ಸೆ. 15ರಿಂದ ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಸಂಚಾರ
ಬಳ್ಳಾರಿ, ಆಗಸ್ಟ್ 21 : ಹಲವು ವರ್ಷಗಳ ಜನರ ಬೇಡಿಕೆಗೆ ನೈಋತ್ಯ ರೈಲ್ವೆ ಒಪ್ಪಿಗೆ ಕೊಟ್ಟಿದೆ. ಹೊಸಪೇಟೆ-ಕೊಟ್ಟೂರು ನಡುವೆ ಪ್ಯಾಸೆಂಜರ್ ರೈಲು ಸಂಚಾರ ಸೆಪ್ಟೆಂಬರ್ 15ರಂದು ಆರಂಭವಾಗಲಿದೆ.
ಹೊಸಪೇಟೆ-ಕೊಟ್ಟೂರು ನಡುವಿನ 71 ಕಿ.ಮೀ. ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚಾರ ನಡೆಸಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಈಗಾಗಲೇ ಕೊಟ್ಟೂರು-ಹರಿಹರ ನಡುವೆ ರೈಲು ಸಂಚಾರ ನಡೆಸುತ್ತಿದೆ.
ನೈಋತ್ಯ ರೈಲ್ವೆ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ರೈಲು ಸಂಚಾರದ ಕುರಿತು ಮಾಹಿತಿ ನೀಡಿದ್ದಾರೆ. "ಹೊಸಪೇಟೆ-ಕೊಟ್ಟೂರು ರೈಲು ಹರಿಹರ ಸಮೀಪದ ಅಮರಾವತಿ ಕಾಲೋನಿ ತನಕ ಸಂಚಾರ ನಡೆಸಲಿದೆ" ಎಂದು ಹೇಳಿದರು.

"ರೈಲು ಮಾರ್ಗದ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲು ಸೆಪ್ಟೆಂಬರ್ ಮೊದಲ ವಾರದಲ್ಲಿ ರೈಲ್ವೆ ಸುರಕ್ಷತಾ ಮಂಡಳಿ ಕಮೀಷನರ್ ತಂಡ ಆಗಮಿಸಲಿದೆ. ತಂಡ ಪರೀಕ್ಷಾರ್ಥ ಸಂಚಾರ ನಡೆಸಿ, ಒಪ್ಪಿಗೆ ನೀಡಲಿದೆ" ಎಂದು ತಿಳಿಸಿದರು.
ರೈಲ್ವೆ ಹೋರಾಟ ಸಮಿತಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15 ರಿಂದ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿತ್ತು. ಆದರೆ, ರೈಲ್ವೆ ಇಲಾಖೆಯಿಂದ ಒಪ್ಪಿಗೆ ಸಿಗದ ಕಾರಣ ಒಂದು ತಿಂಗಳು ವಿಳಂಬವಾಗಿ ರೈಲು ಸಂಚರಿಸಲಿದೆ.












Click it and Unblock the Notifications