ಕೆಪಿಸಿಸಿ ಶಿಸ್ತು ಸಮಿತಿ ತೀರ್ಮಾನಕ್ಕೆ ಬದ್ಧ; ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್
ಹಗರಿಬೊಮ್ಮನಹಳ್ಳಿ, ಅಕ್ಟೋಬರ್ 19: ''ಮಾಜಿ ಸಂಸದ ಉಗ್ರಪ್ಪ ಸಮಾಜವಾದಿ ಸೈದ್ಧಾಂತಿಕ ಹಿನ್ನೆಲೆಯ ಹಿರಿಯ ನಾಯಕರಿದ್ದು ಅವರ ಅನುಭವವನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆಯೇ ವಿನಃ ಕೆಪಿಸಿಸಿ ಶಿಸ್ತು ಸಮಿತಿ ನಿರ್ಣಯವನ್ನು ಪ್ರಶ್ನಿಸಿಲ್ಲ'' ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ''ಮಾಜಿ ಸಂಸದ ಉಗ್ರಪ್ಪ ಅವರ ಕುರಿತಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದ್ದು ಬಿಜೆಪಿ ಪರ ಇರುವ ದೃಶ್ಯ ಮಾಧ್ಯಮಗಳು ಈ ಪ್ರಕರಣವನ್ನು ದಾರಿ ತಪ್ಪಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮಾಜಿ ಸಂಸದ ಉಗ್ರಪ್ಪನವರ ತೇಜೋವಧೆಗೆ ಯತ್ನಿಸುತ್ತಿವೆ ಎಂದು ನಾನು ಆರೋಪಿಸಿರುವ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು ಕೆಪಿಸಿಸಿ ಶಿಸ್ತು ನಮಿತಿ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ,'' ಎಂದು ಪತ್ರೇಶ್ ತಿಳಿಸಿದ್ದಾರೆ
''ಇತ್ತೀಚೆಗೆ ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಮೆಲುಧ್ವನಿಯಲ್ಲಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ಆದೇಶವನ್ನು ಹಿಂಪಡೆಯಬೇಕು,'' ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಒತ್ತಾಯಿಸಿದ್ದರು. ಆದರೆ, ಶೋಕಾಸ್ ನೋಟಿಸ್ ಬದಲಿಗೆ ಅಮಾನತು ಆದೇಶ ಎಂದು ತಪ್ಪಾಗಿ ಮಾಧ್ಯಮಗಳಲ್ಲಿ ಮೊದಲಿಗೆ ಪ್ರಸಾರವಾಗಿ ಗೊಂದಲ ಮೂಡಿತ್ತು. ಈ ಬಗ್ಗೆ ಅಂದೇ ಸ್ಪಷ್ಟನೆ ನೀಡಿದ್ದರೂ ತಡವಾಗಿತ್ತು. ಹೀಗಾಗಿ, ಇಂದು ಮತ್ತೊಮ್ಮೆ ಈ ಗೊಂದಲ ಬಗೆಹರಿಸಲು ಸುದ್ದಿಗೋಷ್ಠಿ ಕರೆದು, ತಮ್ಮ ಹೇಳಿಕೆ ಬಗ್ಗೆ ತಿಳಿಸಿದ್ದಾರೆ.

