ಬೆಳಗಾವಿ: ಕಿತ್ತೂರು ಉತ್ಸವದಲ್ಲಿ ಜನ ಮೆಚ್ಚುಗೆ ಗಳಿಸಿದ ಫಲಪುಷ್ಪ ಪ್ರದರ್ಶನ
ಬೆಳಗಾವಿ, ಅಕ್ಟೋಬರ್ 25: ತ್ಯಾಗ ಬಲಿದಾನ, ಸ್ವಾಭಿಮಾನದ ಜತೆಗೆ ಪ್ರತೀಕಾರಕ್ಕೂ ಹೆಸರಾಗಿರುವ 'ವೀರರಾಣಿ ಕಿತ್ತೂರು ಚೆನ್ನಮ್ಮ' ಸೂರ್ಯ ಮುಳುಗದ ಬ್ರಿಟೀಷ್ ಸಾಮ್ರಾಜ್ಯಕ್ಕೆ ಸೋಲುಣಿಸಿದ ಮೊದಲ ಮಹಿಳೆ. ಬ್ರಿಟಿಷರ ವಿರುದ್ಧದ ಮೊದಲ ಗೆಲುವಿನ ವಿಜಯೋತ್ಸವದ ಪ್ರತೀಕವಾಗಿ ನಡೆಯುತ್ತಿರುವ ರಾಜ್ಯಮಟ್ಟದ ಕಿತ್ತೂರು ಉತ್ಸವ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ನಾಡಿನ ಮಹನೀಯರು, ಸ್ವಾತಂತ್ರ್ಯ ಹೋರಾಟಗಾರರನ್ನು ಹಣ್ಣಿನಲ್ಲಿ, ತರಕಾರಿಯಲ್ಲಿ, ಸಿರಿಧಾನ್ಯಗಳಲ್ಲಿ ಚಿತ್ರಿಸಿ ಯುವ ಪೀಳಿಗೆಗೆ ಪರಿಚಿಯಿಸುವ ಕೆಲಸಕ್ಕೆ ಬೈಲಹೊಂಗಲ ತೋಟಗಾರಿಕೆ ಇಲಾಖೆ ಮುಂದಾಗಿದೆ. ಕಿತ್ತೂರು ಉತ್ಸವದಲ್ಲಿ ಸಿರಿಧಾನ್ಯಗಳಲ್ಲಿ ರಾಣಿ ಚನ್ನಮ್ಮಾಜಿ ಮೂರ್ತಿ ಅರಳಿದ್ದು, ತರಕಾರಿಯಲ್ಲಿ ಆಕರ್ಷಣೀಯ ಕಲಾಕೃತಿಗಳು ಚಿತ್ರಿಸಲಾಗಿದೆ.

ಪ್ರಮುಖವಾಗಿ ಸಿರಿಧಾನ್ಯಗಳಲ್ಲಿ ತಯಾರಿಸಿರುವ ವೀರರಾಣಿ ಕಿತ್ತೂರು ಚನ್ನಮ್ಮ, ಅಶ್ವಾರೂಢ ಪುತ್ಥಳಿ ಕಿತ್ತೂರು ಉತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಎಲ್ಲರ ಮನಸೂರೆಗೊಳಿಸಿದೆ. ಜರ್ಬೆರಾ, ಬಟನ್ ರೋಜ್, ಕಾರ್ನೇಶನ್ ಹೂವುಗಳಿಂದ ತಯಾರಿಸಿರುವ ಭೂಮಂಡಲ ಚಿತ್ರವು ಕೂಡ ಗಮನ ಸೆಳೆಯುತ್ತಿದೆ. ಎರಡು ಕಡೆ ಕೈಯಿಗಳಿಂದ ಭೂಮಿ ರಕ್ಷಿಸಲಾಗುತ್ತಿದ್ದು, ಭೂಮಿ ತಾಯಿ ಉಳಿಸಿದರೆ, ಆ ತಾಯಿ ನಮ್ಮನ್ನು ಉಳಿಸುತ್ತಾಳೆ ಎಂಬ ಸಂದೇಶ ನೀಡುತ್ತಿದೆ.
