ಮಹದಾಯಿ ಬಗ್ಗೆ ಗೋವಾ ಸಿಎಂ "ಖ್ಯಾತೆ ಟ್ವೀಟ್"ಗೆ ಪ್ರತಿಕ್ರಿಯಿಸದ ಕರ್ನಾಟಕ ಸರ್ಕಾರ-ಆಕ್ರೋಶ
ಬೆಳಗಾವಿ, ಜುಲೈ, 07: ಮಹದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಟ್ವೀಟ್ ಮೂಲಕ ಸುಖಾಸುಮ್ಮನೆ ಕಿತಾಪತಿ ಎಬ್ಬಿಸಿರುವ ಗೋವಾ ಸಿಎಂ ಸಾವಂತ್‌ಗೆ ತಿರುಗೇಟು ನೀಡುವಲ್ಲಿ ರಾಜ್ಯ ಸರ್ಕಾರ ಮೌನ ವಹಿಸಿರುವುದೇಕೆ ಎನ್ನುವ ಪ್ರಶ್ನೆಗಳು ಎದ್ದಿವೆ.
ಮಹದಾಯಿ ಟ್ರಿಬ್ಯೂನಲ್ ಶಿಫಾರಸ್ಸಿನ ಮೇರೆಗೆ ಕೇಂದ್ರದಿಂದ ನಿಯೋಜಿಸಲಾದ ಪ್ರವಾಹ ಪರಿವೀಕ್ಷಣೆ ಅಧಿಕಾರಿಗಳ ತಂಡ ಇಂದು ಗೋವಾ-ಕರ್ನಾಟಕ ಗಡಿಯ ಕಣಕುಂಬಿಯಲ್ಲಿ ಸಭೆ ನಡೆಸಿತು.
ಪ್ರವಾಹವನ್ನು ನೀರಿನ ಯೋಜನಾ ಪ್ರದೇಶಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸಲು ಸಮಿತಿ ರಚಿಸಿರುವುದು ಗಮನಾರ್ಹ.

ಆದರೆ ಗೋವಾ ಸಿಎಂ ಪ್ರಮೋದ ಸಾವಂತ್ ಟ್ವೀಟ್ ಮಾಡಿ, ಪ್ರವಾಹ ಪರಿವೀಕ್ಷಣೆಗೆ ಕರೆಸಿದ್ದಾಗಲೂ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನಿಯಮಿತ ಭೇಟಿಗಾಗಿ ಪ್ರವಾಹ ಪರಿವೀಕ್ಷಣೆ ಅಧಿಕಾರಿಗಳ ತಂಡ ಆಗಮಿಸಿದೆ ಎಂದು ಗೋವಾ ಹೇಳಿಕೊಳ್ಳುತ್ತಿದ್ದರೂ ಅದರ ಹುನ್ನಾರ ಬೇರೆಯದೇ ಆಗಿದೆ. ಗೋವಾ ಸಿಎಂ ಟ್ವೀಟ್ ಮಾಡಿ 72 ಗಂಟೆ ಕಳೆದರೂ ಕರ್ನಾಟಕ ಮಾತ್ರ ಈ ವಿಷಯದಲ್ಲಿ ಯಾಕೆ ಗಮನ ಹರಿಸಿಲ್ಲ ಎನ್ನುವುದೇ ರಾಜ್ಯದ ಜನರ ಪ್ರಶ್ನೆಯಾಗಿದೆ.
ಸರ್ಕಾರದ ಪರ ಹಿರಿಯ ಐಎಎಸ್ ಅಧಿಕಾರಿ ರಾಕೇಶ ಸಿಂಗ್ ಅವರೂ ಸಹ ಭಾಗವಹಿಸಿಲ್ಲ. ಕರ್ನಾಟಕ-ಗೋವಾ ನಡುವಿನ ಮಹದಾಯಿ ಯೋಜನಾ ಪ್ರದೇಶದಲ್ಲಿ ಸಾಮರಸ್ಯ ಮೂಡಿಸುವ ಪ್ರವಾಹ ಆಗಮಿಸಿ ಏನು ಪ್ರಯೋಜನ ಮಾಡಿ ಹೋಗಲಿದೆ ತಿಳಿದಿಲ್ಲ.
ಜಲಶಕ್ತಿ ಮಂತ್ರಾಲಯದ ಪ್ರವಾಹ ಸಮಿತಿಯ ಚೇರಮನ್ ಪಿ.ಎಂ.ಸ್ಕಾಟ್, ಸದಸ್ಯರಾದ ಮುಖ್ಯ ಅಭಿಯಂತರ ವಿರೇಂದ್ರ ಶರ್ಮಾ, ನವದೆಹಲಿಯ ಹೈಡ್ರೋಲಾಜಿ ವಿಭಾಗದ ಮುಖ್ಯ ಅಭಿಯಂತರ ಮನೋಜ್ ತಿವಾರಿ, ಮಿಲಿಂದ ನಾಯಕ, ಸುಭಾಶ್ಚಂದ್ರ ಸೇರಿ ಇತರ ಹಿರಿಯ ಅಧಿಕಾರಿಗಳು ಸಾಧಕ-ಬಾಧಕಗಳ ಚರ್ಚೆ ಯೋಜನಾ ಪ್ರದೇಶದ ಕಣಕುಂಬಿ ಬಳಿ ನಡೆಸಿದರು.
ಕರ್ನಾಟಕ ಸರ್ಕಾರದ ಮೌನ, ಗೋವಾ ಸಿಎಂ ಕಿತಾಪತಿ, ನಿಯಮಿತದ ಹೆಸರಿನಲ್ಲಿ ಆಗಮಿಸಿದ ಪ್ರವಾಹ ಸಮಿತಿಯ ಪರಿವೀಕ್ಷಣೆಗೆ ಕರ್ನಾಟಕದ ಕನ್ನಡ ಹಾಗೂ ಸಾಮಾಜಿಕ ಸಂಘಟನೆಗಳ ಆಕ್ಷೇಪ ವ್ಯಕ್ತಪಡಿಸಿವೆ. ಹಿರಿಯ ಹೋರಾಟಗಾರ ಅಶೋಕ ಚಂದರಗಿ ಕರ್ನಾಟಕ ಸರ್ಕಾರ ಮೌನ ಹಾಗೂ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ತರಾತುರಿಯ ಉದ್ಧಟತನದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications