ಹವ್ಯಕ ಮೆಸ್ ನ ತಂಬುಳಿ, ಪಾಯಸ, ತಿಳಿಸಾರು ಚಂದ, ಊಟ ಬೊಂಬಾಟು
ಬೆಂಗಳೂರಿನ ಸೀತಾ ಸರ್ಕಲ್ ನ ವಿನಾಯಕ ಆಸ್ಪತ್ರೆ ಎದುರು ಇರುವ ಹವ್ಯಕ ಮೆಸ್ ಬಗ್ಗೆ ವಿವರವಾದ ಲೇಖನ ಇದು. ಇಲ್ಲಿ ಸಿಗುವ ಆಹಾರ, ಬೆಲೆ, ಸಂಪರ್ಕ ಮಾಹಿತಿ ಮತ್ತಿತರ ವಿವರಗಳು ಇಲ್ಲಿವೆ
ಬೆಂಗಳೂರು, ಮೇ 5: ಆ ಮೆಸ್ ನ ಹೆಸರು ಅಲ್ಲಿನ ಊಟ ಎಂಥದ್ದು ಎಂಬುದನ್ನು ಹೇಳುವಂತಿದೆ. 'ಹವ್ಯಕ ಮೆಸ್' ಅದರ ಹೆಸರು. ಬನಶಂಕರಿ ಮೂರನೇ ಹಂತದ ಸೀತಾ ಸರ್ಕಲ್ ಬಳಿ ವಿನಾಯಕ ಆಸ್ಪತ್ರೆ ಅಂತ ಇದೆ. ಅದರ ಎದುರಿನಲ್ಲೇ ಈ ಹವ್ಯಕ ಮೆಸ್ ಇರೋದು. ಈ ಮೆಸ್ ಬುಧವಾರದಿಂದ ಸೋಮವಾರದವರೆಗೆ ತೆರೆದಿರುತ್ತದೆ.
ಅಲ್ಲೇ ಊಟ ಮಾಡುವುದಾದರೆ ಮಧ್ಯಾಹ್ನ 12.30 ಮಧ್ಯಾಹ್ನ 3.30ರವರೆಗೆ ಅವಕಾಶ ಇದೆ. ಮನೆಗೆ ತೆಗೆದುಕೊಂಡು ಹೋಗ್ತೀವಿ ಅಂದರೆ ಬೆಳಗ್ಗೆ 11ಕ್ಕೆ ಮೆಸ್ ತೆರೆದಿರುತ್ತದೆ. ಪಾರ್ಸಲ್ ಕೂಡ ಮಾಡಿಕೊಡ್ತಾರೆ. ಇನ್ನು ರಾತ್ರಿ ಹೊತ್ತು 7.30ರಿಂದ 10ರವರೆಗೆ ತೆರೆದಿರುತ್ತದೆ. ಪಾರ್ಸೆಲ್ ತೆಗೆದುಕೊಂಡು ಹೋಗುವುದಾದರೆ ಸಂಜೆ 6.30ರಿಂದಲೇ ಸಿಗುತ್ತದೆ.[ನಮೋ ಸತ್ಯನಾರಾಯಣ ಟಿಫನ್ ಸೆಂಟರ್ ನಲ್ಲಿ ಎಲ್ಲವೂ ಸಸ್ತಾ!]
ಮೂರು ಬಗ್ಗೆ ಊಟವನ್ನು ಉಣಬಡಿಸುತ್ತಾರೆ. ಪ್ಲೇಟ್ ಮೀಲ್ಸ್, ಫುಲ್ ಮೀಲ್ಸ್ ಹಾಗೂ ಸ್ಪೆಷಲ್ ಮೀಲ್ಸ್ ಅಂತ ಮೂರು ಬಗೆಯಲ್ಲಿದೆ. ಇವುಗಳ ಬೆಲೆ 70, 90 ಹಾಗೂ 120. ಕೋಸಂಬರಿ, ಹಪ್ಪಳ, ಚಪಾತಿ, ತಂಬುಳಿ, ಪಾಯಸ, ಅನ್ನ-ಸಾರು, ಹುಳಿ, ಮೊಸರು ಕೇಳಿದಷ್ಟು ಬಡಿಸುತ್ತಾರೆ. ಇದು ಫುಲ್ ಮೀಲ್ಸ್.

