ಟೋಲ್ ವಿರೋಧಿಸಿ ಪ್ರತಿಭಟನೆ, ಸಂಚಾರ ಅಸ್ತವ್ಯಸ್ತ
ಬೆಂಗಳೂರು, ಮೇ 5 : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಸೋಮವಾರವೂ ವಾಹನ ಸವಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಟೋಲ್ ಶುಲ್ಕ ಹೆಚ್ಚಳ ಕುರಿತು ವರದಿ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಇದನ್ನು ವಿರೋಧಿಸಿ ಭಾನುವಾರದಿಂದ ವಿಮಾನ ನಿಲ್ದಾಣ ಟ್ಯಾಕ್ಸಿ ಡ್ರೈವರ್ ಗಳು ಸೇರಿದಂತೆ ಇತರ ವಾಹನ ಸವಾರರು ಪ್ರತಿಭಟನೆ ನಡೆಸುತ್ತಿದ್ದಾರೆ. [ಟೋಲ್ ದರ ಎಷ್ಟು ಹೆಚ್ಚಾಗಿದೆ]

ಸೋಮವಾರ ಸಹ ವಾಹನ ಸವಾರರ ಪ್ರತಿಭಟನೆಯಿಂದಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ 7 ಎರಡು ಟೋಲ್ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಟೋಲ್ ಹೆಚ್ಚಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮ್ಯ ಈ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. [ವಾಯು ವಜ್ರ ದರ ಹೆಚ್ಚಳ ಸಾಧ್ಯತೆ]
ಫಲ ನೀಡದ ಸಂಧಾನ : ಪ್ರತಿಭಟನಾ ನಿರತರೊಂದಿಗೆ ನವಯುಗ ಟೋಲ್ ಸಂಸ್ಥೆ ನಡೆಸಿದ ಮಾತುಕತೆಯೂ ಫಲ ನೀಡಿಲ್ಲ. ಏಕಾಏಕಿ ನವಯುಗ್ ಸಂಸ್ಥೆ ಟೋಲ್ ದರ ಹೆಚ್ಚಿಸುವ ಮೂಲಕ ಜರನ್ನು ವಂಚಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸರ್ಕಾರ ಈ ಕುರಿತು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಕೃಷಿ ಸಚಿವ ಕೃಷ್ಣಭೈರೇಗೌಡ ನವಯುಗ ಟೋಲ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮೂರು ದಿನಗಳವೊಳಗೆ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಸೋಮವಾರವೂ ಸಹ ವಾಹನ ಸವಾರರ ಪ್ರತಿಭಟನೆ ಮುಂದುವರೆದಿದ್ದು, ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.












Click it and Unblock the Notifications