ನಮ್ಮ ಬೆಂಬಲ ಅಖಂಡ ಕರ್ನಾಟಕ್ಕಾಗಿ, ಪ್ರತ್ಯೇಕ ರಾಜ್ಯಕ್ಕೆ ಅಲ್ಲ: ಕರವೇ
ಬಳ್ಳಾರಿ, ಆಗಸ್ಟ್ 02: ನಮ್ಮ ಬೆಂಬಲ ಅಖಂಡ ಕರ್ನಾಟಕ್ಕಾಗಿ, ಪ್ರತ್ಯೇಕ ರಾಜ್ಯಕ್ಕಾಗಿ ಅಲ್ಲ. ಹಾಗಂತ ನಾವೇನೂ ಸುಮ್ಮನೆ ಕೂತಿಲ್ಲ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಅಭಿವೃದ್ಧಿಗಾಗಿ ಹೋರಾಟ ಮಾಡುತ್ತೇವೆ' ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕ ಸ್ಪಷ್ಟಪಡಿಸಿದೆ.
ಅಖಂಡ ಕರ್ನಾಟಕದ ಅಭಿವೃದ್ಧಿಗಾಗಿ' ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಗುರುವಾರ ವೇದಿಕೆ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಚಾನಾಳ್ ಶೇಖರ್, ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಬೆಂಬಲವಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ತೀವ್ರ ವಿರೋಧವಿದೆ.
ಏಳು ನೂರಾ ಐವತ್ತು ವರ್ಷಗಳ ನಂತರ, 1956ರಲ್ಲಿ ಕನ್ನಡಿಗರು ಎಲ್ಲರೂ ಒಂದಾಗಿ ಕರ್ನಾಟಕದ ಏಕೀಕರಣಕ್ಕೆ ಕಾರಣವಾದೆವು. ಕರ್ನಾಟಕ ಏಕೀಕರಣದ ನಂತರ 62 ವರ್ಷಗಳಲ್ಲಿ ಕರ್ನಾಟಕ ಭಾರತದ ಒಂದು ಪ್ರಗತಿಶೀಲ ರಾಜ್ಯವಾಗಿದೆ. ಆದರೂ, ಅಭಿವೃದ್ಧಿ ವಿಚಾರದಲ್ಲಿ ಕೊರತೆಯನ್ನು ಕಾಣುತ್ತಿದೆ ಎಂದರು.

ಅಭಿವೃದ್ಧಿಯಲ್ಲಿದ್ದರೂ ಕರ್ನಾಟಕ - ಉತ್ತರ ಕರ್ನಾಟಕದ ಮಧ್ಯೆ ತಾರತಮ್ಯವಿರಲು ರಾಜಕಾರಣಿಗಳು, ಸರ್ಕಾರಗಳು ಕಾರಣ. ಸಮಸ್ಯೆ ಪರಿಹಾರಕ್ಕೆ ಹೋರಾಟ ಮಾಡಬೇಕು ಹೊರತು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವುದು ಕನ್ನಡಿಗರ, ಕರ್ನಾಟಕದ ವಿರೋಧಿ' ನಿಲುವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಂಜುಂಡಪ್ಪ ವರದಿಯಲ್ಲಿ ನೀಡಲಾದ ಶಿಫಾರಸ್ಸಿನಂತೆ ತೋಟಗಾರಿಕೆ, ಕೃಷಿ, ನೀರಾವರಿ, ಶಿಕ್ಷಣ ಮೂಲಭೂತ ಸೌಕರ್ಯಗಳು ಮತ್ತು ಆರೋಗ್ಯ ಸೇವೆಗಳ ಸೌಕರ್ಯವನ್ನು ಕಲ್ಪಿಸಲು ಅನುದಾನವನ್ನು ನೀಡುವುದರ ಜೊತೆ ಅದರ ಸೂಕ್ತ ಅನುಷ್ಠಾನಕ್ಕೆ ಬೇಕಿರುವ ಮೂಲಭೂತ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು.

ಮಹದಾಯಿ ನದಿ ನೀರಿನ ವಿಚಾರದಲ್ಲಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪ್ರಧಾನಿಗಳ ಮಧ್ಯಸ್ಥಿಯಲ್ಲಿ ಒಂದು ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.











Click it and Unblock the Notifications