ಬೆಳಗಾವಿ: ಅಗ್ನಿ ದುರಂತ, ಕಾರ್ಮಿಕನ ದೇಹ ಮಣ್ಣಿನ ಮಡಿಕೆಯಲ್ಲಿ ಹಸ್ತಾಂತರ
ಬೆಳಗಾವಿ, ಆಗಸ್ಟ್ 09: ಬೆಳಗಾವಿಯಲ್ಲಿ ಇನ್ಸುಲೆನ್ ಟೇಪ್ ತಯಾರಿಸುವ ಸ್ನೇಹಂ ಕಾರ್ಖಾನೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ಲಿಫ್ಟ್‌ನಲ್ಲಿ ಸಿಲುಕಿದ್ದರು, ಅವರನ್ನು ರಕ್ಷಣೆ ಮಾಡುವ ಕಾರ್ಯ ವಿಫಲವಾಗಿತ್ತು. ಅವರ ದೇಹ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಅಂತಿಮ ಕಾರ್ಯಕ್ಕಾಗಿ ಶವದ ಅವಶೇಷಗಳನ್ನು ಕುಟುಂಬದವರಿಗೆ ಮಣ್ಣಿನ ಮಡಿಕೆಯಲ್ಲಿ ಹಾಕಿ ಹಸ್ತಾಂತರಿಸಲಾಗಿದೆ.
ಶಾರ್ಟ್ ಸರ್ಕಿಟ್‌ನಿಂದ ಬೆಳಗಾವಿಯ ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಸುಲೆನ್ ಟೇಪ್ ತಯಾರಿಸುವ ಸ್ನೇಹಂ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಅಗ್ನಿ ದುರಂತ ನಡೆದಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದರು. ಆದರೆ ಒಬ್ಬ ಕಾರ್ಮಿಕ ದುರಂತದಲ್ಲಿ ಸಾವನ್ನಪ್ಪಿದ್ದರು.

ಶವದ ಅವಶೇಷ ಹಸ್ತಾಂತರ: ಅಗ್ನಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ದೇಹವು ಸಂಪೂರ್ಣ ಸುಟ್ಟು ಬೂದಿಯಾಗಿತ್ತು. ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ತಂಡವು ಹಿರಿಯ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ಮೃತ ಕಾರ್ಮಿಕ ಯಲ್ಲಪ್ಪನ ದೇಹದ ಅವಶೇಷಗಳನ್ನು ಮುಂದಿನ ಕ್ರಿಯಾಕರ್ಮಗಳಿಗೆ ಅನುಕೂಲವಾಗುವಂತೆ ಸಂಪ್ರದಾಯದಂತೆ ಮಣ್ಣಿನ ಮಡಿಕೆಯಲ್ಲಿ ಹಾಕಿ ತಂದೆಯವರಿಗೆ ಹಸ್ತಾಂತರಿಸಿತು.
ಮಣ್ಣಿನ ಮಡಕೆಯಲ್ಲಿ ನೀಡಲಾಗಿದ್ದರೂ ಸಹ ಮಳೆ ಬರಬಹುದು ಎಂಬ ಕಾರಣಕ್ಕೆ ಮಡಿಕೆಯನ್ನು ಪ್ಲಾಸ್ಟಿಕ್ ಚೀಲದಲ್ಲಿಟ್ಟುಕೊಂಡು ತರಲಾಯಿತು ಎಂದು ಮೃತ ಕಾರ್ಮಿಕ ಯಲ್ಲಪ್ಪನವರ ತಂದೆ ಸ್ವತಃ ತಿಳಿಸಿರುತ್ತಾರೆ. ಶವದ ಹಸ್ತಾಂತರದಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿಗಳಿಗೆ ಈ ಮೂಲಕ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.
ಗುರುವಾರ ಬೆಳಗ್ಗೆ 6 ಗಂಟೆಗೆ ಕುಟುಂಬದ ಸದಸ್ಯರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ದುರಂತ ಘಟನೆಯ ನಡೆಯುವ ವೇಳೆ ಕಾರ್ಮಿಕ ಲಿಫ್ಟ್ ಬಳಿ ಇದ್ದ ಬಗ್ಗೆ ಸಹೋದ್ಯೋಗಿಗಳು ತಿಳಿಸಿದ್ದರು. ಆ ಪ್ರಕಾರ ಕಾರ್ಯಾಚರಣೆ ನಡೆಸಿದ ತಂಡವು ಬೆಳಗ್ಗೆ 10 ಗಂಟೆಯ ವೇಳೆಗೆ ಸುಟ್ಟು ಬೂದಿಯಾಗಿದ್ದ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ದೇಹದ ಅವಶೇಷಗಳನ್ನು ಪತ್ತೆ ಮಾಡಿತು.
ಬಳಿಕ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ಕೈಗೊಂಡು ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30 ಗಂಟೆಗೆ ಡಿಸಿಪಿ ಅವರು ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಯೇ ದೇಹದ ಅವಶೇಷಗಳನ್ನು ಮಣ್ಣಿನ ಮಡಿಕೆಯಲ್ಲಿ ನೀಡಲಾಗಿರುತ್ತದೆ ಎಂದು ಮೃತ ಕಾರ್ಮಿಕನ ತಂದೆ ಸ್ಪಷ್ಟಪಡಿಸಿರುತ್ತಾರೆ.
ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು: ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಈ ಅಗ್ನಿ ದುರಂತದಲ್ಲಿ ಮಾರುತಿ ನಾರಾಯಣ ಕರವೇಕರ, ಯಲ್ಲಪ್ಪ ಪ್ರಕಾಸ ಸಲಗುಡೆ, ರಂಜೀತ ದಶರಥ ಪಾಟೀಲ ಗಾಯಗೊಂಡಿದ್ದು, ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ಇನ್ಸುಲೆನ್ ಟೇಪ್ ತಯಾರಿಸುವ ಸ್ನೇಹಂ ಕಾರ್ಖಾನೆಯಲ್ಲಿ ಸುಮಾರು 400 ಕಾರ್ಮಿಕರು 3 ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಾರೆ. ಮಂಗಳವಾರ ರಾತ್ರಿ ಅಗ್ನಿ ದುರಂತ ನಡೆಯುವಾಗ 74 ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ಕಾರ್ಮಿಕರು ಹೊರಗೆ ಊಟಕ್ಕೆ ಬಂದಿದ್ದರು. ಲಿಫ್ಟ್‌ನಲ್ಲಿ ಶಾರ್ಟ್ ಸರ್ಕಿಟ್ ಉಂಟಾದ ಬಳಿಕ ಬೆಂಕಿ ಹೊತ್ತಿಕೊಂಡಿತ್ತು. ಎಂಟು ಕಾರ್ಮಿಕರು ಒಳಗೆ ಸಿಲುಕಿದ್ದರು.












Click it and Unblock the Notifications