ಶನಿವಾರ, ಭಾನುವಾರ ವಿಶೇಷ
ಸ್ಪೆಷಲ್ ಮೀಲ್ಸ್ ಅಂದರೆ ಫುಲ್ ಮೀಲ್ಸ್ ನ ಮೆನು ಜತೆಗೆ ಬಜ್ಜಿ, ಸ್ವೀಟು ಹಾಗೂ ರೈಸ್ ಬಾತ್ ಹೆಚ್ಚುವರಿಯಾಗಿ ಇರುತ್ತದೆ. ಶನಿವಾರ ಹಾಗೂ ಭಾನುವಾರದಂದು ವಿಶೇಷವಾಗಿ ಇರುತ್ತದೆ. ಅಂದಹಾಗೆ ಈ ಮೆಸ್ ನಲ್ಲಿ ಅಡುಗೆಗೆ ಬೆಳ್ಳುಳ್ಳಿ ಬಳಸುವುದಿಲ್ಲ. ತೀರಾ ಕೆಲವಕ್ಕೆ ಮಾತ್ರ ಈರುಳ್ಳಿ ಬಳಸುತ್ತಾರೆ.

ವೀಣಾ-ಗುರುದತ್ತ ಮಾಲೀಕರು
ಇದರ ಮಾಲೀಕರು ವೀಣಾ-ಗುರುದತ್ತ. ಈ ಹಿಂದೆ ಪಾಲುದಾರಿಕೆಯಲ್ಲಿ ಇಂಥದ್ದೊಂದು ಹೋಟೆಲ್ಲೊ-ಮೆಸ್ಸೋ ನಡೆಸುತ್ತಿದ್ದರಂತೆ. ಆದರೆ ಈಗ ತಾವೇ ಸ್ವತಃ ನಡೆಸುತ್ತಿದ್ದಾರೆ. ದತ್ತಾ ಅವರು ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದವರು. ಆಹಾರ ಉದ್ಯಮ ಅವರಿಗೆ ಬಹಳ ಇಷ್ಟ ಎಂಬ ಕಾರಣಕ್ಕೆ ಕೈ ತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಮೆಸ್ ಶುರು ಮಾಡಿದ್ದಾರೆ.

ಡೆಬಿಟ್-ಕ್ರೆಡಿಟ್ ಕಾರ್ಡ್ ಸ್ವೀಕರಿಸ್ತಾರೆ
ಈ ಮೆಸ್ ನಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್ ಎಲ್ಲವನ್ನೂ ತೆಗೆದುಕೊಳ್ತಾರೆ. ತಂಬುಳಿ, ಸಾರು, ಉಪ್ಪಿನಕಾಯಿ ಮತ್ತಿತರ ಆಹಾರ ಪದಾರ್ಥಗಳು ಇಲ್ಲಿ ತುಂಬ ಸೊಗಸಾಗಿರುತ್ತವೆ. ಇದರ ಜತೆ ಅರ್ಧ-ಒಂದು ಲೀಟರ್ ಸಾರು-ಹುಳಿಯನ್ನೆಲ್ಲ ಪಾರ್ಸಲ್ ತೆಗೆದುಕೊಂಡು ಹೋಗಬಹುದು. ಜತೆಗೆ ಹಬ್ಬ-ಹರಿದಿನ, ಸಣ್ಣ ಪಾರ್ಟಿಗಳು, ಮದುವೆ, ಗೃಹಪ್ರವೇಶ ಮತ್ತಿತರ ಕಾರ್ಯಕ್ರಮಗಳಿಗೆ ಅಡುಗೆಯನ್ನು ಒಪ್ಪಿಕೊಳ್ತಾರೆ.

ಬಾಳೆ ಎಲೆ ಊಟ
ಅಂದಹಾಗೆ, ಇಲ್ಲಿ ಅಡುಗೆ ಬಡಿಸುವುದು ಬಾಳೆ ಎಲೆಯಲ್ಲಿ. ನಿಧಾನವಾಗಿ ಬಡಿಸುತ್ತಾರೆ. ಎಲ್ಲವೂ ಶುದ್ಧ ಹಾಗೂ ರುಚಿಕಟ್ಟಾಗಿರುತ್ತದೆ. ಸಾಧ್ಯವಾದರೆ ಒಮ್ಮೆ ಕುಟುಂಬ ಸಮೇತರಾಗಿ ಹೋಗಿ ರುಚಿಕಟ್ಟಾದ ಊಟ ಸವಿದು ಬನ್ನಿ.












Click it and Unblock the Notifications