ಬಳ್ಳಾರಿಯಲ್ಲಿ ಜನವರಿ 4ರಂದು 500 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಿರುವ ಸಿಎಂ
ಬಳ್ಳಾರಿ, ಡಿಸೆಂಬರ್, 30: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 4ರಂದು ಬಳ್ಳಾರಿಗೆ ಆಗಮಿಸಲಿದ್ದಾರೆ. ಈ ವೇಳೆ ಜಿಲ್ಲೆಯಲ್ಲಿ ಸುಮಾರು 500 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಮಾರು 25 ಕೋಟಿ ರೂಪಾಯಿ ವೆಚ್ಚದ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ಉದ್ಘಾಟನೆ, 6 ಕೋಟಿ ರೂಪಾಯಿ ವೆಚ್ಚದ ಸಿಂಥಟಿಕ್ ಅಥ್ಲೆಟಿಕ್ ರನ್ನಿಂಗ್ ಟ್ರ್ಯಾಕ್ ಉದ್ಘಾಟನೆ ಮಾಡಲಿದ್ದಾರೆ. ಅಲ್ಲದೇ 109 ಕೋಟಿ ರೂಪಾಯಿ ವೆಚ್ಚದ ವಿಮ್ಸ್ ಆಸ್ಪತ್ರೆಯಲ್ಲಿ 400 ಬೆಡ್‍ಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ 21 ಕೋಟಿ ರೂಪಾಯಿ ವೆಚ್ಚದ 100 ಹಾಸಿಗೆಯುಳ್ಳ ಎಂಎನ್‍ಹೆಚ್ ಆಸ್ಪತ್ರೆ, ತಾರಾನಾಥ ಆರ್ಯುವೇದಿಕ್ ಆಸ್ಪತ್ರೆಯಲ್ಲಿ ವಸತಿ ನಿಲಯ ಕಟ್ಟಡ ಉದ್ಘಾಟನೆ, ಹಲಕುಂದಿ ಮತ್ತು ಮುಂಡರಗಿಯಲ್ಲಿ ಭೂಮಿ ಪಟ್ಟಾ ವಿತರಣೆ ಸೇರಿದಂತೆ ಹಲವಾರು ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ಮಾಡಲಿದ್ದಾರೆ ಎಂದು ತಿಳಿಸಿದರು.

ಹೊಸ ಕಟ್ಟಡದಲ್ಲಿ 11 ಕಚೇರಿಗಳು
ನೂತನವಾಗಿ ಉದ್ಘಾಟನೆಗೊಳ್ಳಲಿರುವ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ತಹಶೀಲ್ದಾರ್ ಕಚೇರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ 11 ಕಚೇರಿಗಳು ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಲಿವೆ. ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ ಹಾಗೂ ಭೂ ಮಾಪನ ಇಲಾಖೆ ಕಚೇರಿಗಳು ಹಳೇ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿಯೇ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಜನವರಿ 21, 22ರಂದು ಬಳ್ಳಾರಿ ಉತ್ಸವ
ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾದ ನಂತರ, ಚೊಚ್ಚಲ ಬಾರಿಗೆ "ಬಳ್ಳಾರಿ ಉತ್ಸವ"ವನ್ನು ಜನವರಿ 21 ಮತ್ತು 22ರಂದು ನಡೆಸಲಾಗುತ್ತಿದೆ.
ಹಂಪಿ ಉತ್ಸವದ ಮಾದರಿಯಲ್ಲಿಯೇ "ಬಳ್ಳಾರಿ ಉತ್ಸವ"ವನ್ನು 2 ದಿನಗಳ ಕಾಲ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ವಿವಿಧ ಕಾರ್ಯಕ್ರಮಗಳ ಆಯೋಜನೆ
ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆಯನ್ನು ನೀಡಲಾಗುತ್ತಿದ್ದು, ಕಲಾತಂಡಗಳ ಆಯ್ಕೆ ಪ್ರಕ್ರಿಯೆ ಉಪಸಮಿತಿಗಳಿಂದ ನಡೆಯುತ್ತಿದೆ. ಜೊತೆಗೆ ಫಲಪುಷ್ಪ ಪ್ರದರ್ಶನ, ಮ್ಯಾರಾಥಾನ್, ಗಾಳಿಪಟ, ರಂಗೋಲಿ ಸ್ಪರ್ಧೆ, ಲೇಸರ್ ಶೋ, ಕುಸ್ತಿ ಪಂದ್ಯಾವಳಿ, ಎತ್ತಿನ ಬಂಡಿ ಮೆರವಣಿಗೆ, ಆಹಾರ ಪ್ರದರ್ಶನ, ಸಿರಿಧಾನ್ಯಗಳ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹಾಗೂ ನಗರದ ಕೋಟೆ ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಭವ್ಯ ವಸಂತ ವೈಭವ ಮೆರವಣಿಗೆಗೆ ಸಿದ್ಧತೆ
ಬಳ್ಳಾರಿ ಉತ್ಸವದಲ್ಲಿ ಅಲಂಕೃತ ಆನೆ ಅಂಬಾರಿ, ವಿಶೇಷ ಅಶ್ವದಳ ಮತ್ತು ರಾಜ್ಯ ಹಾಗೂ ಇತರೆ ಹೊರರಾಜ್ಯಗಳಿಂದ ವಿಶೇಷವಾಗಿ 300 ಕಲಾತಂಡಗಳಿಂದ ಭವ್ಯ ವಸಂತ ವೈಭವ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ಈ ಉತ್ಸವದಲ್ಲಿ ಇರಲಿದೆ ಎಂದರು. ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್, ಎಡಿಸಿ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications