಕೆಲವು ಲೋಪದೋಷಗಳಿವೆ ಎಂಬ ಆರೋಪ ಕೇಳಿ ಬಂದಿತ್ತು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಶ್ವಾಸ ವೈದ್ಯ ಹಾಗೂ ಆಪ್ ಪಕ್ಷದ (ಆಪ್) ಅಭ್ಯರ್ಥಿ ಬಾಪುಗೌಡ ಚುನಾವಣಾ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ ನಾಮಪತ್ರ ತಿರಸ್ಕರಿಸಬೇಕು ಎಂದು ದೂರು ನೀಡಿದ್ದರು.
ಪ್ರಕರಣವೇನು?
ಚುನಾವಣಾ ನಾಮಪತ್ರದ ಫಾರಂ ನಂಬರ್ 29ರ ನಮೂನೆ 2019ರಲ್ಲಿ ಬದಲಾವಣೆ ಮಾಡಲಾಗಿತ್ತು. ಆದರೆ 2018ರ ನಮೂನೆ ತುಂಬಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ನಾಮಪತ್ರ ಪರಿಶೀಲನೆ ಅವಧಿ ಮುಕ್ತಾಯ ಬಳಿಕ ಏ.20ರ ಸಂಜೆ 7:38ಕ್ಕೆ ಬಾಂಡ್ ಪಡೆದು ಮತ್ತೊಂದು ಅಫಿಡವಿಟ್ ಸಲ್ಲಿಸಲಾಗಿದೆ. ಇದು ಸಹ ಕಾನೂನು ಬಾಹಿರ ಎಂದು ಕಾಂಗ್ರೆಸ್, ಆಪ್ ಆರೋಪಿಸಿದ್ದವು.
ಅಂತಿಮವಾಗಿ ಚುನಾವಣಾಧಿಕಾರಿಗಳು ರತ್ನಾ ಮಾಮನಿ ಅವರ ನಾಮಪತ್ರವನ್ನು ಸ್ವೀಕರಿಸಿದ್ದು, ಚುನಾವಣೆಗೆ ಸ್ಪರ್ಧಿಸಲು ಇದ್ದ ಅಡ್ಡಿ, ಆತಂಕ ದೂರವಾಗಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನಾವಾಗಿದೆ.












Click it and Unblock the Notifications