Jagadish Shettar:ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲುವು: ಲಕ್ಷ್ಮೀ ಪುತ್ರನಿಗೆ ಶಾಕ್
ಬೆಳಗಾವಿ, ಜೂನ್ 04: ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ ಕ್ಷೇತ್ರದಲ್ಲಿ ಬೆಳಗಾವಿಯು ಹೌದು. ಇಲ್ಲಿ ಹಲವು ಕಸರತ್ತಿನ ಬಳಿಕ ಬಿಜೆಪಿಯಿಂದ ಟಿಕೆಟ್ ಪಡೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ದಾಖಲೆ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ನೋಡಿದರೆ ಬೆಳಗಾವಿಯ ಮನೆ ಮಗನನ್ನೂ ಮತದಾರರು 'ಕೈ' ಬಿಟ್ಟಿದ್ದಾರೆ ಎಂಬುದು ಗೊತ್ತಾಗಿದೆ. ಈ ಮೂಲಕ ಬಿಜೆಪಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ವಲಸಿಗ ಎಂಬ ಪಟ್ಟದಿಂದ ಮುಕ್ತವಾಗಿದ್ದಾರೆ. ದಾಖಲೆ ಮಟ್ಟದಲ್ಲಿ ಬೆಳಗಾವಿಯಲ್ಲಿ ಅವರು ಜಯ ಗಳಿಸಿದ್ದಾರೆ.

ಬೆಳಗಾವಿಯಲ್ಲಿ ಮಧ್ಯಾಹ್ನ 12.40ರವರೆಗಿನ ಮತ ಎಣಿಕೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾರೀ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡು ಗೆದ್ದಿದ್ದಾರೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಮತ್ತು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣಕ್ಕಿಳಿದಿದ್ದರು.
ಬಿಜೆಪಿಯ ಜಗದೀಶ್ ಶೆಟ್ಟರ್ ಅವರು 302649 ಮತಗಳನ್ನು ಗಳಿಸಿದ್ದಾರೆ. ಮೃಣಾಲ್ ಹೆಬ್ಬಾಳ್ಕರ್ ಅವರು 245442 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಇನ್ನೂ ಸಂಜೆ ಹೊತ್ತಿಗೆ ಚುನಾವಣಾ ಅಧಿಕಾರಿಗಳು ಅಧಿಕೃತ ಮಾಹಿತಿ ಹೊರ ಹಾಕಲಿದ್ದಾರೆ.
ಬಿಜೆಪಿಯಲ್ಲಿ ಎಲ್ಲ ವಿಧದ ಸ್ಥಾನ ಗೌರವ ಅನುಭವಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷಾಂತರ ಹಣೆಪಟ್ಟಿ ನೀಡಲಾಗಿತ್ತು. ಅವರು ಕಣ್ಣಿಟ್ಟಿದ್ದ ಧಾರವಾಡ ಮತ್ತು ಹಾವೇರಿ ಕ್ಷೇತ್ರವು ಅವರ ಕೈತಪ್ಪಿತು. ನಂತರ ತೀವ್ರ ರೂಪದ ಕಸರತ್ತು, ದೆಹಲಿ ಭೇಟಿ ಬಳಿಕ ಶೆಟ್ಟರ್ ಬೆಳಗಾವಿ ಟಿಕೆಟ್ ಪಡೆದುಕೊಂಡರು.
ವಲಸಿಗ ಎಂಬ ಭಾವನೆ ಬಿತ್ತಿದ್ದ ಕಾಂಗ್ರೆಸ್
ಬಿಜೆಪಿ ವಿರುದ್ಧ ಕಾಂಗ್ರೆಸ್ ಸಚಿವೆಯ ಪುತ್ರನನ್ನು ಕಣಕ್ಕಿಳಿಸಿತು. ಕ್ಷೇತ್ರದ ತುಂಬೆಲ್ಲ ಓಡಾಡಿದ್ದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್, ನೀವು ಜಿಲ್ಲೆ ಏನು ಮಾಡಿಲ್ಲ? ಬೆಳಗಾವಿಗೆ ನಿಮ್ಮ ಕೊಡುಗೆ ಏನು? ಎಂದು ವಲಸಿಗ ಎಂಬ ಭಾವನೆ ಬಿತ್ತಿದ್ದರು. ಆದರೆ ಸದ್ಯ ಮತ ಎಣಿಕೆಯಲ್ಲಿ ಬೆಳಗಾವಿ ಜನರು ಬಿಜೆಪಿಗೆ ಜೈ ಎಂದಿದ್ದಾರೆ. ಜನರು ಕಾಂಗ್ರೆಸ್‌ಗೆ 'ಕೈ' ಕೊಟ್ಟು, ಬಿಜೆಪಿಗೆ ಮಣೆ ಹಾಕಿದ್ದಾರೆ.












Click it and Unblock the Notifications