ವಿಶ್ವಮಟ್ಟದ ಪ್ರವಾಸಿ ತಾಣವಾಗಲಿದೆ ಬೆಳಗಾವಿ ಘಟಪ್ರಭಾ ತೀರ, ಬೃಹತ್ ಬಸವಣ್ಣ ಪ್ರತಿಮೆ ನಿರ್ಮಾಣ:CM
ಬೆಳಗಾವಿಯ ಘಟಪ್ರಭಾ ನದಿ ದಡದಲ್ಲಿ ಬೃಹತ್ ಎತ್ತರದ ಭವ್ಯ ಬಸವಣ್ಣನ ಪ್ರತಿಮೆ. ಈ ಬಗ್ಗೆ ಆದೇಶಿಸಲಾಗುವುದು. ಜೊತೆಗೆ ಅತ್ಯುತ್ತಮ ಪ್ರವಾಸಿತಾಣವನ್ನಾಗಿ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿ, ಮಾರ್ಚ್ 15: ಜಿಲ್ಲೆಯ ಘಟಪ್ರಭಾ ನದಿ ದಡದಲ್ಲಿ 108 ಅಡಿ ಎತ್ತರದ ಭವ್ಯವಾದ ಶರಣ ಬಸವಣ್ಣನವರ ಪ್ರತಿಮೆ ಸ್ಥಾಪಿಸಲಾಗುವುದು. ಈ ಬಗ್ಗೆ ಸೂಕ್ತ ಆದೇಶ ಹೊರಡಿಸುವ ಮೂಲಕ ಇಲ್ಲಿನ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿಸುವ ಉದ್ದೇಶ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ಬಸವೇಶ್ವರ ವೃತ್ತದ ಸಮೀಪದ ತಿನುಸುಕಟ್ಟೆ ಬಳಿ ಬಸವೇಶ್ವರ ಪ್ರತಿಮೆ ನಿರ್ಮಾಣದ ಕೆಲಸಕ್ಕೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜಾ ಕಾರ್ಯ ನೆರವೇರಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪಿಸಿರುವುದು ಅತ್ಯಂತ ಸಂತೋಷದ ಸಂಗತಿ. ಬಸವಣ್ಣನವರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದರು.

ಹನ್ನೆರಡನೇ ಶತಮಾನದಲ್ಲಿ ಶರಣ ಬಸವಣ್ಣನವರು ಸನ್ಮಾರ್ಗವನ್ನು ತೋರಿಸಿದರು. ವಿಶ್ವದ ಮೊದಲ ಸಂಸತ್ತು ಎಂದೇ ಕರೆಸಿಕೊಳ್ಳುವ ಅನುಭವ ಮಂಟಪವನ್ನು ಅವರು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ ಚರ್ಚಿಸಲಾಗುತ್ತಿದ್ದ ಎಲ್ಲ ವಿಷಯಗಳು ಇಂದಿನ ಸನ್ನಿವೇಶಕ್ಕು ಪ್ರಸ್ತುವಾಗಿವೆ. ಅಸಮಾನತೆ, ಲಿಂಗಭೇದ, ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ಅವರು ವಿರೋಧಿಸುತ್ತಲೇ ಬಂದರು.ಈ ವಿಷಯಗಳ ಬಗ್ಗೆ ಸಮಾಜದಲ್ಲಿ ಸ್ಪಷ್ಟತೆ ದೊರೆಯುವ ತನಕ ಬಸವಣ್ಣನವರೂ ಪ್ರಸ್ತುತರಾಗಿಯೇ ಇರುತ್ತಾರೆ. ಅಂತಹ ಮಹನೀಯರ ತತ್ವಗಳು ಮತ್ತು ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಭಾರತಕ್ಕೆ ದೇಶಕ್ಕೆ ಚರಿತ್ರೆ ಇದೆ, ಆದರೆ ಚಾರಿತ್ರ್ಯದ ಅವಶಕ್ಯತೆ ಇದೆ. ದೇಶದಲ್ಲಿ ಸಂಘರ್ಷವಿದೆ, ಸಮನ್ವಯ ಬೇಕಾಗಿದೆ. ಸಾಮಾಜಿಕ ಪರಿವರ್ತನೆ ಆಗುವಂತಹ, ವೈಚಾರಿಕವಾಗಿ ಮುನ್ನಡೆಯಲು ಬಸವ ತತ್ವಗಳು ಪ್ರೇರಣೆ ನೀಡಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಬಳಿಕ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ರಾಮದುರ್ಗ ತಾಲ್ಲೂಕಿನ ಬಟಕುರ್ಕಿ ಯಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾವೇಶ, ಅನುಷ್ಠಾನ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿದರು. ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆಗಳ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಭಯ್ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications