ಮಳೆ ಕೊರತೆಯಿಂದಾಗಿ ಕರ್ನಾಟಕದ ಈ ಭಾಗದಲ್ಲಿ ಮೋಡ ಬಿತ್ತನೆ ಆರಂಭ, ವಿವರ ತಿಳಿಯಿರಿ
ಬೆಳಗಾವಿ, ಸೆಪ್ಟೆಂಬರ್ 30: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ನೀರಿನ ಅಭಾವ ಸೃಷ್ಟಿಯಾಗುತ್ತಿದ್ದು, ಇದಕ್ಕಾಗಿ ಮಳೆ ಸುರಿಸಲು ಬೆಳಗಾವಿಯಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಗೊಂಡಿದೆ.
ತೀವ್ರ ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಯ ರೈತರಿಗೆ ನೆರವಾಗಲು ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಶುಕ್ರವಾರ ಮೋಡ ಬಿತ್ತನೆ ಕಾರ್ಯನ್ನು ನಡೆಸಿದೆ. ಇದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ಕಾರ್ಖಾನೆಯಾಗಿದೆ ಎನ್ನಲಾಗಿದೆ.

ಬೆಳಗಾವಿ ಶುಗರ್ಸ್ ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲ್ವಿಚಾರಣೆಯಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ 3 ದಿನಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಮೋಡ ಬಿತ್ತನೆಗೆ ಮುಂದಾಗಲು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯಲು 20 ದಿನಗಳನ್ನು ತೆಗೆದುಕೊಂಡಿದ್ದೇನೆ ಎಂದು ಸತೀಶ್ ಹೇಳಿದರು.
ಶುಕ್ರವಾರ ಬೆಳಗಾವಿಯ ಗೋಕಾಕ್ ಮತ್ತು ಖಾನಾಪುರ ವಲಯದ ಆಕಾಶದಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲಾಗಿದ್ದು, ವಾರಾಂತ್ಯದಲ್ಲಿ ಜಿಲ್ಲೆಯ ಇತರ ಭಾಗಗಳಲ್ಲಿ ನಡೆಯಲಿದೆ. ಮೋಡ ಬಿತ್ತನೆ ಪ್ರತಿದಿನ ಮೂರು ಗಂಟೆಗಳ ಕಾಲ ನಡೆಯಲಿದೆ. ಮೋಡ ಬಿತ್ತನೆ ನಂತರ ಬೆಳಗಾವಿ ಜಿಲ್ಲೆಯ ಒಣ ಪ್ರದೇಶಗಳಲ್ಲಿ ಮಳೆಯಾದರೆ ಉತ್ತಮ ಎಂದು ಸತೀಶ್ ಹೇಳಿದರು.
ಈ ಮೋಡ ಬಿತ್ತನೆ ಕಾರ್ಯ ಯಶಸ್ವಿಯಾದರೆ ಹಾಗೂ ಸರ್ಕಾರದಿಂದ ಅನುಮೋದನೆ ದೊರೆತರೆ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಕಾವೇರಿ ಜಲಾನಯನ ಪ್ರದೇಶದ ಮಡಕೇರಿ ಮತ್ತು ಹಾಸನದಂತಹ ಪ್ರದೇಶಗಳಲ್ಲಿ ಮೋಡ ಬಿತ್ತನೆ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಇತ್ತೀಚೆಗೆ ಮೋಡ ಬಿತ್ತನೆ ಮಾಡಿದ ಪರಿಣಾಮ 5 ರಿಂದ 30 ಮಿ.ಮೀ ಮಳೆಯಾಗಿದೆ ಎಂದು ತಿಳಿಸಿದರು. ಈ ವಿಮಾನವನ್ನು ಕ್ಯಾಪ್ಟನ್ ವೀರೇಂದ್ರ ಸಿಂಗ್ ಮತ್ತು ಕ್ಯಾಪ್ಟನ್ ಆದರ್ಶ್ ಪಾಂಡೆ ಪೈಲಟ್ ಮಾಡಿದ್ದಾರೆ. ಕಡಿಮೆ ಎತ್ತರದಲ್ಲಿರುವ ಮೋಡಗಳನ್ನು ಬಿತ್ತನೆ ಮಾಡಲು ಸಿಎಸಿಎಲ್-2 ಅಯೋಡೈಡ್ ಅನ್ನು ಸಿಂಪಡಿಸಲಾಗುತ್ತದೆ. 20,000 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿರುವ ಮೋಡಗಳಿಗೆ ಸಿಲ್ವರ್ ಅಯೋಡೈಡ್ ಅನ್ನು ಸಿಂಪಡಿಸಲಾಗುತ್ತದೆ.
ಇದೇ ಸೆಪ್ಟೆಂಬರ್ 4ರಂದು ರಾಜ್ಯದಲ್ಲಿ ಬರಗಾಲದ ಛಾಯೆ ಹಿನ್ನಲೆಯಲ್ಲಿ ಪಿಕೆಕೆ (ಪಕ್ಷಾತೀತ ಕಾಯಕ ಕನಸು) ಸಂಸ್ಥೆಯ ವತಿಯಿಂದ ಶಾಸಕ ಪ್ರಕಾಶ ಕೋಳಿವಾಡ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯ ಮಾಡಿಸಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದರು.












Click it and Unblock the Notifications