ಹಂಪಿ ಉತ್ಸವಕ್ಕೆ ಬರದ ಛಾಯೆ, ಉತ್ಸವದ ಆಚರಣೆ ಮುಂದೂಡಿಕೆ
ಬಳ್ಳಾರಿ, ಸೆಪ್ಟೆಂಬರ್ 14; ಕರ್ನಾಟಕದ 161 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಬರದ ಛಾಯೆ ಉತ್ಸವಗಳ ಮೇಲೆಯೂ ಪರಿಣಾಮ ಬೀರಿದೆ.
ಹಂಪಿ ಉತ್ಸವ ಆಚರಣೆ ಕುರಿತು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಬಹುತೇಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಇಂತಹ ಸಮಯದಲ್ಲಿ ಹಂಪಿ ಉತ್ಸವ ನಡೆಸುವುದು ಕಷ್ಟ ಎಂದು ಚರ್ಚಿಸಲಾಯಿತು. 2024ರ ಫೆಬ್ರವರಿ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಉತ್ಸವ ನಡೆಸಲು ತೀರ್ಮಾನಿಸಲಾಯಿತು.
ಈ ಮೊದಲು 2023ರ ನವೆಂಬರ್ 3 ರಿಂದ 5ರ ತನಕ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಹಂಪಿ ಉತ್ಸವವನ್ನು 2024ಕ್ಕೆ ಸರ್ಕಾರ ಮುಂದೂಡಿಕೆ ಮಾಡಿದೆ. ಆಗ ಜಿಲ್ಲೆಯ ಪರಿಸ್ಥಿತಿ ನೋಡಿಕೊಂಡು ಉತ್ಸವದ ಕುರಿತು ತೀರ್ಮಾನ ಮಾಡಲಾಗುತ್ತದೆ.
ಜಮೀರ್ ಅಹಮದ್ ಖಾನ್ ಹೇಳಿಕೆ; ಸಭೆಯ ಬಳಿಕ ಮಾತನಾಡಿದ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, 'ಈ ಮೊದಲು ನವೆಂಬರ್‌ನಲ್ಲಿ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಬರ ಪರಿಸ್ಥಿತಿಯಿಂದ ಫೆಬ್ರವರಿಯಲ್ಲಿ ಉತ್ಸವ ನಡೆಸಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ. ಆದ್ದರಿಂದ ಉತ್ಸವವನ್ನು ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ" ಎಂದರು.
ವಿಜಯನಗರ ಸಾಮ್ರಾಜ್ಯದ ಇತಿಹಾಸ ಹೇಳುವ ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಹಂಪಿ ಉತ್ಸವವನ್ನು ಆಚರಣೆ ಮಾಡಲಾಗುತ್ತದೆ. ಆರು ವರ್ಷಗಳ ಬಳಿಕ ಈ ಬಾರಿ ಅದ್ಧೂರಿಯಾಗಿ ನವೆಂಬರ್‌ನಲ್ಲಿ ಹಂಪಿ ಉತ್ಸವ ಆಚರಣೆ ಮಾಡಲು ತೀರ್ಮಾನಿಸಲಾಗಿತ್ತು.
ಆಗ ಉಪ ಮುಖ್ಯಮಂತ್ರಿಯಾಗಿದ್ದ ದಿ. ಎಂ. ಪಿ. ಪ್ರಕಾಶ್ ನವೆಂಬರ್ 3, 4 ಮತ್ತು 5ರಂದು ಪ್ರತಿ ವರ್ಷ ಹಂಪಿ ಉತ್ಸವ ನಡೆಸಬೇಕು ಎಂದು ದಿನಾಂಕ ನಿಗದಿ ಮಾಡಿದ್ದರು. ಆದರೆ ಸರ್ಕಾರಗಳು ಬದಲಾದಂತೆ ಹಂಪಿ ಉತ್ಸವದ ದಿನಾಂಕಗಳು ಸಹ ಬದಲಾಗುತ್ತಾ ಹೋಯಿತು.
ಹಂಪಿ ಉತ್ಸವ ಆಚರಣೆಗೆ ಶಾಶ್ವತ ದಿನಾಂಕ ನಿಗದಿ ಮಾಡಬೇಕು ಎಂಬ ಬೇಡಿಕೆ ಹಲವಾರು ದಿನಗಳಿಂದ ಇದೇ. ಆದರೆ ಯಾವ ಸರ್ಕಾರಗಳು ಈ ಕೂಗಿಗೆ ಮನ್ನಣೆ ನೀಡಿಲ್ಲ. ಹಂಪಿ ಈಗ ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟು ಹೊಸದಾಗಿ ರಚನೆಗೊಂಡ ವಿಜಯನಗರ ಜಿಲ್ಲೆಗೆ ಸೇರಿದೆ.
ಕರ್ನಾಟಕ ಸರ್ಕಾರ 161 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಘೋಷಣೆ ಮಾಡಿದೆ. ತೀವ್ರ ಬರಪೀಡಿತ ತಾಲೂಕುಗಳಲ್ಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಂಡೂರು, ಶಿರಗುಪ್ಪ, ಕುರುಗೋಡು, ಕಂಪ್ಲಿಗಳಿವೆ.
ಅಲ್ಲದೇ ಹಂಪಿ ಇರುವ ವಿಜಯನಗರ ಜಿಲ್ಲೆಯ ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪ್ಪನಹಳ್ಳಿ, ಕೊಟ್ಟೂರು, ಕೂಡ್ಲಗಿ ತಾಲೂಕುಗಳು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಹಂಪಿ ಉತ್ಸವವನ್ನು ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರುಸೃಷ್ಟಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಆಚರಣೆ ಮಾಡುತ್ತದೆ. ಮಧ್ಯ ಕರ್ನಾಟಕ ಭಾಗದಲ್ಲಿ ಸರ್ಕಾರ ನಡೆಸುವ ಪ್ರಮುಖ ಉತ್ಸವ ಇದಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಲ್ಲಿ ಉತ್ಸವ ಆಯೋಜನೆ ಮಾಡುವ ಮೂಲಕ ಸಂಗೀತ ಮತ್ತು ಸಾಂಸ್ಕೃತಿರ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ.
ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಉತ್ಸವವನ್ನು ಆಚರಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಆದ್ದರಿಂದ ಹಂಪಿ ಉತ್ಸವ ಭಾರತದ ಅತ್ಯಂತ ಹಳೆಯ ಆಚರಣೆಗಳಲ್ಲಿ ಒಂದಾಗಿರಬಹುದು ಎಂದು ನಂಬಲಾಗಿದೆ. ಈ ಉತ್ಸವದ ಸಮಯದಲ್ಲಿ ಹಂಪಿಯ ಪ್ರಮುಖ ಸ್ಮಾರಕಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ.












Click it and Unblock the Notifications