ಈ ಹಿಂದಿನ ಹೇಳಿಕೆ ಏನಿತ್ತು?:
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ''ಮಾಜಿ ಸಂಸದ ಉಗ್ರಪ್ಪ ಡಿಕೆಶಿಯವರ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಎಲ್ಲೂ ಮಾತನಾಡಿಲ್ಲ. ಆದರೆ ದೃಶ್ಯಮಾಧ್ಯಮಗಳು ಇದನ್ನು ತಪ್ಪುತಪ್ಪಾಗಿ ಬಿಂಬಿಸಿ ಉಗ್ರಪ್ಪನವರ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ,'' ಎಂದು ಪತ್ರೇಶ್ ಆರೋಪಿಸಿದ್ದರು.
ಮಾಜಿ ಸಂಸದ ಉಗ್ರಪ್ಪನವರು ಕಾಂಗ್ರೆಸ್ ಸೇರಿದಾಗಿನಿಂದ ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ಜೀವನದುದ್ದಕ್ಕೂ ಸಂಸ್ಕಾರಯುತ ಮೌಲ್ಯಗಳ ಜೊತೆ ಶಿಸ್ತನ್ನು ಅಳವಡಿಸಿಕೊಂಡು ಬದುಕುತ್ತಿದ್ದು ಅವರಿಗೆ ನೋಟಿಸ್ ಮಾಡಿರುವುದು ಅವಸರದ ನಿರ್ಧಾರವಾಗಿದೆ ಎಂದಿದ್ದರು.
ಕರ್ನಾಟಕದ ಅನುಭವಿ ಮತ್ತು ಮೇಧಾವಿ ರಾಜಕಾರಿಣಿ ಹಾಗೂ ಬಹುಸಂಖ್ಯಾತ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರಾದ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡಿರುವುದು ಮುಜುಗರದ ಸಂಗತಿಯಾಗಿದ್ದು ತಕ್ಷಣವೇ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಧ್ಯಪ್ರವೇಶಿಸಿ ಅಮಾನತು ಮತ್ತು ಶಿಸ್ತು ಸಮಿತಿ ನೀಡಿದ ನೋಟಿಸ್ ಹಿಂಪಡೆದು ಅವರ ಸಂಸದೀಯ ಜಾಣ್ಮೆ ಮತ್ತು ಅನುಭವವನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಬೇಕೆಂದು ಪತ್ರೇಶ್ ಮನವಿ ಮಾಡಿದ್ದರು.

ಏನಿದು ಸಂಭಾಷಣೆ ವಿವಾದ?:
ಇತ್ತೀಚೆಗೆ ಮಾಧ್ಯಮಗೋಷ್ಠಿ ಕರೆದಿದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ ಅವರೊಂದಿಗೆ ಗುಟ್ಟಾಗಿ ಮಾತನಾಡಿಕೊಂಡಿದ್ದು, ನಂತರ ಮಾಧ್ಯಮಗಳಲ್ಲಿ ಈ ಸಂಭಾಷಣೆ ವೈರಲ್ ಆಗಿದ್ದು ನೆನಪಿರಬಹುದು. ಇದಾದ ಬಳಿಕ, ಕಾಂಗ್ರೆಸ್ ಶಿಸ್ತು ಪರಿಪಾಲನಾ ಸಮಿತಿ ಮುಖ್ಯಸ್ಥರಾದ ರೆಹಮಾನ್ ಖಾನ್ ಅವರು, ಸಲೀಂ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದರೆ, ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಾದ ವಿಎಸ್ ಉಗ್ರಪ್ಪ ಹಾಗೂ ಎಂ.ಎ. ಸಲೀಂ ಅವರು ತಮ್ಮ ಮೇಲೆ ಮಾಡಿದ್ದ ಆರೋಪಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ, "ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸಂಭಾಷಣೆಗೂ (ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ನಡುವೆ), ನನಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ಪರ್ಸೆಂಟೇಜ್ ವಿಚಾರದಲ್ಲೂ ಭಾಗಿಯಾಗಿಲ್ಲ. ಅದರ ಅಗತ್ಯವೂ ನನಗಿಲ್ಲ. ಗೃಹ ಸಚಿವರು ಯಾರಾದರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಸುಮೋಟೋ ಕೇಸ್ ದಾಖಲಿಸಿದರೂ ಒಳ್ಳೆಯದೇ. ನಾನು ಹಳ್ಳಿಯಿಂದ ಬಂದವನಾಗಿದ್ದು, ನನಗೆ ನನ್ನದೇ ಆದ ನಡೆ, ನುಡಿ, ದೇಹಭಾಷೆ, ವ್ಯಕ್ತಿತ್ವ ಹಾಗೂ ಯಶಸ್ಸು ಇದೆ. ಕೆಲವೊಂದು ಗುಣಗಳು ಬದಲಾಗುವುದಿಲ್ಲ." ಎಂದು ತಿರುಗೇಟು ಕೊಟ್ಟಿದ್ದರು.












Click it and Unblock the Notifications