Vande Bharat: ಈ ನಿಲ್ದಾಣದಲ್ಲಿ ಕೂಡ ನಿಲ್ಲಲಿದೆ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು
ಭಾರತೀಯ ರೈಲ್ವೆಯ ವಂದೇ ಭಾರತ್ ರೈಲುಗಳ ನಿಲುಗಡೆಗೆ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚಿನ ಬೇಡಿಕೆ ಇರುವ ನಿಲ್ದಾಣಗಳಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ರೈಲ್ವೆ ಇಲಾಖೆ ಕೂಡ ಅನುಮೋದನೆ ನೀಡುತ್ತಿದೆ. ಇದೀಗ ಪುಣೆ - ಹುಬ್ಬಳ್ಳಿ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲು ಬೆಳಗಾವಿ ಜಿಲ್ಲೆಯ ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲ್ಲಲಿದ್ದು ಈ ಭಾಗದ ಪ್ರಯಾಣಿಕರಿಗೆ ಖುಷಿ ತಂದಿದೆ.
ಪುಣೆ-ಬೆಳಗಾವಿ ವಂದೇ ಭಾರತ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂದು ಸಂಸದ ಈರಣ್ಣ ಕಡಾಡಿ ಅವರ ಪ್ರಸ್ತಾವನೆ ಸಲ್ಲಿಸಿದ್ದರು. ಸಂಸದರ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಸಂಸದರ ಬೇಡಿಕೆಗೆ ರೈಲ್ವೆ ಸಚಿವಾಲಯ ಸ್ಪಂದಿಸಿರುವುದು ಈ ಭಾಗದ ರೈಲು ಪ್ರಯಾಣಿಕರ ಖುಷಿ ಹೆಚ್ಚಿಸಿದೆ.

ಹುಬ್ಬಳ್ಳಿ, ಧಾರವಾಡ, ಬೆಳಗವಾಗಿ, ಮೀರಜ್, ಕರಡ್, ಸತಾರಾ, ಸಾಂಗ್ಲಿ, ಕೊಲ್ಲಾಪುರ, ಪುಣೆಯನ್ನು ಸಂಪರ್ಕಿಸುವ ವಂದೇ ಭಾರತ್ ರೈಲು ಇದೀಗ ಘಟಪ್ರಭಾ ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ. ಹುಬ್ಬಳ್ಳಿ ಮತ್ತು ಪುಣೆ ಸೇರಿದಂತೆ ಪ್ರಮುಖ ನಗರಗಳಿಗೆ ಪ್ರಯಾಣಿಸುವ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.
ಪ್ರಾಯೋಗಿಕ ನಿಲುಗಡೆ
ಸದ್ಯ ಸಂಸದ ಈರಣ್ಣ ಕಡಾಡಿ ಅವರ ಮನವಿ ಮೇರೆಗೆ ಘಟಪ್ರಭಾ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆ ನೀಡಲಿದೆ. ಆದರೆ ಇರು ತಾತ್ಕಾಲಿಕವಾಗಿದ್ದು, ಪ್ರಾಯೋಗಿಕ ಆಧಾರದ ಮೇಲೆ ನಿಲುಗಡೆ ನೀಡಲಿದೆ. ಇಲ್ಲಿ ಟಿಕೆಟ್ ಮಾರಾಟವನ್ನು ಆಧರಿಸಿ ಬಳಿಕ ನಿಲುಗಡೆಯನ್ನು ಶಾಶ್ವತಗೊಳಿಸುವ ಅಥವಾ ರದ್ದು ಮಾಡುವ ನಿರ್ಧಾರವನ್ನು ರೈಲ್ವೆ ಇಲಾಖೆ ಮಾಡಲಿದೆ.
ಆಧುನಿಕ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡಲು ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗಿದೆ. ಪ್ರಮುಖ ನಗರಗಳ ನಡುವೆ ವೇಗದ ಸಂಪರ್ಕ ಸಾಧಿಸಲು ವಂದೇ ಭಾರತ್ ರೈಲುಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ನೀಡುತ್ತಿದೆ.
ಸದ್ಯ ಹುಬ್ಬಳ್ಳಿ - ಪುಣೆ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಹುಬ್ಬಳ್ಳಿ ಪುಣೆ ನಡುವೆ ಚೇರ್ ಕಾರ್ ಟಿಕೆಟ್ ದರ 1,295 ರೂಪಾಯಿ ಆಗಿದ್ದು, ಎಕ್ಸಿಕ್ಯುಟಿವ್ ಚೇರ್ ಕಾರ್ ದರ ಆಹಾರ ಸಹಿತ 2,290 ರೂಪಾಯಿ ಮತ್ತು ಆಹಾರ ರಹಿತ 1890 ರೂಪಾಯಿ ಆಗಿದೆ. ಹುಬ್ಬಳ್ಳಿಯಿಂದ ಪುಣೆಗೆ ಪ್ರಯಾಣಿಸುವ ಸಮಯ 8 ಗಂಟೆ 30 ನಿಮಿಷಗಳಾಗಿದೆ. ಸದ್ಯ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದು, ಹುಬ್ಬಳ್ಳಿಯಲ್ಲಿ ಬೆಳಗ್ಗೆ 5 ಗಂಟೆಗೆ ಹೊರಡುವ ರೈಲು ಮಧ್ಯಾಹ್ನ 1.30 ಗಂಟೆಗೆ ಪುಣೆ ತಲುಪುತ್ತದೆ.












Click it and Unblock the Notifications