ಬೆಳಗಾವಿ; ಸ್ಥಳೀಯರ ಅಸಹಕಾರ, ಸೈಕಲ್‌ನಲ್ಲಿ ಶವ ಸಾಗಣೆ
ಬೆಳಗಾವಿ, ಆಗಸ್ಟ್ 17 : 71 ವರ್ಷದ ವೃದ್ಧನ ಅಂತ್ಯಕ್ರಿಯೆಗೆ ಸ್ಥಳೀಯರು ಅಸಹಕಾರ ನೀಡಿದ ಹಿನ್ನಲೆಯಲ್ಲಿ ಸೈಕಲ್‌ನಲ್ಲಿ ಶವ ಸಾಗಣೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕೋವಿಡ್ ಭೀತಿಯ ಕಾರಣ ಜನರು ಸಹಕಾರ ನೀಡಲಿಲ್ಲ.
ಕಿತ್ತೂರು ತಾಲೂಕಿನ ಎಂ. ಕೆ. ಹುಬ್ಬಳ್ಳಿಯ ವೃದ್ಧ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದರು.
ಬಳಿಕ ವೃದ್ಧನನ್ನು ಮನೆಗೆ ವಾಪಸ್ ಕರೆದುಕೊಂಡು ಬರಲಾಗಿತ್ತು. ಭಾನುವಾರ ಮನೆಯಲ್ಲಿಯೇ ವೃದ್ಧ ಮೃತಪಟ್ಟಿದ್ದ. ಕೊರೊನಾದಿಂದಾಗಿಯೇ ವೃದ್ಧ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅಂತ್ಯಕ್ರಿಯೆಗೆ ಸಹಕಾರ ನೀಡಲಿಲ್ಲ.

ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಶವ ಸಾಗಿಸಲು ವ್ಯವಸ್ಥೆಯಾಗಲಿಲ್ಲ. ಅಂತಿಮವಾಗಿ ಸೈಕಲ್‌ನಲ್ಲಿ ಶವವನ್ನು ಇಟ್ಟುಕೊಂಡು ಸಾಗಣೆ ಮಾಡಲಾಯಿತು.
ಸೈಕಲ್‌ನಲ್ಲಿ ಶವ ಸಾಗಣೆ ಮಾಡುವ ಮಾಹಿತಿ ತಿಳಿದ ಬಳಿಕ ಪಟ್ಟಣ ಪಂಚಾಯಿತಿ ಸದಸ್ಯರಾದ ಪುಟ್ಟಪ್ಪ ಪಟ್ಟಣ ಶೆಟ್ಟಿ ವಾಹನದ ವ್ಯವಸ್ಥೆ ಮಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ 478 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 7,794.












Click it and Unblock the Notifications