ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಹಿಂದಿನ ಉದ್ದೇಶ ಸಫಲವಾಗಿದೆಯೇ: ಸೋಷಿಯಲ್ ಮೀಡಿಯಾ ಚರ್ಚೆ
ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನ ಈ ಬಾರಿಯೂ ಮತ್ತೊಂದು ಪ್ರಹಸನದಂತೆ ಮುಕ್ತಾಯವಾಗಿದೆ. ಈ ಬಾರಿ ಗೃಹಲಕ್ಷ್ಮೀ ಯೋಜನೆ ಹಾಗೂ ಸಿಎಂ ಬದಲಾವಣೆ ವಿಚಾರಗಳೇ ಗಂಭೀರವಾಗಿ ಚರ್ಚೆ ಆಗುವಂತೆ ಆಗಿದೆ. ಅಧಿವೇಶನದಲ್ಲಿ ಈ ಬಾರಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಬಗ್ಗೆ ನಡೆದಿರುವ ಚರ್ಚೆಯು ಕೇವಲ ಚರ್ಚೆಗೇ ಸೀಮಿತವಾಗಿದೆ. ಡಿಸೆಂಬರ್ 19ರಂದು ಚಳಿಗಾಲದ ಅಧಿವೇಶನವು ಮುಕ್ತಾಯವಾಗಿದೆ. ಈ ಅಧಿವೇಶನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗಂಭೀರವಾದ ಚರ್ಚೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಹಿರಂಗ ಪತ್ರವನ್ನು ಬರೆದಿದ್ದು, "ಬೆಳಗಾವಿ" ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರವಾಗಿ ಗಂಭೀರ ಚರ್ಚೆ ನಡೆದಿದೆ. ಈ ಚರ್ಚೆಯ ವಿವರ ಇಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ನೀವು ಬೆಳಗಾವಿಗೆ ಬಂದು ವಿಧಾನ ಮಂಡಲ ಅಧಿವೇಶನ ನಡೆಸಿದ್ದಕ್ಕೆ ತುಂಬಾ ಧನ್ಯವಾದಗಳು. ಆದರೆ, ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಹಿಂದಿನ ಉದ್ದೇಶ ಸಫಲವಾಗಿದೆಯೇ? ಎಂಬ ಬಗ್ಗೆ ನೀವೇ ಆತ್ಮವಲೋಕನ ಮಾಡಿಕೊಂಡರೆ ಒಳ್ಕೆಯದು ಎಂದಿದ್ದಾರೆ.
2006ರಲ್ಲಿ ತಾತ್ಕಾಲಿಕ ವ್ಯವಸ್ಥೆಯಲ್ಲಿ ನಡೆದ ಮೊದಲ ಅಧಿವೇಶನಕ್ಕೆ ಐದು ಕೋಟಿ ವೆಚ್ಚವಾದರೆ, ಈ 14ನೇ ಅಧಿವೇಶನಕ್ಕೆ 21 ಕೋಟಿ ರೂಪಾಯಿ ವೆಚ್ಚವಾಗಿದೆ. ಬೆಳಗಾವಿಯಿಂದ ಕೇವಲ 4 ಕಿ.ಮೀ ಸಮೀಪದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುವರ್ಣ ವಿಧಾನಸೌಧದ ಮತ್ತು ಸರ್ಕಿಟ್ ಹೌಸ್ ಬಿಟ್ಟು ತಾವು ಜನರ ಬಳಿ ಹೋಗಲೇ ಇಲ್ಲ. ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ವಾಣಿಜ್ಯ ಸಂಘಟನೆಗಳ ಜೊತೆಗೆ ಮಾತುಕತೆಯೂ ನಡೆಯಲೇ ಇಲ್ಲ. ಕೇವಲ ಸಚಿವರು, ಶಾಸಕರ ಜೊತೆ ಉಟೋಪಚಾರಗಳು ಮಾತ್ರ ನಡೆದವು.
