ಬೆಳಗಾವಿ; ರಾಜಕೀಯ ಪಕ್ಷದ ಪ್ರತಿನಿಧಿಗಳ ಜೊತೆ ಡಿಸಿ ಸಭೆ
ಬೆಳಗಾವಿ, ಮಾರ್ಚ್ 31; "ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರವಾನಿಗೆ ಪಡೆಯದೇ ಯಾವುದೇ ರೀತಿಯ ಪ್ರಚಾರ ಕಾರ್ಯಕ್ರಮ ನಡೆಸುವಂತಿಲ್ಲ. ಪೋಸ್ಟರ್, ಬ್ಯಾನರ್ ಅಳವಡಿಸಲು ಹಾಗೂ ಗೋಡೆಬರಹಕ್ಕೆ ಅವಕಾಶವಿರುವುದಿಲ್ಲ. ಪ್ರಚಾರ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ವಿವಿಧ ರೀತಿಯ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು" ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಕರ್ನಾಟಕದ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಅವರು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ನಡೆಸಿದರು. ಕರ್ನಾಟಕದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದೆ. ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಗೆ ಬಂದಿದೆ.

"ಜಿಲ್ಲೆಯ 18 ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಂದೇ ಪರವಾನಿಗೆ ಅಗತ್ಯವಿದ್ದರೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ನಿಗದಿತ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರವಾನಿಗೆ ಅಗತ್ಯವಿದ್ದರೆ ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆದುಕೊಳ್ಳಬಹುದು" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹೆಸರು ಸೇರ್ಪಡೆಗೆ ಅವಕಾಶ; ಚುನಾವಣಾ ಆಯೋಗವು ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇನ್ನೂ ಅವಕಾಶವಿದ್ದು, ಏಪ್ರಿಲ್ 10ರವರೆಗೂ ಹೆಸರು ಸೇರ್ಪಡೆ ಮಾಡಬಹುದಾಗಿರುತ್ತದೆ. ಯುವ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೆ ಅನೇಕ ರೀತಿಯಲ್ಲಿ ಅಭಿಯಾನ ಕೈಗೊಳ್ಳಲಾಗಿರುತ್ತದೆ. ಅದೇ ರೀತಿ ವಿಕಲಚೇತನರ ಸೇರ್ಪಡೆಗೂ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ವಿಕಲಚೇತನರು ಮತ್ತು 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಗೆ ಬಂದಿರುವುದರಿಂದ ಸಾರ್ವಜನಿಕ ಸ್ಥಳದಲ್ಲಿರುವ ಎಲ್ಲ ಪೋಸ್ಟರ್, ಬ್ಯಾನರ್, ಗೋಡೆಬರಹಗಳನ್ನು ತೆರವುಗೊಳಿಸಬೇಕು. ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲ ತಂಡಗಳು ತಕ್ಷಣವೇ ಕಾರ್ಯಪ್ರವೃತ್ತಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ನಗದು, ಮದ್ಯ, ಉಡುಗೊರೆ ಮತ್ತಿತರ ವಸ್ತುಗಳ ಅಕ್ರಮ ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸಬೇಕು. ಈ ರೀತಿಯ ಅಕ್ರಮ ಸಾಗಾಣಿಕೆ ವೇಳೆ ವಶಪಡಿಸಿಕೊಂಡ ವಸ್ತುಗಳ ಮೇಲೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ಭಾವಚಿತ್ರಗಳಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು. ಭಾವಚಿತ್ರವಿರುವ ಅಥವಾ ಪಕ್ಷದ ಚಿಹ್ನೆ ಕಂಡುಬಂದಾಗ ಸಂಬಂಧಿಸಿದವರನ್ನೇ ಮೊದಲ ಆರೋಪಿಯನ್ನಾಗಿಸಬೇಕು. ವಾಹನ ಚಾಲಕರು ಮತ್ತಿತರ ವ್ಯಕ್ತಿಗಳನ್ನು ಎರಡು, ಮೂರನೇ ಆರೋಪಿಗಳನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಲ್ಲ ಪ್ರವಾಸಿಮಂದಿರದ ಕೊಠಡಿಗಳನ್ನು ತೆರವುಗೊಳಿಸಿ ಸಂಬಂಧಿಸಿದ ಚುನಾವಣಾಧಿಕಾರಿಗಳ ಸುಪರ್ದಿಗೆ ಪಡೆದುಕೊಳ್ಳಬೇಕು. ಅನಧಿಕೃತ ವ್ಯಕ್ತಿಗಳಿಗೆ ಅಥವಾ ಸಭೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಾದರಿ ನೀತಿಸಂಹಿತೆ ಉಲ್ಲಂಘನೆ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಅಕ್ರಮ ನಗದು, ಮದ್ಯ ಮತ್ತಿತರ ವಸ್ತುಗಳ ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಿದಷ್ಟು ಅಕ್ರಮಗಳನ್ನು ತಡೆಗಟ್ಟಲು ಅನುಕೂಲವಾಗುತ್ತದೆ. ಆದ್ದರಿಂದ ವಾಹನಗಳನ್ನು ಸಮರ್ಪಕವಾಗಿ ತಪಾಸಣೆ ಮಾಡಬೇಕು ಎಂದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು/ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಇದರಿಂದ ಅಧಿಕೃತ ಮತ್ತು ಅನಧಿಕೃತ ವ್ಯಕ್ತಿಗಳನ್ನು ಗುರುತಿಸಲು ಅನುಕೂಲವಾಗುತ್ತದೆ. ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಕಂಡುಬಂದರೆ ಚುನಾವಣಾಧಿಕಾರಿಗಳು ಕೂಡಲೇ ದೂರ ದಾಖಲಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿತ ತಂಡಗಳು ತೀವ್ರ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.












Click it and Unblock the Notifications