ಕನ್ನಡ ನಾಮಫಲಕ: ಬೆಂಗಳೂರು ಮಾದರಿಯಲ್ಲಿ ಕರ್ನಾಟಕದಾದ್ಯಂತ ಪ್ರತಿಭಟನೆ ಎಚ್ಚರಿಕೆ ನೀಡಿದ ಕರವೇ
ಬೆಳಗಾವಿ, ಫೆಬ್ರವರಿ.25: ಕರ್ನಾಟಕ - ಬೆಳಗಾವಿ ಗಡಿ ವಿವಾದದಲ್ಲಿ ಪದೇ ಪದೇ ಸುದ್ದಿಯಾಗುತ್ತಿರುವ ಬೆಳಗಾವಿಯಲ್ಲೂ ಶೇ.60ರಷ್ಟು ನಾಮಫಲಕ ಕಡ್ಡಾಯಗೊಳಿಸಬೇಕು ಎಂದು ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಶೇ.60ರಷ್ಟು ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸದಿದ್ದರೆ ಬೆಂಗಳೂರಿನಲ್ಲಿ ಆದ ಹೋರಾಟ ಬೆಳಗಾವಿಯಲ್ಲಿ ಮರುಕಳಿಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
'ಕರ್ನಾಟಕ ರಕ್ಷಣಾ ವೇದಿಕೆ' ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ, ಸೂಚನಾ ಫಲಕದಲ್ಲಿ ಶೇ.60ರಷ್ಟು ಕನ್ನಡ ಎಂಬ ನಿಯಮವನ್ನು ಅಂಗಡಿ ಮಾಲೀಕರು ಪಾಲಿಸದಿದ್ದರೆ ಬೆಂಗಳೂರು ಮಾದರಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಸರ್ಕಾರವು ವ್ಯಾಪಾರ ಮಾಲೀಕರ ಬಗ್ಗೆ ಮೃದು ಧೋರಣೆ ತೋರದೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಡಿಸೆಬರ್‌ನಲ್ಲಿ ಕನ್ನಡ ಕಾರ್ಯಕರ್ತರು ತಮ್ಮ ನಾಮಫಲಕದಲ್ಲಿ ಇಂಗ್ಲಿಷ್ ಇದೆ ಎಂಬ ಕಾರಣಕ್ಕೆ ಬೆಂಗಳೂರಿನ ಕೆಲವು ಅಂಗಡಿಗಳ ಸೈನ್‌ಬೋರ್ಡ್‌ಗಳನ್ನು ಧ್ವಂಸಗೊಳಿಸಿದ್ದರು. ಈ ವೇಳೆ ನಗರದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಬೆಂಗಳೂರು ಪೊಲೀಸರು ಗೌಡ ಮತ್ತು ಇತರ ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದರು.
ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ, 60% ಕನ್ನಡವಿರುವ ನಾಮಫಲಕಗಳನ್ನು ಅಳವಡಿಸುವ ಸರ್ಕಾರದ ಗಡುವು ಫೆಬ್ರವರಿ 28 ಕ್ಕೆ ಕೊನೆಗೊಳ್ಳಲಿದೆ. ಇದು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಅಂಗಡಿಗಳು ಈ ನಿಯಮವನ್ನು ಅನುಸರಿಸದಿದ್ದರೆ, ನಾವು ಕರ್ನಾಟಕದಾದ್ಯಂತ 'ಬೆಂಗಳೂರು ಮಾದರಿ' ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
"ಜನರಿಂದ ಮತ ಸೆಳೆಯಲು ಸರ್ಕಾರ ಕನ್ನಡದ ಬಗ್ಗೆ ಕಾಳಜಿ ತೋರಿಸುತ್ತಿದೆ. ಸ್ಥಳೀಯ ಭಾಷೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಕರ್ತವ್ಯ. ಆದರೆ, ನಮ್ಮ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ. ನಾನು ದೊಡ್ಡ ಅಪರಾಧ ಮಾಡಿದ್ದೇನೆ ಎಂದು ಅವರು ನನ್ನನ್ನು ವಾರಗಟ್ಟಲೆ ಕಂಬಿಗಳ ಹಿಂದೆ ಹಾಕಿದರು. ಕನ್ನಡದ ಹಕ್ಕುಗಳಿಗಾಗಿ ಹೋರಾಡಿದ್ದಕ್ಕಾಗಿ ನನ್ನ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ನಾರಾಯಣ ಗೌಡ ಆರೋಪಿಸಿದ್ದಾರೆ.

ಡಿಸೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆ "ರಾಜ್ಯ ಸರ್ಕಾರ ಫೆಬ್ರವರಿ 28ರೊಳಗೆ ನಾಮಫಲಕಗಳನ್ನು ಕನ್ನಡೀಕರಿಸಲು ಆದೇಶಿಸಿದೆ. ಹೀಗಾಗಿ ನಾವು ಫೆಬ್ರವರಿ 28ರ ವರೆಗೆ ಕಾಯುತ್ತೇವೆ. ಆಗಲೂ ಈ ನೆಲದ ಕಾನೂನಿಗೆ, ಈ ನೆಲದ ಭಾಷೆಗೆ ಗೌರವ ನೀಡದವರ ವಿರುದ್ಧ ನಾವು ಇನ್ನೂ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿತ್ತು.
ಇನ್ನು, ಬೆಂಗಳೂರಿನಲ್ಲಿ ಅಂಗಡಿ ಮಾಲೀಕರು ನಿಯಮ ಪಾಲಿಸದಿದ್ದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ಫೆಬ್ರವರಿ 28ರೊಳಗೆ ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಅದರಂತೆ, ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸದ ಅಂಗಡಿ ಮುಂಗಟ್ಟುಗಳನ್ನು ಕಾನೂನು ಪ್ರಕಾರ ಅಮಾನತುಗೊಳಿಸಲಾಗುವುದು ಮತ್ತು ಅವುಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಬಿಬಿಎಂಪಿ ಪ್ರಕಾರ, ನಗರದಲ್ಲಿ 1400 ಕಿಮೀ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, ಈ ರಸ್ತೆಗಳಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ಬಳಿಕ ಶೇ.60ರಷ್ಟು ಕನ್ನಡ ಭಾಷೆ ಬಳಸದ ಅಂಗಡಿಗಳಿಗೆ ನೋಟಿಸ್ ನೀಡಲಾಗುವುದು.












Click it and Unblock the Notifications