ಮುಡಾ ಹಗರಣ: ಸಿದ್ದರಾಮಯ್ಯ ಪರ ಜಿ.ಟಿ ದೇವೇಗೌಡ ಭರ್ಜರಿ ಬ್ಯಾಟಿಂಗ್: ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿ, ಅಕ್ಟೋಬರ್ 04: ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ನೆನ್ನೆ ಮೈಸೂರು ದಸಾರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಮಾತನಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಾಲಕಚಂದ್ರ ಜಾರಕಿಹೊಳಿ, ಅವರ ನಿಲುವು ಅವರಿಗೆ, ನಮ್ಮ ನಿಲುವು ನಮಗೆ ಎಂದು ಕಡ್ಡಿ ತುಂಡಾದಂತೆ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಹಲವು ವಿಷಯಗಳಿಗೆ ಪ್ರತಿಕ್ರಿಯಿಸಿದರು. ಶಾಸಕ ಜಿಟಿ ದೇವೇಗೌಡರು ಸಿಎಂ ಅವರನ್ನು ಹೊಗಳಿದ್ದಾರೆ. ರಾಜೀನಾಮೆ ಬಗ್ಗೆ ಮಾತನಾಡಿದ್ದರೆ. ಈ ಹಿಂದೆ ಹೈಕೋರ್ಟ್ ನಲ್ಲಿ ತನಿಖೆ ಬಗ್ಗೆ ಒಂದು ಮಾತು ಬಂದರೂ ಸಾಕು ರಾಜೀನಾಮೆ ಕೊಡಲಾಗುತ್ತಿತ್ತು. ಒಂದು ರೈಲು ಬಿದ್ದರೂ ರಾಜೀನಾಮೆ ನೀಡುತ್ತಿದ್ದರು.

ಈಗ ಯಾರು ನೈತಿಕತೆ ಹೊತ್ತು ರಾಜೀನಾಮೆ ಕೊಡುತ್ತಿಲ್ಲ ಎಂದರು.
ಮುಖ್ಯಮಂತ್ರಿ ಪ್ರಕರಣದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ರಾಜೀನಾಮೆ ಕೊಡುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ. ಅವರಿಗೂ ದೇವರಿಗೂ ಬಿಟ್ಟ ವಿಚಾರ ಎಂದು ಮಾರ್ಮಿಕವಾಗಿ ತಿಳಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸಿದೆ. ಎಲ್ಲಾ ತನಿಖೆ ಮುಗುಯುವ ಹಂತಕ್ಕೆ ಬಂದಿದೆ. ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಕೋರ್ಟ್ ನಿಂದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ ಎಂದರು.

ಉಪ ಮುಖಮಂತ್ರಿ ಡಿಕೆ ಶಿವಕುಮಾರ್ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಲ್ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಒಂದು ಪಕ್ಷದ ಅಧ್ಯಕ್ಷರಾಗಿ ಹೀಗೆ ಹೊಂದಾಣಿಕೆ ಮಾಡಿಕೊಳ್ಳುವುದ ಕಷ್ಟ. ಯತ್ನಾಳ್ ಅವರ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ದೊಡ್ಡವರ ಗದ್ದಲ ನಮಗೇಕೆ ಎಂದು ಅವರು ಉತ್ತರಿಸಿದರು.
ನಾನು ಬಿಜೆಪಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ನಾಯಕತ್ವವನ್ನು ಒಪ್ಪಿದ್ದೇನೆ. ರಮೇಶ ಜಾರಕಿಹೊಳಿ ವಿಜಯೇಂದ್ರ ನಾಯಕತ್ವ ಒಪ್ಪಲ್ಲ ಎಂಬ ಹೇಳಿಕೆಯು ಅದು ಅವರವರಿಗೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಸಿಸಿ ಬ್ಯಾಂಕ್ ಇತ್ಯರ್ಥ ಶೀಘ್ರ
ಮುಂದಿನ ವರ್ಷ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಿದ್ದರೂ ಇನ್ನೂ ಹೊಸ ಸದಸ್ಯರ ನೇಮಕ ಆಗಿಲ್ಲ ಎಂಬ ಸಣ್ಣ ಸಮಸ್ಯೆ ಇದೆ. ಈ ಸಮಸ್ಯೆ ಇತ್ಯರ್ಥ ಆಗೋವರೆಗೆ ಮಿಟಿಂಗ್ ಬರುವುದಿಲ್ಲ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಸದ್ಯ ಬ್ಯಾಂಕ್ ಸುಸೂತ್ರವಾಗಿ ನಡೆಯುತ್ತಿದೆ.
ಕಳೆದ ಲೋಕಸಭಾ ಚುನಾವಣೆಗೂ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಸಮಸ್ಯೆ ಆಗಿಲ್ಲ. ಡಿಸಿಸಿ ಬ್ಯಾಂಕ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನಿರ್ದೇಶಕರು ಪತ್ರ ಬರೆದಿದ್ದಾರೆ. ನಿರ್ದೇಶಕರು ಒಂದಷ್ಟು ಸೂಚನೆ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಪ್ರಭಾಕರ್ ಕೋರೆ ಅವರೊಂದಿಗೆ ಮಾತನಾಡಿಕೊಂಡು ಆಗಿರುವ ಸಮಸ್ಯೆ ಇತರ್ಥ್ಯಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ನಿರ್ದೇಶಕ ಪತ್ರ ಸಿಕ್ಕರೆ ಅದಕ್ಕೆ ಉತ್ತರ ಕೊಡಬಹುದು. ಬ್ಯಾಂಕ್‌ನಲ್ಲಿ 7 ಸಾವಿರ ಕೋಟಿ ಠೇವಣಿ ಇದ್ದು ಅದನ್ನು 10 ಸಾವಿರ ಕೋಟಿ ಮಾಡಲು ಯತ್ನ ಮಾಡಲಾಗಿದೆ. ನಿಪ್ಪಾಣಿಯಲ್ಲಿ ನಾಲ್ಕು ಜನರಿಂದ ಸದಸ್ಯರ ನೇಮಕಕ್ಕೆ ಒತ್ತಾಯ ಸಹ ಕೇಳಿ ಬಂದಿದೆ. ನೇಮಕದಲ್ಲಿ ಜೊಲ್ಲೆ, ಕವಟಗಿಮಠ, ಉತ್ತಮ ಪಾಟೀಲ್ ನಡುವೆ ಸ್ಪರ್ಧೆ ಇದ್ದು, ಎಲ್ಲರನ್ನು ಸಮಾಧಾನಪಡಿಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications