Vande Bharat Express: ಹುಬ್ಬಳ್ಳಿ-ಪುಣೆ ರೈಲಿಗೆ ಮತ್ತೊಂದು ನಿಲುಗಡೆಗೆ ಬೇಡಿಕೆ
ಬೆಳಗಾವಿ, ಡಿಸೆಂಬರ್ 4: ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ನಡುವೆ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಮತ್ತೊಂದು ನಿಲುಗಡೆ ಬೇಕು ಎಂದು ಬೇಡಿಕೆ ಇಡಲಾಗಿದೆ. ಸದ್ಯ ವಾರದಲ್ಲಿ ಮೂರು ದಿನಗಳ ಕಾಲ ಈ ರೈಲು ಸಂಚಾರ ನಡೆಸುತ್ತಿದೆ. ಹುಬ್ಬಳ್ಳಿಯಿಂದ ಹೊರಡುವ ರೈಲಿಗೆ ಪ್ರಸ್ತುತ 5 ನಿಲ್ದಾಣಗಳಿವೆ. ಕೇಂದ್ರ ರೈಲ್ವೆ ಸಚಿವರಿಗೆ ಮತ್ತೊಂದು ನಿಲುಗಡೆ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ.
ರಾಜ್ಯಸಭಾ ಸದಸ್ಯ ಈರಣ್ಣ ಬಿ. ಕಡಾಡಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲಿಗೆ ಮತ್ತೊಂದು ನಿಲುಗಡೆ ನೀಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಮನವಿ ಮಾಡಿದ್ದಾರೆ. ಸಚಿವರು ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ ಎಂದು ಈರಣ್ಣ ಬಿ. ಕಡಾಡಿ ಹೇಳಿದ್ದಾರೆ.

ಎಲ್ಲಿ ರೈಲಿಗೆ ನಿಲುಗಡೆ ಬೇಕು?; ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲಿಗೆ ಘಟಪ್ರಭಾ ನಿಲ್ದಾಣದಲ್ಲಿ ನಿಲುಗಡೆ ಬೇಕು ಎಂದು ರೈಲ್ವೆ ಸಚಿವರಿಗೆ ಈರಣ್ಣ ಬಿ. ಕಡಾಡಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದಾರೆ.
'ಪುಣೆ-ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆ ಕಲ್ಪಿಸುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು' ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
'ನನ್ನ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು' ಎಂದು ಈರಣ್ಣ ಬಿ. ಕಡಾಡಿ ಹೇಳಿದ್ದಾರೆ.
ಸದ್ಯ ಈ ರೈಲು ಧಾರವಾಡ (2 ನಿಮಿಷ), ಬೆಳಗಾವಿ ( 5 ನಿಮಿಷ), ಮೀರಜ್ ಜಂಕ್ಷನ್ ( 5 ನಿಮಿಷ), ಸಾಂಗ್ಲಿ ( 2 ನಿಮಿಷ), ಸತಾರಾ (3 ನಿಮಿಷ) ನಿಲುಗಡೆಯನ್ನು ಹೊಂದಿದೆ. ಈ ರೈಲಿಗೆ ಒಂದು ಹೆಚ್ಚುವರಿ ನಿಲುಗಡೆ ನಿಲುಗಡೆ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ.
ಘಟಪ್ರಭಾ ನಿಲ್ದಾಣ ಬೆಳಗಾವಿ ಜಿಲ್ಲೆಯಲ್ಲಿದೆ. ಇದು ಬೆಳಗಾವಿ ಮತ್ತು ಮಿರಜ್ ನಡುವಿನ ಪ್ರಮುಖ ಮತ್ತು ಅತಿದೊಡ್ಡ ರೈಲು ನಿಲ್ದಾಣವಾಗಿದೆ. ಅಮೃತ್ ಭಾರತ್ ಯೋಜನೆಯಡಿ ಈ ನಿಲ್ದಾಣವನ್ನು ಆಯ್ಕೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.
ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಯೋಜನೆಯಡಿ ನಿಲ್ದಾಣದಲ್ಲಿ ಚಿಲ್ಲರೆ ಮಾರಾಟ ಮಳಿಗೆ, ಫುಡ್ ಕೋರ್ಟ್, ಪ್ರಯಾಣಿಕರ ತಂಗುದಾಣ, ವೃದ್ಧರಿಗೆ ಲಿಫ್ಟ್, ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತದೆ.
2024ರ ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ಕೊಡಲಾಗಿದೆ. ಸದ್ಯದ ವೇಳಾಪಟ್ಟಿಯಂತೆ ಹುಬ್ಬಳ್ಳಿ-ಪುಣೆ (ರೈಲು ನಂಬರ್ 20669) ವಾರದಲ್ಲಿ 3 ಬಾರಿ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಮತ್ತು ಪುಣೆ-ಹುಬ್ಬಳ್ಳಿ (ರೈಲು ನಂಬರ್ 20670) ಮೂರು ಬಾರಿ (ಗುರುವಾರ, ಶನಿವಾರ ಮತ್ತು ಸೋಮವಾರ) ಸಂಚಾರ ನಡೆಸುತ್ತಿದೆ.
ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು 557 ಕಿ. ಮೀ.ಯನ್ನು 8.5 ಗಂಟೆಗಳಲ್ಲಿ ಸಂಚಾರ ನಡೆಸುತ್ತದೆ. ಇತರ ರೈಲುಗಳಿಗೆ ಹೋಲಿಕೆ ಮಾಡಿದರೆ ಈ ರೈಲು ಸುಮಾರು 3 ತಾಸು ಪ್ರಯಾಣದ ಅವಧಿ ಉಳಿಸುತ್ತದೆ. ಈ ರೈಲು 52 ಎಕ್ಸಿಕ್ಯುಟಿವ್, 478 ಚೇರ್ ಕಾರ್ ಸೇರಿ 530 ಆಸನವನ್ನು ಹೊಂದಿದೆ.












Click it and Unblock the Notifications