ಬೆಳಗಾವಿಯ ಮೇಲಿನ ಕರ್ನಾಟಕದ ಹಕ್ಕುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸುವರ್ಣ ಸೌಧವನ್ನು ಕಟ್ಟಲಾಯಿತಾದರೂ ಅಧಿವೇಶನ ನಡೆದ ಸಂದರ್ಭದಲ್ಲಿ ನಾಡು, ನುಡಿ, ಗಡಿಯ ಬಗ್ಗೆ ಕಿಂಚಿತ್ತೂ ಚರ್ಚೆಯಾಗಲಿಲ್ಲ. ಅಧಿವೇಶನವನ್ನು ಗಡಿಭಾಗದ ಜನರು ದೂರದಲ್ಲಿಯೇ ಕುಳಿತು ಮೂಕ ಪ್ರೇಕ್ಷಕರಂತೆ ನೋಡಿದ್ದು ಒಂದು ದುರಂತವೇ ಸರಿ. ಸರ್ಕಾರ ಇಲ್ಲಿಯ ಜನರ ಬಳಿ ಬರಬೇಕಾಗಿತ್ತು. ಆದರೆ ಬರಲಿಲ್ಲ. ಜನರ ಸಮಸ್ಯೆಗಳನ್ನು ಆಲಿಸಬೇಕಾಗಿತ್ತು ಆಲಿಸಲಿಲ್ಲ. ಕನಿಷ್ಠ ಜನತಾ ದರ್ಶನವನ್ನಾದರೂ ಮಾಡಬೇಕಾಗಿತ್ತು. ಅದನ್ನು ಸಹ ಮಾಡಲಿಲ್ಲ.
ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಒಂದಿಷ್ಟು ಹಳೆಯ ನಿರ್ಧಾರಗಳಿಗೆ ಹೊಸರೂಪ ಕೊಟ್ಟಿದ್ದೀರಿ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚನೆಯ ಬಗ್ಗೆ ಏನನ್ನು ಸಹ ಹೇಳಲಿಲ್ಲ. ಸುವರ್ಣ ಸೌಧಕ್ಕೆ ಬೆಂಗಳೂರಿನ ವಿಧಾನ ಸೌಧದ ಕಚೇರಿಗಳಲ್ಲಿ ಸ್ಥಳಾಂತರದ ಬಗ್ಗೆ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬಹುದು ಎಂದು ತಿಳಿದಿದ್ದರೆ ನಮಗೆ ನಿರಾಸೆ ಬಿಟ್ಟು ಏನೂ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಲಾಗಿದೆ.
ಮುಂದಿನ ವರ್ಷ ಬೆಳಗಾವಿಯಲ್ಲಿ ನಡೆಯುವ 15ನೇ ಅಧಿವೇಶನಕ್ಕೆ ಬನ್ನಿ. ನಿಮಗೆ ಮತ್ತೊಮ್ಮೆ ಸ್ವಾಗತ ಮಾಡಿಯೇ ಮಾಡುತ್ತೇವೆ. ನಮಗೆಲ್ಲ ಮತ್ತೊಮ್ಮೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ ಊರೆಲ್ಲ ಪೋಸ್ಟರ್, ಬ್ಯಾನರ್ ಹಚ್ಚುತ್ತೇವೆ. ಉಟೋಪಚಾರವಂತೂ ಇದ್ದೇ ಇರುತ್ತದೆ. ಜನರಿಗಾಗಿ, ಜನರ ಪರವಾಗಿ, ಜನರಿಗೋಸ್ಕರ ಇರುವ ಸರ್ಕಾರ ನಿಮ್ಮ ಸರ್ಕಾರ ಇದೆಯೆಂದು ನಾವು ಭಾವಿಸಿದ್ದೇವೆ. ನೀವು ಮುಂದಿನ ವರ್ಷ ಬರುವಾಗ ಒಂದು ಬದ್ಧತೆಯಿಂದ ಸುವರ್ಣ ಸೌಧವನ್ನು ಪ್ರವೇಶ ಮಾಡುವಿರೆಂಬ ವಿಶ್ವಾಸದೊಂದಿಗೆ ಈ ಬಹಿರಂಗ ಪತ್ರವನ್ನು ಮುಗಿಸುತ್ತೇನೆ ಎಂದು ಅಶೋಕ ಚಂದರಗಿ ಪತ್ರ ಬರೆದಿದ್ದಾರೆ.
ಇದು ಕೇವಲ ಪತ್ರವಲ್ಲ ಉತ್ತರ ಕನ್ನಡ ಮತ್ತು ಬೆಳಗಾವಿ ಜನರ ಮನದ ಮಾತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications