ಕೊರೊನಾ ಸಂಕಷ್ಟದಲ್ಲಿ ಚೀನಾ ನರಿ ಬುದ್ದಿ ತೋರಿಸೋದು ಬಿಡಲಿ: ಕೇಂದ್ರ ಸಚಿವ
ಬೆಳಗಾವಿ, ಜೂನ್ 17: ಕೊರೊನಾ ವೈರಸ್ ನಿಂದಾಗಿ ಜಗತ್ತೇ ಸಂಕಷ್ಟದಲ್ಲಿರುವ ಸಮಯದಲ್ಲಿ, ಚೀನಾ ನರಿ ಬುದ್ದಿ ತೋರಿಸುವುದನ್ನು ಬಿಡಬೇಕು ಎಂದು ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಎಚ್ಚರಿಕೆ ನೀಡಿದ್ದಾರೆ.
Recommended Video
ಬೆಳಗಾವಿಯ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತ ದೇಶಕ್ಕಾಗಿ ಪ್ರಾಣ ಕೊಟ್ಟು ಹುತಾತ್ಮರಾದ ಸೈನಿಕರಿಗೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಸೈನಿಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸುರೇಶ ಅಂಗಡಿ ಮೃತಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಇಡೀ ಜಗತ್ತು ಕೊರೊನಾ ವೈರಸ್ ನಿಂದ ತತ್ತರಿಸಿದೆ, ಇದನ್ನು ಅವಕಾಶವಾಗಿ ತೆಗೆದುಕೊಂಡು ಮತ್ತೆ ಚೀನಾ ನರಿ ಬುದ್ದಿ ತೋರಿಸಿದೆ. ಭಾರತದ 20 ಸೈನಿಕರು ಹುತಾತ್ಮರಾಗಿದ್ದು, ಭಾರತೀಯ ಯೋಧರು 43 ಜನ ಚೀನಾ ಸೈನಿಕರನ್ನು ಹೊಡೆದುರುಳಿಸಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೈನ್ಯ ಸನ್ನದವಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ ಮಾಡಿದ್ದಾರೆ, ಯಾರೂ ಹೇದರುವ ಅವಶ್ಯಕತೆ ಇಲ್ಲ, ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ಎದುರಿಸುತ್ತೇವೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು.
ಜವಾಹರಲಾಲ್ ನೆಹರೂ ಕಾಲದಿಂದ ಇಲ್ಲಿಯವರೆಗೂ ಚೀನಾ ತನ್ನ ನೀಚ ಬುದ್ದಿ ಬಿಟ್ಟಿಲ್ಲ, ಇಂದಾದರೂ ಚೀನಾ ತನ್ನ ನೀಚ ಬುದ್ದಿ ಬಿಡಬೇಕೆಂದು ಚೀನಾಕ್ಕೆ ಎಚ್ಚರಿಕೆ ನೀಡಿದರು.
ಯುದ್ಧ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಪರಿಸ್ಥಿತಿ ಬಂದರೆ ಭಾರತ ಅದಕ್ಕೆ ಸನ್ನದ್ಧವಾಗಿದ್ದು, ಎಲ್ಲದಕ್ಕೂ ಭಾರತ ತಯಾರಿಯಲ್ಲಿದೆ ಎಂದರು. 1962 ರ ಪರಿಸ್ಥಿತಿ ಬೇರೆ, ಇವತ್ತಿನ ಪರಿಸ್ಥಿತಿ ಬೇರೆ ಇದೆ. 130 ಕೋಟಿ ಜನರು ನಮ್ಮ ಸೈನಿಕರ ಹಿಂದೆ ಇದ್ದಾರೆ. ಸೈನಿಕರ ಕುಟುಂಬಸ್ಥರು ಯಾರೂ ಆತಂಕಕ್ಕೊಳಗಾಗುವುದು ಬೇಡ ಎಂದರು.
ಲಡಾಖ್ ಗೆ ರೈಲು ಸಂಚಾರ ಸ್ಥಗಿತ ವಿಚಾರವನ್ನು ವಿಡಿಯೋ ಕಾನ್ಫರೆನ್ಸ್ ನಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಬೆಳಗಾವಿಯಲ್ಲಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿಕೆ ನೀಡಿದರು.












Click it and Unblock the Notifications