ಕರ್ನಾಟಕದಲ್ಲಿ ದುಡ್ಡಿದ್ದರೆ ಸರಕಾರಿ ಕೆಲಸವನ್ನು ಖರೀದಿಸಬಹುದು: ರಾಹುಲ್ ಗಾಂಧಿ
ಬಳ್ಳಾರಿ, ಅಕ್ಟೋಬರ್ 15: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಗಣಿನಾಡು ಬಳ್ಳಾರಿ ತಲುಪಿದ್ದು, ಶನಿವಾರ ನಡೆದ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ತಮ್ಮ ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಕಳೆದ ಕೆಲವು ದಿನಗಳಿಂದ ಭಾರತ ಜೋಡೋ ಯಾತ್ರೆ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಸಾಗುತ್ತಿದ್ದೇವೆ. 3500 ಕಿ.ಮೀ ಪ್ರಯಾಣ ಇದಾಗಿದ್ದು, ಕನ್ಯಾಕುಮಾರಿಯಿಂದ ಆರಂಭವಾಗಿ ಕೇರಳ ಮಾರ್ಗವಾಗಿ, ಕರ್ನಾಟಕಕ್ಕೆ ತಲುಪಿದೆ. ಆರಂಭದಲ್ಲಿ 3500 ಕಿ.ಮೀ ಸಾಗುವುದು ಸುಲಭದ ಕೆಲಸವಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ನಾವು ಪ್ರಯಾಣ ಆರಂಭಿಸಿ ದಿನ ಕಳೆದಂತೆ ನಂತರ ಹೆಜ್ಜೆ ಹಾಕುವುದು ಸುಲಭವಾಯಿತು.
ಈ ಯಾತ್ರೆಯಲ್ಲಿ ನಾವು ಬಳಲಿದಾಗ ಯಾವುದಾದರೂ ಒಂದು ಶಕ್ತಿ ನಮಗೆ ಪ್ರೇರಣೆ ನೀಡಿ ಮುಂದೆ ಸಾಗುವಂತೆ ಮಾಡಿತ್ತು. ಸಣ್ಣ ಮಕ್ಕಳು, ವಿಕಲಚೇತನರು, ವೃದ್ಧರು, ಬಡವರ ಮಾತುಗಳಿಂದ ನಮಗೆ ಪ್ರೇರಣೆ ನೀಡುತ್ತಿತ್ತು. ಈ ಯಾತ್ರೆ ನಾವು ಯಾಕೆ ಪ್ರಾರಂಭಿಸಿದ್ದೇವೆ? ಇದರ ಉದ್ದೇಶವೇನು? ಇದರಿಂದ ನಮದೆ ಸಿಗುತ್ತಿರುವ ನೆರವು ಯಾಕೆ ಸಿಗುತ್ತಿದೆ? ನಮಗೆ ಪ್ರೇರಣೆ ನೀಡುತ್ತಿರುವ ಶಕ್ತಿ ಯಾರಿಂದ ಸಿಗುತ್ತಿದೆ? ಯಾಕೆ ಸಿಗುತ್ತಿದೆ ಎಂಬ ಪ್ರಶ್ನೆಗಳು ಹುಟ್ಟುತ್ತವೆ.
ಈ ಯಾತ್ರೆಗೆ ನಾವು ಭಾರತ ಜೋಡೋ ಯಾತ್ರೆ ಎಂದು ಹೆಸರಿಟ್ಟಿದ್ದೇವೆ. ಬಿಜೆಪಿ, ಆರ್‌ಎಸ್ಎಸ್ ವಿಚಾರಧಾರೆ ದ್ವೇಷ, ಹಿಂಸಾಚಾರದ ವಿಚಾರವಾಗಿದ್ದು ಇವುಗಳಿಂದ ದೇಶ ವಿಭಜನೆಯಾಗುತ್ತಿವೆ. ಹಿಂದೂಸ್ಥಾನದ ಮೇಲೆ ಇದೊಂದು ದಾಳಿ. ಇದು ದೇಶಭಕ್ತಿಯಲ್ಲ, ದೇಶ ವಿರೋಧಿ ಕೆಲಸವಾಗಿದೆ. ಕಳೆದೊಂದು ತಿಗಳಿಂದ ಯಾತ್ರೆ ಮಾಡುತ್ತಿದ್ದು, ಬೇರೆ ಬೇರೆ ಧರ್ಮ, ಜಾತಿ, ವೃದ್ಧರು, ಯುವಕರು, ಮಕ್ಕಳು, ಮಹಿಳೆಯರು ಒಟ್ಟಾಗಿ ಸೇರಿ ಹೆಜ್ಜೆ ಹಾಕುತ್ತಿದ್ದಾರೆ.

