ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆ
ಬೆಳಗಾವಿ, ಸೆಪ್ಟೆಂಬರ್ 15: ಮೇಲ್ದರ್ಜೆಗೇರಿಸಿದ ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ವಿಮಾನಯಾನ ಸಚಿವರಾದ ಪಿ. ಅಶೋಕ ಗಜಪತಿ ರಾಜು ಗುರುವಾರ ಉದ್ಘಾಟಿಸಿದರು.
ಈ ಸಂದರ್ಭ ಮತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರತಿ 150 ಕಿಲೋಮೀಟರ್ ವ್ಯಾಪ್ತಿಗೊಂದರಂತೆ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಬೆಳಗಾವಿ ನಗರಗಳಲ್ಲಿ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಣ್ಣ ಸಣ್ಣ ನಗರಗಳಲ್ಲಿಯೂ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಕಲಬುರ್ಗಿಯ ವಿಮಾನ ನಿಲ್ದಾಣ ಕಾಮಗಾರಿ ಮುಗಿಯುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ವಿಜಯಪುರ, ಶಿವಮೊಗ್ಗ, ಹಾಸನಗಳಲ್ಲೂ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ವಿಮಾನ ನಿಲ್ದಾಣಗಳಿಗೆ ಭೂಮಿ ನೀಡುವ ರೈತರು ಹೆದರುವ ಅಗತ್ಯವಿಲ್ಲ. ಭೂ ಸ್ವಾಧೀನ ಕಾಯ್ದೆಯಡಿ ಸೂಕ್ತ ಪರಿಹಾರ ನಿಮಗೆ ನೀಡಿಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಇನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಬೇಕು ಎಂದು ಸಂಸದ ಸುರೇಶ ಅಂಗಡಿ ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗಜಪತಿ ರಾಜು, ಕರ್ನಾಟಕ ಸರಕಾರ ಶಿಫಾರಸ್ಸು ಮಾಡಿದರೆ ಅದಕ್ಕೆ ಒಪ್ಪಿಗೆ ನೀಡಲಾಗುವುದು ಎಂದರು.
ಚೆನ್ನೈ - ಬೆಳಗಾವಿ ಮಧ್ಯೆ ವಿಮಾನ ಸಂಚಾರಕ್ಕೆ ಸ್ಪೈಸ್‌ಜೆಟ್ ಸಂಸ್ಥೆ ಆಸಕ್ತಿ ತೋರಿಸಿದೆ. ಇಂಡಿಗೋ ಹಾಗೂ ಜೆಟ್ ಏರ್‌ವೇಸ್ ಸಂಸ್ಥೆಗಳು ಬೆಳಗಾವಿಗೆ ವಿಮಾನ ಸಂಚಾರ ಆರಂಭಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.












Click it and Unblock the Notifications