Sandur By elections: ಸಂಡೂರು ಉಪ ಚುನಾವಣೆ, ಕಾವು ಪಡೆಯುತ್ತಿಲ್ಲ ಕಾಂಗ್ರೆಸ್‌ ಪ್ರಚಾರ

ಬಳ್ಳಾರಿ, ನವೆಂಬರ್ 03: ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆ ಪೈಕಿ ಚನ್ನಪಟ್ಟಣದ ಕಡೆ ಎಲ್ಲರ ದೃಷ್ಟಿ ಇದೆ. ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಸಹ ಉಪ ಚುನಾವಣೆ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಅಂತಿಮವಾಗಿ 6 ಅಭ್ಯರ್ಥಿಗಳಿದ್ದಾರೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಪ್ರಚಾರವೂ ನಡೆಯುತ್ತಿದೆ.

ಸಂಡೂರು ವಿಧಾನಸಭೆ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಇ. ಅನ್ನಪೂರ್ಣ. ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ. ಶಿಗ್ಗಾವಿ ಮತ್ತು ಚನ್ನಪಟ್ಟಣಕ್ಕೆ ಹೋಲಿಕೆ ಮಾಡಿದರೆ ಸಂಡೂರಿನಲ್ಲಿ ಪ್ರಚಾರ ಇನ್ನೂ ಕಾವು ಪಡೆದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅದರಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಈ. ಅನ್ನಪೂರ್ಣ ಏಕಾಂಗಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

Sandur By Election 2024 Congress Yet To Boost Campaign

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇ. ತುಕಾರಾಂ ಸಂಡೂರು ಕ್ಷೇತ್ರದಲ್ಲಿ 85,223 ಮತಗಳನ್ನು ಪಡೆದು ಜಯಗಳಿಸಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ಶಿಲ್ಪಾ ರಾಘವೇಂದ್ರ ಗಳಿಸಿದ್ದು 49,701 ಮತಗಳು. ಆದರೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಿ ಬಂಗಾರ ಹನುಮಂತ ಕಣಕ್ಕಿಳಿಸಿದೆ.

ಏಕಾಂಗಿಯಾದ ಇ. ಅನ್ನಪೂರ್ಣ: ಸಂಡೂರು ಕ್ಷೇತ್ರದಲ್ಲಿ ಬಿಜೆಪಿಯ ಬಂಗಾರ ಹನುಮಂತ ಪರವಾಗಿ ಪ್ರಚಾರಕ್ಕೆ ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಆಗಮಿಸಿದ್ದಾರೆ. ಮಾಜಿ ಸಚಿವ ಬಿ. ಶ್ರೀರಾಮುಲು ಸಹ ಇದ್ದಾರೆ. ಭಾನುವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಂಡೂರಿನಲ್ಲಿ ಮತಬೇಟೆ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್‌ ಬಳ್ಳಾರಿಗೆ ಭೇಟಿ ನೀಡಲು ಜನಾರ್ದನ ರೆಡ್ಡಿಗೆ ಅವಕಾಶ ನೀಡಿದ್ದು, ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಹೆಚ್ಚು ಅನುಕೂಲವಾಗಿದೆ.

ಆದರೆ ಬಿಜೆಪಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್‌ ಅಭ್ಯರ್ಥಿ ಇ. ಅನ್ನಪೂರ್ಣ ಏಕಾಂಗಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಆಸಕ್ತಿ ಇಲ್ಲವೇ? ಎಂಬ ಪ್ರಶ್ನೆ ಎದುರಾಗಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಗಮನ ಚನ್ನಪಟ್ಟಣದ ಮೇಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಾಗಿ ಶಿಗ್ಗಾವಿ ಕಡೆ ಗಮನ ಹರಿಸಿದ್ದಾರೆ.

ಸಂಡೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಪ್ರಮುಖ ನಾಯಕರು, ಸಚಿವರು ಆಗಮಿಸಿಲ್ಲ. ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸೌಮ್ಯಾ ರೆಡ್ಡಿ ಕಾಂಗ್ರೆಸ್‌ ಅಭ್ಯರ್ಥಿ ಈ. ಅನ್ನಪೂರ್ಣ ಪರವಾಗಿ ಮತಯಾಚನೆ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ದೀಪಾವಳಿ ಹಬ್ಬದ ಬಳಿಕ ಪ್ರಚಾರಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ಇದೆ. ಆದರೆ ದಿನಾಂಕ ಇನ್ನೂ ಅಂತಿಮವಾಗಿಲ್ಲ.

ಕಾಂಗ್ರೆಸ್‌ ಬಳ್ಳಾರಿ ಸಂಸದ ಇ. ತುಕಾರಾಂ ಪತ್ನಿ ಇ. ಅನ್ನಪೂರ್ಣೆಗೆ ಟಿಕೆಟ್ ನೀಡಿದ್ದರಿಂದ ಹಲವು ನಾಯಕರು, ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ನಾಮಪತ್ರ ಸಲ್ಲಿಕೆ ವೇಳೆಯೂ ಹಲವು ನಾಯಕರು ಗೈರಾಗಿದ್ದರು. ಈಗ ಚುನಾವಣೆ ಪ್ರಚಾರದಲ್ಲಿಯೂ ಸ್ಥಳೀಯ ನಾಯಕರ ಅನುಪಸ್ಥಿತಿ ಕಾಡುತ್ತಿದೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂಬಂಧಿ ಅಕ್ಷಯ್ ಲಾಡ್ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಇ. ತುಕಾರಾಂ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾವು ಮಾಡಬೇಕಾದದ್ದನ್ನು ಮಾಡುತ್ತೇವೆ ಎಂದು ಕೆಲವು ನಾಯಕರು ಹೇಳಿದ್ದರು. ಈಗ ಅದೇ ನಡೆಯುತ್ತಿದೆ ಎಂಬ ಮಾತಿದೆ. ಆದರೆ ಸಚಿವ ಸಂತೋಷ್ ಲಾಡ್ ಬಂದರೆ ಎಲ್ಲಾ ನಾಯಕರು ಆಗಮಿಸುತ್ತಿದ್ದಾರೆ. ಇಲ್ಲವಾದಲ್ಲಿ ಇ. ತುಕಾರಾಂ, ಇ. ಅನ್ನಪೂರ್ಣ ಇಬ್ಬರೇ ಪ್ರಚಾರ ನಡೆಸಬೇಕಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿವೆ. ಸದ್ಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಆದರೆ ಜಿಲ್ಲೆಯ ಶಾಸಕರೇ ಚುನಾವಣಾ ಪ್ರಚಾರಕ್ಕೆ ಸಂಡೂರಿಗೆ ಆಗಮಿಸುತ್ತಿಲ್ಲ. ಇ. ತುಕಾರಾಂ ಅವರ ವರ್ತನೆ ಬಗ್ಗೆಯೇ ಹಲವು ನಾಯಕರಿಗೆ ಬೇಸರವಿದೆ. ಆದ್ದರಿಂದ ಸಂಡೂರಿನಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಂಡೂರು ಉಪ ಚುನಾವಣೆಯಲ್ಲಿ ಇ. ತುಕಾರಾಂ ಕುಟುಂಬಕ್ಕೆ ಟಿಕೆಟ್ ನೀಡುವುದಾಗಿ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ ಪಕ್ಷ ಭರವಸೆ ನೀಡಿತ್ತು. ಅದರಂತೆ ನಡೆದುಕೊಳ್ಳಲಾಗಿದೆ. ದೀಪಾವಳಿ ಹಬ್ಬದ ಬಳಿಕ ಎಲ್ಲಾ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+