ಇನ್ನು ಸೇವಂತಿ, ಬಟನ್ ರೋಜ್ ಹೂವುಗಳಿಂದ ಕಪ್ ಮತ್ತು ಸಾಸರ್ ರಚಿಸಲಾಗಿದೆ. ಒಂದು ಕಪ್‌ನಲ್ಲಿ ಹಾಲು ಮತ್ತೊಂದು ಕಪ್‌ನಲ್ಲಿ ಕಾಫಿ ಸುರಿಯುವಂತೆ ತಯಾರಿಸಲಾಗಿದೆ. ಥರ್ಮಾಕೋಲ್‌ನಿಂದ ಮತ್ಸ್ಯ ಕನ್ಯೆಯ ಪ್ರತಿರೂಪ ನಿರ್ಮಿಸಲಾಗಿದ್ದು, ಸೇವಂತಿ, ಆರ್ಕಿಡ್, ಆಂಥೂರಿಯಮ್ ಹೂವುಗಳನ್ನು ಇದಕ್ಕಾಗಿ ಬಳಸಲಾಗಿದೆ. ನಮ್ಮ ಹೆಮ್ಮೆಯ ಕರ್ನಾಟಕ ಘೋಷವಾಕ್ಯದೊಂದಿಗೆ ರೋಜ್ ಬಟನ್ ಮತ್ತು ಹಳದಿ ಸೇವಂತಿ ಹೂವುಗಳಿಂದ ಕರ್ನಾಟಕದ ಭೂಪಟ ರಚನೆ ಆಕರ್ಷಣೀಯವಾಗಿವೆ.
ಮೂರು ದಿನಗಳ ಕಿತ್ತೂರು ಉತ್ಸವದ ಅಂಗವಾಗಿ ಕಿತ್ತೂರು ಕೋಟೆ ಆವರಣದಲ್ಲಿ ತೋಟಗಾರಿಕಾ ಇಲಾಖೆ ಮತ್ತು ಜಿಪಂ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನವು ಗಮನ ಸೆಳೆಯುತ್ತಿದೆ. ಸಿರಿಧಾನ್ಯಗಳಾದ ಜೋಳ, ಸಜ್ಜೆ, ನವನೆ, ರಾಗಿ, ಚನ್ನಂಗಿ ಬೇಳೆಗಳನ್ನು ಬಳಸಿಕೊಂಡು ತಯಾರಿಸಿರುವ 6.5 ಅಡಿ ಎತ್ತರದ ಅಶ್ವಾರೂಢ ಚನ್ನಮ್ಮಾಜಿ ಪುತ್ಥಳಿ ಆಕರ್ಷಣೀಯವಾಗಿದೆ. ಕಲಾವಿದ ಶಿವಲಿಂಗಪ್ಪ ಬಡಿಗೇರ ಅವರ ಕೈಯಲ್ಲಿ ಈ ಸುಂದರ ಮೂರ್ತಿ ಕೇವಲ ನಾಲ್ಕೇ ದಿನದಲ್ಲಿ ಅರಳಿದೆ.
ಅಷ್ಟೇ ಅಲ್ಲದೇ ಕಲ್ಲಂಗಡಿಯಲ್ಲಿ ಅರಳಿರುವ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಡಾ.ರಾಜಕುಮಾರ, ಡಾ. ಪುನೀತ್ ರಾಜ್‌ಕುಮಾರ, ಕಾಂತಾರ ಚಿತ್ರಗಳು ಎಲ್ಲರನ್ನೂ ಕೈ ಬೀಸಿ ಕರೆಯುತ್ತಿವೆ. ಅಲ್ಲದೇ ಕುಂಬಳಕಾಯಿಯಲ್ಲಿ ಕೆತ್ತಿದ ಗಣೇಶ ಮೂರ್ತಿ ವಿವಿಧ ಕಲಾಕೃತಿಗಳು, ಬದನೆ, ಮೂಲಂಗಿ, ಗಜ್ಜರಿ, ಸೌತೆಕಾಯಿ, ಅಲಂಕಾರಿಕ ಅಸ್ಪರಾಗಸ್ ಬಳ್ಳಿಯಿಂದ ರಚನೆಯಾದ ನವಿಲು, ಸೋರೆಕಾಯಿ ಮತ್ತು ಹಾಗಲಕಾಯಿಯಿಂದ ತಯಾರಿಸಿರುವ ಮೊಸಳೆ ಕಲಾಕೃತಿಗಳು ಕಿತ್ತೂರು ಉತ್ಸವಕ್ಕೆ ಮೆರಗು ನೀಡಿದ್ದು,ಕಿತ್ತೂರು ನಾಡಿನ ಕ್ರಾಂತಿ ಕಲಿಗಳಾದ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪನ್ನವರ ಭಾವಚಿತ್ರ ರಂಗೋಲಿಯಿಂದ ರಚಿಸಿದ್ದು ಫಲಪುಷ್ಪ ಪ್ರದರ್ಶನಕ್ಕೆ ರಂಗು ತಂದಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಹಾಯಕ ತೋಟಗಾರಿಕಾ ಅಧಿಕಾರಿ ಅಶ್ವಿನಿ ಯದ್ದಲಗುಂಡಿ, "ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿನ ಕಲಾಕೃತಿಗಳನ್ನು ನೋಡಿ ಜನ ತುಂಬಾ ಖುಷಿ ಪಡುತ್ತಿದ್ದಾರೆ" ಎಂದು ತಿಳಿಸಿದರು.












Click it and Unblock the Notifications