ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ವಾಹನ ಭೀಕರ ರಸ್ತೆ ಅಪಘಾತ: ಕರ್ನಾಟಕದ 6 ಜನ ಸ್ಥಳದಲ್ಲೇ ಸಾವು
ಬೆಂಗಳೂರು, ಫೆಬ್ರವರಿ 24: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಇತ್ತೀಚೆಗೆ ಮೌನಿ ಅಮವಾಸ್ಯೆ (ಜನವರಿ 29) ವೇಳೆ ನಡೆದ ಕಾಲ್ತುಳಿತದಲ್ಲಿ ಬೆಳಗಾವಿ ನಿವಾಸಿಗಳು ಮೃತಪಟ್ಟಿದ್ದರು. ಅದರ ಬೆನ್ನಲ್ಲೆ ಜಿಲ್ಲೆಯಿಂದ ಪ್ರಯಾಗ್‌ರಾಜ್‌ಗೆ ಖಾಸಗಿ ವಾಹನದಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿಯ 06 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಯಾಗ್ ರಾಜ ಮಹಾ ಕುಂಭಮೇಳಕ್ಕೆ ತೆರಳಿ ಪುಣ್ಯ ಸ್ನಾನ ಮಾಡುವ ಹೆಬ್ಬಯಕೆಯಿಂದ ಖಾಸಗಿ ವಾಹನದಲ್ಲಿ ಭಾನುವಾರ ಈ ಜಿಲ್ಲೆಯ ಗೋಗಾಕ್‌ನ 08 ಮಂದಿ ಪ್ರಯಾಣ ಬೆಳೆಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮಧ್ಯಪ್ರದೇಶದ ಜಬಲ್ಪುರ ನ ರಸ್ತೆಯಲ್ಲಿ ತೆರಳುವಾಗಿ ಸೋಮವಾರ ಬೆಳಗ್ಗೆ 5 ಗಂಟೆಗೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ತೂಪಾನ್ ವಾಹನ (KA49M5054- ಕ್ರೂಸರ್) ನುಜ್ಜ ಗುಜ್ಜಾಗಿದೆ. ಒಗಿದ್ದವರ ಕೈ, ಕಾಲುಗಳು, ತಲೆಗೆ ತೀವ್ರ ಪೆಟ್ಟಾಗಿದೆ. ಸ್ಥಳದಲ್ಲೇ 6 ಮಂದಿ ಉಸಿರು ಚೆಲ್ಲಿದ್ದಾರೆ. ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲು. ಜಬಲ್ಪುರ ಜಿಲ್ಲೆಯ ಖಿತೌಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರು ಯಾರು? ಹೆಸರುಗಳು..
ತೂಫಾನ್ ಗಾಡಿ ಮಾಡಿಕೊಂಡು ಗೋಕಾಕ್‌ನಿಂದ ಹೊರಟ ಎಂಟು ಮಂದಿ ಪೈಕಿ ಈ ಅಪಘಾತದಲ್ಲಿ ಸ್ಥಳದಲ್ಲೇ ಬಾಲಚಂದ್ರ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27), ವಿರುಪಾಕ್ಷ ಗುಮತಿ (61) ಮೃತಪಟ್ಟಿದ್ದಾರೆ. ಇನ್ನೂ ತೀವ್ರವಾಗಿ ಗಾಯಗೊಂಡ ಮುಸ್ತಾಕ್ ಶಿಂಧಿಕುರಬೇಟ ಮತ್ತು ಸದಾಶಿವ ಉಪದಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಘಟನೆ ತಿಳಿದು ಸ್ಥಳಕ್ಕೆ ಬಂಧ ಜಬಲ್ಪುರ ಜಿಲ್ಲೆಯ ಖಿತೌಲಾ ಠಾಣೆ ಪೊಲೀಸರು ಕ್ರೇನ್ ಮೂಲಕ ವಾಹನ ಬದಿಗಿಟ್ಟು ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ವಾಹನ ಸಾರಿಗೆ ನೋಂದಣಿ ಆಧಾರದಲ್ಲಿ ಇದು ಬೆಳಗಾವಿಯದ್ದೆ ಎಂದು ತಿಳಿದು ಪೊಲೀಸರು ಬೆಳಗಾವಿ ಜಿಲ್ಲಾ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮೃತ ದೇಹಗಳನ್ನು ಜಬಲ್‌ಪುರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸಂಬಂಧಿಕರು, ಕುಟುಂಬಸ್ಥರು ಬಂದ ಬಳಿಕ ಪ್ರಕ್ರಿಯೆ ಮುಗಿಸಿ ಅವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಂಬಂಧಿಕರು, ಮೃತರ ಆಪ್ತರು ಸದ್ಯ ಮಧ್ಯಪ್ರದೇಶದ ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.
ಕಾಲ್ತುಳಿತ ಘಟನೆ: ಬೆಳಗಾವಿಯ ನಾಲ್ವರು ಸಾವು
ಇತ್ತೀಚೆಗೆ ಮೌನಿ ಅಮವಾಸ್ಯೆಯಂದು ತಡರಾತ್ರಿ ಪುಣ್ಯಸ್ನಾನದ ನಿಗದಿತ ಸಮಯದಲ್ಲಿ ಎಲ್ಲರು ಏಕಾಎಕಿ ತ್ರಿವೇಣಿ ಸಂಗಮಕ್ಕೆ ತೆರಳಿದ್ದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಲಕ್ಷಾಂತರ ಜನರು ಒಮ್ಮೆಲೆ ನೀರಿಗಿಳಿಯಲು ಮುಂದಾದ ವೇಳೆ ನೂಕು ನುಗ್ಗಲು ಉಂಟಾಗಿತ್ತು. ಆಗ ಇದೇ ಬೆಳಗಾವಿ ಜಿಲ್ಲೆಯ ತಾಯಿ, ಮಗಳು ಸೇರಿದಂತೆ ಒಟ್ಟು ನಾಲ್ಕು ಮಂದಿ ಯಾತ್ರಾರ್ಥಿಗಳು ಪ್ರಾಣ ಬಿಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ರಸ್ತೆ ಅಪಘಾತದಲ್ಲಿ ಜಿಲ್ಲೆಯ ಆರು ಮಂದಿ ಪ್ರಾಣ ಬಿಟ್ಟಿದ್ದಾರೆ.












Click it and Unblock the Notifications