ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಮುಹೂರ್ತ ನಿಗದಿ
ಬೆಳಗಾವಿ, ಸೆಪ್ಟೆಂಬರ್ 05 : ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಚುನಾವಣೆ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಪ್ರತಿಷ್ಠೆಗೆ ಕಾರಣವಾಗಿದೆ.
ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಬೇಗ ಚುನಾವಣೆ ನಡೆಸಬೇಕು ಎಂದು ಬುಧವಾರ ಸೂಚನೆ ನೀಡಿತ್ತು. ಸಂಜೆ ಬೆಳಗಾವಿ ತಹಶೀಲ್ದಾರ್ ಮಂಜುಳಾ ನಾಯಕ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು, ಸೆ.7ರಂದು ಚುನಾವಣೆ ನಡೆಯಲಿದೆ.
ಆಗಸ್ಟ್ 28ರಂದು ಪಿಎಲ್‌ಡಿ ಬ್ಯಾಂಕ್ ಚುನಾವಣೆ ನಡೆಯಬೇಕಿತ್ತು. ಸದಸ್ಯನೋರ್ವ ಕಾಣೆಯಾದ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಚುನಾವಣೆ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ಸೆ.7ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.

ಪಿಎಲ್‌ಡಿ ಬ್ಯಾಂಕ್‌ಗೆ ಈಗಾಗಲೇ 14 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಇವರಲ್ಲಿ 9 ಮಂದಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಸೇರಿದವರು. 5 ಜನರು ಸತೀಶ್ ಜಾರಕಿಹೊಳಿ ಬಣದವರು. ಎಲ್ಲಾ ಸದಸ್ಯರಿಗೆ ಭದ್ರತೆ ನೀಡುವಂತೆ ತಹಶೀಲ್ದಾರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಕಳೆದ 20 ವರ್ಷಗಳಿಂದ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಜಾರಕಿಹೊಳಿ ಕುಟುಂಬದ ವಶದಲ್ಲಿದೆ. ಈ ಬಾರಿಯ ಚುನಾವಣೆ ನಂತರ ಬ್ಯಾಂಕ್ ಹಿಡಿತ ಯಾರ ಪಾಲಾಗಲಿದೆ? ಎಂದು ಕಾದು ನೋಡಬೇಕು.
ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರಕ್ಕಾಗಿಯೇ ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿಹೊಳಿ ಸಹೋದರರ ನಡುವೆ ಅಸಮಾಧಾನ ಉಂಟಾಗಿದೆ. ಚುನಾವಣೆ ನಂತರ ಏನಾಗಲಿದೆ? ಎಂದು ಕಾದು ನೋಡಬೇಕು.












Click it and Unblock the Notifications