ಪಂಚಮಸಾಲಿ ಪ್ರತಿಭಟನೆ: ಸುಮ್ ಸುಮ್ನೆ ಲಾಠಿ ಚಾರ್ಜ್ ಮಾಡಿಲ್ಲ: ಜಿ. ಪರಮೇಶ್ವರ
ಬೆಂಗಳೂರು, ಡಿಸೆಂಬರ್ 12: ಬೆಳಗಾವಿ ಅಧಿವೇಶನ ವೇಳೆ ಮೀಸಲಾತಿಗಾಗಿ ಪ್ರತಿಭಟನೆ ಮಾಡಲಾಗುವುದು ಎಂದಿದ್ದ ಪಂಚಮಸಾಲಿ ಸಮಾಜದವರು ಅಂದುಕೊಂಡಂತೆ ಹೋರಾಟ ನಡೆಸಿದ್ದಾರೆ. ಆದರೆ ಅವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಸಾಕಷ್ಟು ಚರ್ಚೆ ಆಗುತ್ತಿದೆ. 2ಎ ಮೀಸಲಾತಿ ಹೋರಾಟ ಮತ್ತೊಂದು ಹಂತಕ್ಕೆ ಹೋಗಲು ಸರ್ಕಾರ ನಡೆ ಕಾರಣವಾಯಿತು ಎನ್ನಲಾಗಿದೆ. ಪ್ರತಿಭಟನೆ, ಲಾಠಿ ಚಾರ್ಜ್ ಹಾಗೂ ಕೋರ್ಟ್ ಆದೇಶ ಉಲ್ಲಂಘಿಸಿದ್ದರ ಬಗ್ಗೆ ಗೃಹ ಸಚಿವ ಜಿ.ಪಮರೇಶ್ವರ ಅವರು ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಡಾ.ಜಿ ಪರಮೇಶ್ವರ್ ಅವರು, ಪೊಲೀಸರ ನಡೆಯನ್ನು ಸಚಿವರು ಸಮರ್ಥಿಸಿಕೊಂಡರು. ಪಂಚಮಸಾಲಿ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನಾವು ಸಚಿವರನ್ನು ಪ್ರತಿಭಟನೆ ಸ್ಥಳಕ್ಕೆ ಕಳಿಸಿದಾಗಲೂ ಅವರು ಒಪ್ಪಲಿಲ್ಲ

ಹೋರಾಟಗಾರರು ತಾವೇ ಮೊದಲು ಚಪ್ಪಲಿ ಕಲ್ಲು ಎಸೆದರು. ಸ್ವಾಮೀಜಿಗಳು ಸೇರಿದಂತೆ ಹಲವರು ಪ್ರತಿಭಟನೆ ವೇಳೆ ಕಾನೂನು ಕೈಗೆತ್ತಿಕೊಂಡರು. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಾಗಲೂ ತಡೆಯುವುದು ಅನಿವಾರ್ಯ ಆಗಿತ್ತು ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಇಂದು ಸುವರ್ಣ ಸೌಧ ಮುತ್ತಿಗೆ ಹಾಕಲು ಒಂದು ಗುಂಪಿನ ಹೋರಾಟಗಾರರಿಗೆ ಅವಕಾಶ ನೀಡಿದರೆ ನಾಳೆ ಎಲ್ಲರೂ ಮುತ್ತಿಗೆ ಹಾಕಲು ಬರುತ್ತಾರೆ. ಕೋರ್ಟ್ ತಡೆಯಾಜ್ಞೆ ಇದ್ದಾಗ ನಿಯಮಗಳನ್ನು ಪಾಲಿಸಬೇಕು. ಆದರೆ ಪಂಚಮಸಾಲಿ ಸಮುದಾಯದ ಪ್ರತಿಭಟನೆಕಾರರು, ಸ್ವಾಮೀಜಿ ಸೇರಿದಂತೆ ಎಲ್ಲರೂ ಕೋರ್ಟ್ ಆದೇಶ ಮೀರಿ ವರ್ತಿಸಿದ್ದಾರೆ.
ಸುಮ್ ಸುಮ್ಮನೆ ಲಾಠಿ ಚಾರ್ಜ್ ಮಾಡ್ತೀವಾ?
ಸುವರ್ಣ ಸೌಧ ಮುತ್ತಿಗೆಗೆ, ಹೋರಾಟದ ಘಟನಾವಳಿಗಳಿಗೆ ಯತ್ನ ಸಂಬಂಧಿಸಿದ ವಿಡಿಯೋಗಳು ನಮ್ಮ ಬಳಿ ಇವೆ. ಫೋಟೋಗಳು ನಮ್ಮ ಬಳಿ ಇವೆ. ಪೊಲೀಸರು ಸುಮ್ ಸುಮ್ಮನೆ ಲಾಠಿ ಚಾರ್ಜ್ ಮಾಡುವುದಿಲ್ಲ. ನಿಯಮ ಮೀರಿದಾಗಲೇ ನಿಯಂತ್ರಿಸಬೇಕಾಗುತ್ತದೆ ಎಂದು ಲಾಠಿ ಚಾರ್ಜ್ ಸಮರ್ಥಿಸಿಕೊಂಡಿದ್ದಾರೆ.
ಲಾಠಿ ಚಾರ್ಜ್ ಖಂಡಿಸಿ ಸರ್ಕಾರದ ವಿರುದ್ಧ ಧರಣಿ
ಸಾಕಷ್ಟು ವರ್ಷಗಳಿಂದ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಬೆಳಗಾವಿ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಹಿನ್ನೆಲೆ ಸದ್ಯ ತೀವ್ರಗೊಂಡಿದೆ. ಪ್ರವರ್ಗ 2ಎಗೆ ಸೇರ್ಪಡೆ ಮಾಡಿ ಎಂದು ಪಂಚಮಸಾಲಿ ಸಮಾಜದವರು ನಡೆಸುತ್ತಿದ್ದ ಹೋರಾಟ ವೇಳೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಹುಬ್ಬಳ್ಳಿಯ ಆರು ಕಡೆಗಳಲ್ಲಿ ಬೃಹತ್ ಪ್ರತಿಭಟನೆಗಳು ಗುರುವಾರ ನಡೆದವು.
ಪಂಚಮಸಾಲಿ ಸಮಾಜ ಪ್ರವರ್ಗ 2ಎಗೆ ಸೇರ್ಪಡೆ ಮಾಡಿ ಎಂದು ಪಂಚಮಸಾಲಿಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಲಿಂಗಾಯತ ಪಂಚಮಸಾಲಿ ಸಮುದಾಯ ಪ್ರವರ್ಗ 3ಬಿ ವರ್ಗದಲ್ಲಿದೆ. 2ಎಗೆ ತಮ್ಮನ್ನು ವರ್ಗಾಯಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.
3ಬಿ ವರ್ಗದಲ್ಲಿ ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪಂಚಮಸಾಲಿ ಯುವಕ, ಯುವತಿಯರಿಗೆ ಅನ್ಯಾಯ ಆಗುತ್ತಿದೆ ಎಂದು ಪಂಚಮಸಾಲಿ ಸಮುದಾಯದ ವಾದವಾಗಿದೆ. ಸುಮಾರು 34 ವೀರಶೈವ ಲಿಂಗಾಯತ ಒಳಪಂಗಡಗಳು ಈಗಾಗಲೇ 2ಎ ಮೀಸಲಾತಿ ಹಕ್ಕನ್ನು ಅನುಭವಿಸುತ್ತಿವೆ. ಆದರೆ ಕೃಷಿ ಪ್ರಧಾನವಾಗಿರುವ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ 2ಎ ಮೀಸಲಾತಿ ನೀಡಲೇಬೇಕು ಎಂದು ಸಮಾಜದ ಒತ್ತಾಯವಾಗಿದೆ.












Click it and Unblock the Notifications