ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವರವಾದ 'ಗೃಹಲಕ್ಷ್ಮಿ' ಯೋಜನೆ
ಬೆಳಗಾವಿ, ನವೆಂಬರ್ 03: ಕರ್ನಾಟಕದ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ 'ಗೃಹಲಕ್ಷ್ಮಿ' ಯೋಜನೆಯೂ ಒಂದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದು ಲಕ್ಷಾಂತರ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದೆ. ಯೋಜನೆಯ ನೆರವಿನೊಂದಿಗೆ ಹಲವು ಮಹಿಳೆಯರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈಗ ಇಂತಹ ಯಶಸ್ಸಿನ ಸುದ್ದಿಯೊಂದು ಬೆಳಗಾವಿ ಜಿಲ್ಲೆಯಿಂದ ಬಂದಿದೆ.
ಬೆಳಗಾವಿ ಜಿಲ್ಲೆಯ ಕುಕಡೊಳ್ಳಿ ಗ್ರಾಮದ ತಾಯವ್ವ ಕ ಲಕಮೋಜಿ ಎಂಬ ಮಹಿಳೆ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು, ಮಿರ್ಚಿ ಮಿಕ್ಸರ್ ಮೆಷಿನ್ (ಖಾರದ ಗಿರಣಿ) ಕೊಂಡು ಹೊಸ ಉದ್ಯಮ ಆರಂಭಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳೆಗೆ ಶುಭ ಕೋರಿ, ನೂತನ ಉದ್ಯಮಕ್ಕೆ ಚಾಲನೆ ನೀಡಿದರು.

ಈ ಕುರಿತು ಪೋಸ್ಟ್ ಹಾಕಿರುವ ಸಚಿವರು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವರವಾದ 'ಗೃಹಲಕ್ಷ್ಮಿ' ಯೋಜನೆ ಎಂದು ಹೇಳಿದ್ದಾರೆ. 'ಕುಕಡೊಳ್ಳಿ ಗ್ರಾಮದ ಶ್ರೀಮತಿ ತಾಯವ್ವ ಕ ಲಕಮೋಜಿ ಎಂಬ ಮಹಿಳೆ ಗೃಹಲಕ್ಷ್ಮಿ ಹಣ ಕೂಡಿಟ್ಟು, ಮಿರ್ಚಿ ಮಿಕ್ಸರ್ ಮಷಿನ್ (ಖಾರದ ಗಿರಣಿ) ಕೊಂಡಿರುವ ಹಿನ್ನೆಲೆಯಲ್ಲಿ ಇಂದು ಮಿರ್ಚಿ ಮಿಕ್ಸರ್ ಮಷಿನ್ ನ್ನು ಉದ್ಘಾಟಿಸಿ, ಮಹಿಳೆಯ ನೂತನ ಉದ್ಯೋಗಕ್ಕೆ ಶುಭ ಕೋರಿದೆ' ಎಂದು ಸಚಿವರು ಹೇಳಿದ್ದಾರೆ.
'ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆ ಇಂದು ಲಕ್ಷಾಂತರ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೊಳಿಸಿದ್ದು, ಸಾಕಷ್ಟು ಬಡ ಕುಟುಂಬಗಳು ಗೃಹಲಕ್ಷ್ಮಿ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿರುವುದು ಸಂತಸದ ವಿಷಯ' ಎಂದು ಸಚಿವರು ಖಾರದ ಗಿರಣಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚನ್ನಬಸಯ್ಯ ಹಿರೇಮಠ್, ಬಸಯ್ಯ ಚಿಕ್ಕಮಠ್ ವೀರನಗೌಡ ಪಾಟೀಲ, ತಾಯಪ್ಪ ಮರಕಟ್ಟಿ, ಪುಂಡಲೀಕ ಬೈರೋಜಿ, ಕಲ್ಲಪ್ಪ ವಡ್ಡಿನ, ಪರಶುರಾಮ ಕುರುಬರ, ಅನ್ನಪೂರ್ಣ ಪಾಟೀಲ ಮುಂತಾದವರನ್ನು ಭೇಟಿ ಮಾಡಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ: 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಸಹ ಒಂದು. ಮಹಿಳೆಯರ ಆರ್ಥಿಕ ಸಬಲೀಕರಣ ಧ್ಯೇಯದೊಂದಿಗೆ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ. 2000ಗಳನ್ನು ನೀಡುವ ಯೋಜನೆ ಗೃಹಲಕ್ಷ್ಮಿ.
ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 27, 2023ರಂದು ಬೆಳಗಾವಿಯಲ್ಲಿ ಚಾಲನೆ ನೀಡಿದ್ದರು. ಏಕಕಾಲದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿತ್ತು. ಸರ್ಕಾರವೇ ಹೇಳುವಂತೆ ಯೋಜನೆ ಯಶಸ್ವಿಯಾಗಿದ್ದು, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಸಿಕ್ಕಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಪಡಿತರ ಚೀಟಿ ಹೊಂದಿದ ಕುಟುಂಬದ ಯಜಮಾನಿ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಮಾಸಿಕ ರೂ. 2000ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ.
ಮಹಿಳೆಯರ ಆರ್ಥಿಕ ನೆರವಿಗೆ ಗೃಹಲಕ್ಷ್ಮಿ ಗ್ಯಾರಂಟಿ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಬೆಲೆ ಏರಿಕೆ ಸಂಕಷ್ಟದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರ ಸ್ವಾವಲಂಬನೆಗಾಗಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದು, ಆಕಾಂಕ್ಷಿಗಳು ಅಗತ್ಯ ದಾಖಲೆಗಳನ್ನು ಒದಗಿಸಿ, ಅರ್ಜಿ ಸಲ್ಲಿಸಿ ಎಂದು ಅವರು ಕರೆ ನೀಡಿದ್ದರು.
ಕೆಲವು ದಿನಗಳ ಹಿಂದೆ ಹಾವೇರಿಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಗ್ಯಾರಂಟಿಯ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ ಸುದ್ದಿ ಬಂದಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿ. ಕೆ. ಶಿವಕುಮಾರ್ ಈ ಸುದ್ದಿ ತಿಳಿದು ಮನಸ್ಸಿನಲ್ಲಿ ಒಂದು ಸಾರ್ಥಕತೆಯ ಭಾವ ಮೂಡಿದೆ. ರಾಜಕೀಯ ಮಾಡಲೆಂದೇ ಎಷ್ಟೋ ಜನ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ನಾವು ಬಡವರ ಮೇಲೆ ರಾಜಕೀಯ ಮಾಡಲ್ಲ, ಬಡವರ ಬದುಕು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಅವರ ಬದುಕಿನ ಗುಣಮಟ್ಟ ಹೆಚ್ಚಿಸಿದ ಸಾರ್ಥಕತೆ ಸಾಕು ನಮಗೆ ಎಂದು ತಿಳಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಗೃಹಲಕ್ಷ್ಮಿ ಯೋಜನೆ ಯಶಸ್ಸಿನ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದರು. 'ಬಡತನದ ಕಾರಣಕ್ಕಾಗಿ ಶಿಕ್ಷಣ ವಂಚಿತರಾಗಿರುವ ಮಕ್ಕಳನ್ನು ನನ್ನ ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ, ಇಂದಿಗೂ ನಮ್ಮ ನಡುವೆ ಅಂತಹಾ ಉದಾಹರಣೆಗಳು ಸಾಕಷ್ಟು ಸಿಗಲಿವೆ. ಸ್ವತಃ ನಾನೇ ನನ್ನಿಷ್ಟದ ಕಾನೂನು ವ್ಯಾಸಂಗಕ್ಕಾಗಿ ನಡೆಸಿದ ಹೋರಾಟ ಈ ಕ್ಷಣ ನೆನಪಾಗುತ್ತಿದೆ. ಅಂದು ಯಾವುದೋ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಿ, ಕೃಷಿಯಲ್ಲಿ ತೊಡಗಿಕೊಂಡಿದ್ದರೆ ಇಂದು ಮುಖ್ಯಮಂತ್ರಿಯಾಗಿ ಕೋಟ್ಯಂತರ ಕನ್ನಡಿಗರ ಸೇವೆ ಮಾಡುವ ಭಾಗ್ಯ ನನ್ನದಾಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.
'ಬಡತನದಲ್ಲೂ ಕಲಿಕೆಯೆಡೆಗಿನ ಈ ಯುವಕನ ಹಂಬಲ ಕಂಡು ನನಗೆ ಖುಷಿಯಾಯಿತು. ಗೃಹಲಕ್ಷ್ಮಿ ಯೋಜನೆ ನಿಜವಾಗಿ ತಲುಪಬೇಕಿರುವುದು ಮತ್ತು ತಲುಪುತ್ತಿರುವುದು ಇಂತಹ ಜನರನ್ನೆ. ತನಗೆ ಬಂದ ಗೃಹಲಕ್ಷ್ಮಿಯ ಹಣವನ್ನು ಕಡುಬಡತನದಲ್ಲೂ ಕೂಡಿಟ್ಟು ಮಗನ ಶಿಕ್ಷಣಕ್ಕಾಗಿ ಕೊಟ್ಟ ಆ ತಾಯಿಯ ಪ್ರೀತಿ-ಕಾಳಜಿಗೆ ಧನ್ಯವಾದ. ಬಿ.ಇಡಿ ಶಿಕ್ಷಣ ಮುಗಿಸಿ ಶಿಕ್ಷಕನಾಗಿ ನೂರಾರು ಮಕ್ಕಳ ಬದುಕು ರೂಪಿಸುವಂತಾಗು. ಇಂದು ನೀನು ಧನ್ಯವಾದ ತಿಳಿಸಿದ್ದಕ್ಕಿಂತ ಹೆಚ್ಚು ಖುಷಿ ಅಂದು ನನಗಾಗಲಿದೆ' ಎಂದು ಯೋಜನೆ ಜನರನ್ನು ತಲುಪುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.












Click it and Unblock the Notifications