ಮೊದಲ ಬಾರಿ ಬಳ್ಳಾರಿ ಉತ್ಸವ; ಲಾಂಛನ ಬಿಡುಗಡೆ
ಬಳ್ಳಾರಿ, ಜನವರಿ 06; ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ವಿಭಜನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವದ ಲಾಂಛನ ಬಿಡುಗಡೆಯಾಗಿದೆ.
ಜನವರಿ 21 ಮತ್ತು 22ರಂದು ನಡೆಯಲಿರುವ 'ಬಳ್ಳಾರಿ ಉತ್ಸವ 2023' ಲಾಂಛನವನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ. ಉತ್ಸವ ಯಶಸ್ವಿಗೊಳಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಚೊಚ್ಚಲ ಬಳ್ಳಾರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ವಿವಿಧ ಉಪ ಸಮಿತಿಗಳನ್ನು ರಚನೆ ಮಾಡಿದೆ. ಸಾಂಸ್ಕೃತಿ ಕಾರ್ಯಕ್ರಮಗಳು, ವಸಂತ ವೈಭವ, ಎತ್ತಿನ ಬಂಡಿ ಮೆರವಣಿಗೆ, ಕುಸ್ತಿ, ರಂಗೋಲಿ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಬಳ್ಳಾರಿ ಉತ್ಸವದ ಹಿನ್ನೆಲೆಯಲ್ಲಿ ಜನವರಿ 20 ಮತ್ತು 21ರಂದು ಮಹಿಳೆಯರಿಗಾಗಿ ರಂಗೋಲಿ, ಮೆಹಂದಿ, ಅಡುಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಆಸಕ್ತ ಮಹಿಳೆಯರು ಭಾಗವಹಿಸಬಹುದಾಗಿದೆ. ಚೊಚ್ಚಲ ಬಳ್ಳಾರಿ ಉತ್ಸವದಲ್ಲಿ ಸಾಂಪ್ರದಾಯಿಕ ಹಾಗೂ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸವನ್ನು ಬಿಂಬಿಸುವ ಕಾರ್ಯಕ್ರಮದ ಜೊತೆಗೆ ಜಿಲ್ಲೆಯ ಇತಿಹಾಸಕಾರರು, ಕಲಾವಿದರು, ಜಿಲ್ಲೆಯ ರೂವಾರಿಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶವಿದೆ.
ಬಳ್ಳಾರಿ ಉತ್ಸವಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕಲಾವಿದರಿಗೆ ವಸತಿ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, "ಬಳ್ಳಾರಿ ಜಿಲ್ಲೆ ವಿಭಜನೆಯಾದ ನಂತರ, ಮೊದಲ ಬಾರಿಗೆ ಬಳ್ಳಾರಿ ಉತ್ಸವವನ್ನು ಜನವರಿ 21 ಮತ್ತು 22ರಂದು ವಿಜೃಂಭಣೆಯಿಂದ ಆಚರಿಸಲಾಗುವುದು" ಎಂದು ಹೇಳಿದ್ದಾರೆ.
