ಫೆ. 14ಕ್ಕೆ ಮೈಲಾರ ಕಾರ್ಣಿಕೋತ್ಸವ: ಕಾರ್ಣಿಕ ಕೇಳಲು ಕಾದು ಕೂತ ಜನ
ವಿಜಯನಗರ, ಫೆಬ್ರವರಿ 12: ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವವು ಫೆಬ್ರವರಿ 14ರ ಶುಕ್ರವಾರ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದು, ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಹೊಸಪೇಟೆ, ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ.

ಕೆಎಸ್ಆರ್‌ಟಿಸಿ ದಾವಣಗೆರೆ ವಿಭಾಗದಿಂದ ಮೈಲಾರ ಕಾರ್ಣಿಕೋತ್ಸವ ಪ್ರಯುಕ್ತ ಫೆಬ್ರವರಿ 13 ರಿಂದ 15ರ ತನಕ ಭಕ್ತಾದಿಗಳ ಅನುಕೂಲಕ್ಕಾಗಿ 75 ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ಬಸ್‌ಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಹೊಸಪೇಟೆ ವಿಭಾಗದಿಂದ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಸ್‌ಗಳು ಹೊಸಪೇಟೆ, ಕೂಡ್ಲಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿಯಿಂದ ಫೆಬ್ರವರಿ 12 ರಿಂದ 15ರ ತನಕ ಸಂಚಾರ ನಡೆಸಲಿವೆ.
ವಾರ್ಷಿಕ ಕಾರ್ಣಿಕೋತ್ಸವದ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಸಲಾಗುತ್ತಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಸಕಲ ತಯಾರಿಯನ್ನು ನಡೆಸುತ್ತಿದೆ.
ಪ್ರತಿ ವರ್ಷ ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಹುಣ್ಣಿಮೆಯ ಎರಡನೇ ದಿನಕ್ಕೆ ಕಾರ್ಣಿಕೋತ್ಸವ ನಡೆಯುತ್ತದೆ. ಈ ಕಾರ್ಣಿಕ ಕೇಳಲು ರಾಜ್ಯದ ಜನರು ಕಾದು ಕುಳಿತಿರುತ್ತಾರೆ. ಈ ವರ್ಷದ ಮಳೆ, ಬೆಳೆಯ ಕುರಿತು ಕಾರ್ಣಿಕದಲ್ಲಿ ಮಾಹಿತಿ ನೀಡಲಾಗುತ್ತದೆ.
ಕಾರ್ಣಿಕದ ಗೊರವಯ್ಯ ಒಂದೇ ವಾಕ್ಯದಲ್ಲಿ ಹೇಳುವ ಕಾರ್ಣಿಕವನ್ನು ಬಳಿಕ ವಿವರಿಸಲಾಗುತ್ತದೆ. ಈ ಭವಿಷ್ಯವಾಣಿಯನ್ನು ಕೇಳಲು ಲಕ್ಷಾಂತರ ಜನರು ಸೇರಿರುತ್ತಾರೆ. ಕಾರ್ಣಿಕ ಹೇಳುವ ಮೊದಲು ಗೊರವಯ್ಯ ಡೆಂಕನ ಮರಡಿಯಲ್ಲಿ11 ದಿನಗಳ ಉಪವಾಸ ಆಚರಣೆ ಮಾಡುತ್ತಾರೆ.
ಈ ಕಾರ್ಣಿಕದ ದಿನ ಸಂಜೆ ಬಿಲ್ಲನ್ನು ಏರಿ ಒಂದೇ ವಾಕ್ಯದಲ್ಲಿ ಗೊರವಯ್ಯ ಭವಿಷ್ಯ ನುಡಿಯುತ್ತಾರೆ. ದೇಶದ ರಾಜಕೀಯ, ಸಾಮಾಜಿಕ, ಮಳೆ, ಬೆಳೆಯ ಭವಿಷ್ಯ ಈ ಕಾರ್ಣಿಕದಲ್ಲಿ ಅಡಗಿದೆ ಎಂಬ ನಂಬಿಕೆ ಇದೆ. ಬಿಲ್ಲಿನಿಂದ ಕೆಳಗೆ ಬೀಳುವ ಗೊರವಯ್ಯನ ತಲೆ ಯಾವ ಕಡೆ ವಾಲುತ್ತದೆಯೋ ಆ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ.
'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಇರುವ ಕಾರಣ ಜಾತ್ರೆಗೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಶ್ರೀ ಮೈಲಾರಲಿಂಗ ಸ್ವಾಮಿ ದೇವಾಲಯದ ವತಿಯಿಂದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ದೇವಾಲಯದ ಸುತ್ತಲೂ ನೈರ್ಮಲ್ಯೀಕರಣಕ್ಕೆ ವಿಶೇಷ ಗಮನ ನೀಡಲಾಗಿದೆ. ತುರ್ತು ಚಿಕಿತ್ಸೆಗಾಗಿ ತಾತ್ಕಾಲಿಕ ಆಸ್ಪತ್ರೆ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಅಗತ್ಯವಿರುವ ಔಷಧಿಗಳು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.












Click it and Unblock the Notifications