ವಾಹನಗಳ ಪಾರ್ಕಿಂಗ್ ವ್ಯವಸ್ಥೆ; ಬಳ್ಳಾರಿ ಉತ್ಸವಕ್ಕೆ ವಿವಿಧ ತಾಲೂಕು ಮತ್ತು ಹಳ್ಳಿಗಳಿಂದ ಬರುವ ಜನರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಅನಂತಪುರ ರಸ್ತೆ ಕಡೆಯಿಂದ ಬರುವವರಿಗೆ ನೂತನ ಜಿಲ್ಲಾಡಳಿತ ಭವನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕೌಲ್ ಬಜಾರ್ ನಿಂದ ಬರುವವರಿಗೆ ಹಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಮತ್ತು ಉತ್ಸವದ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲು ಎಸ್ಪಿಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆಕರ್ಷಕ ವಸ್ತು ಪ್ರದರ್ಶನ; ಉತ್ಸವದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಾಣ ಮಾಡಲಿದ್ದು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ವಸ್ತು ಪ್ರದರ್ಶನದ ಜೊತೆಗೆ ಖಾಸಗಿಯವರು ಉತ್ಪಾದಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ನೀಡಲಾಗುತ್ತದೆ. ಫುಡ್ ಸ್ಟಾಲ್‍ಗಳಿಗೂ ಅವಕಾಶ ಕಲ್ಪಿಸಲಾಗುತ್ತಿದ್ದು ಮುನ್ಸಿಪಲ್ ಮೈದಾನದಲ್ಲಿ ಸುತ್ತಲಿನ ಕಾಂಪೌಂಡ್ ಹತ್ತಿರ ವಸ್ತುಪ್ರದರ್ಶನದ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಫಲಪುಷ್ಪ ಪ್ರದರ್ಶನ; ತೋಟಗಾರಿಕೆ ಇಲಾಖೆ ವತಿಯಿಂದ ಡಾ. ಪುನೀತ್ ರಾಜ್‍ಕುಮಾರ್ ಮೂರ್ತಿಯ ಫಲಪುಷ್ಪ ವಿನ್ಯಾಸ, ಕನಕದುರ್ಗಮ್ಮ ಮತ್ತು ಸಿಂಹಲಾಂಛನ ಮತ್ತು ಶ್ರಮಿಸಿದ ಮಹನೀಯರ ಮೂರ್ತಿಗಳನ್ನು ಪುಷ್ಪಗಳಿಂದ ಅಲಂಕರಿಸಬೇಕು. ವೇದಿಕೆ ಕಾರ್ಯಕ್ರಮಗಳ ಹತ್ತಿರ ಸಹಾಯವಾಣಿ, ಕಂಟ್ರೋಲ್ ರೂಂ ಹಾಗೂ ಅಂಬ್ಯುಲೈನ್ಸ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಚಿತ್ರಕಲಾ ಶಿಬಿರ, ಸಂಗನಕಲ್ಲು ಗ್ರಾಮದಿಂದ ಮೋಕಾವರೆಗೂ ಮ್ಯಾರಾಥನ್ ಓಟ, ಗಾಳಿಪಟ ಸ್ಪರ್ಧೆ, 200ಕ್ಕೂ ಹೆಚ್ಚು ಅಲಂಕೃತ ಎತ್ತಿನಗಾಡಿ ಮೆರವಣಿಗೆ. ಪ್ರಮುಖ ರಸ್ತೆಗಳ ಹಾಗೂ ವೃತ್ತಗಳಲ್ಲಿ ವೈವಿಧ್ಯಮ ದೀಪಾಪಲಂಕಾರ, ಅಡುಗೆ ಸ್ಪರ್ಧೆ, ರಂಗೋಲಿ, ಮೆಹಂದಿ ಸ್ಪರ್ಧೆ ಹಾಗೂ ಪ್ರದರ್ಶನ. ಸಾಹಸ ಕ್ರೀಡೆಗಳ ಬೈಕ್ ಸ್ಟಂಟ್, ಹಾರ್ಸ್ ಜಂಪಿಂಗ್, ಜಿಪ್‍ಲೈನ್, ರಾಕ್ ಕ್ಲೈಬಿಂಗ್ ಮತ್ತು ಹಾಟ್ ಏರ್ ಬಲೂನ್. ಮುನ್ಸಿಪಲ್ ಮೈದಾನ ಹಾಗೂ ಜಿಲ್ಲಾಡಳಿತ ಭವನದ ಅವರಣದಲ್ಲಿ ಮರಳು ಶಿಲ್ಪ ಕಲೆ, ಮತ್ಸಮೇಳ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕಬ್ಬಡಿ, ಕುಸ್ತಿ, ಮಲ್ಲಕಂಬ, ಶ್ವಾನ ಪ್ರದರ್ಶನ ನಡೆಯಲಿದೆ.











Click it and Unblock the Notifications