ಯಾತ್ರೆಯಲ್ಲಿ ಧರ್ಮ-ಜಾತಿ ಕಾಣುತ್ತಿಲ್ಲ
ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ, ಕಾಣುತ್ತಿಲ್ಲ. ದಾರಿಯಲ್ಲಿ ಯಾರಾದರೂ ಬಿದ್ದರೆ ಉಳಿದ ಎಲ್ಲರೂ ಅವರಿಗೆ ಸಹಾಯ ಮಾಡುತ್ತಾರೆ. ಸಹಾಯ ಮಾಡುವಾಗ ಲಿಂಗ, ಜಾತಿ, ಧರ್ಮ, ಭಾಷೆಯನ್ನು ಹುಡುಕುವುದಿಲ್ಲ. ಈ ವಿಚಾರಧಾರೆ ಕೇವಲ ಯಾತ್ರೆಯ ವಿಚಾರಧಾರೆಯಲ್ಲ. ಇದು ಕರ್ನಾಟಕ ರಾಜ್ಯ ಹಾಗೂ ದೇಶದ ವಿಚಾರಧಾರೆಯಾಗಿದೆ. ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಇದೇ ವಿಚಾರಧಾರೆಯನ್ನು ನಮಗೆ ತಿಳಿಸಿದ್ದರು. ಅವರು ಹೇಳಿದ ಮಾತುಗಳು ಕರ್ನಾಟಕದಲ್ಲಿ ಹೆಜ್ಜೆ ಹಾಕುವಾಗ ಕಾಣಿಸಿದೆ. ಇದು ಕನ್ನಡಿಗರ ರಕ್ತದಲ್ಲಿದ್ದು, ಇದನ್ನು ಕಸಿಯಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಅವಧಿಯಲ್ಲಿ ಗರಿಷ್ಠ ನಿರುದ್ಯೋಗ
ಈ ಯಾತ್ರೆಯಲ್ಲಿ ವಿದ್ಯಾರ್ಥಿಗಳು, ಯುವಕರನ್ನು ಭೇಟಿಯಾಗಿದ್ದೇನೆ, ಆ ಸಮಯದಲ್ಲಿ ನಾನು ಅವರಿಗೆ ನೀವು ವ್ಯಾಸಂಗ ಮಾಡುತ್ತಿದ್ದು, ಮುಂದೆ ಏನು ಮಾಡುತ್ತೀರಿ ಎಂದು ಕೇಳಿದೆ. ಆಗ ಅವರು ಎಂಜಿನಿಯರ್, ವೈದ್ಯರು, ಪೊಲೀಸ್ ಇಲಾಖೆ ಸೇರುತ್ತೇನೆ ಎಂದು ತಿಳಿಸಿದರು. ಆದರೆ ಮತ್ತೆ ನಾನು ಅವರಿಗೆ ಮತ್ತೆ ವಿದ್ಯಾಭ್ಯಾಸ ಮುಗಿದ ನಂತರ ನಿಮಗೆ ಉದ್ಯೋಗ ಸಿಗುವ ವಿಶ್ವಾಸ ಇದೆಯಾ ಎಂದು ಕೇಳಿದಾಗ ಅವರು ನಮಗೆ ಉದ್ಯೋಗ ಸಿಗುವ ನಂಬಿಕೆ ಇಲ್ಲ ಎಂದಿದ್ದಾರೆ.
ಇಂದು ದೇಶದಲ್ಲಿ 45 ವರ್ಷದ ಇತಿಹಾಸದಲ್ಲಿ ಗರಿಷ್ಠ ನಿರುದ್ಯೋಗ ಹೆಚ್ಚಾಗಿದೆ. ಪ್ರಧಾನಮಂತ್ರಿಗಳು ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಎಲ್ಲಿ ಹೋದವು ಆ ಉದ್ಯೋಗಗಳು? ಬದಲಿಗೆ ಇದ್ದ ಉದ್ಯೋಗಗಳು ನಾಶವಾಗಿವೆ. ರಾಜ್ಯದಲ್ಲಿ 2.5 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇರುವುದೇಕೆ? ಪ್ರಧಾನಮಂತ್ರಿಗಳ ನೋಟು ರದ್ದತಿ, ಜಿಎಸ್‌ಟಿ, ಕೋವಿಡ್ ಸಮಯದಲ್ಲಿನ ನೀತಿಯಿಂದ 12.5 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ.

ಹಣವಿದ್ದರೆ ಸರಕಾರಿ ಹುದ್ದೆ ಖರೀದಿ ಸಾಧ್ಯ
ರಾಜ್ಯದಲ್ಲಿ ನೀವು ಪೊಲೀಸ್ ಇಲಾಖೆ ಸೇರಬೇಕಾದರೆ, 80 ಲಕ್ಷ ಲಂಚ ನೀಡಬೇಕು. ಹಣವಿದ್ದರೆ ಸರಕಾರಿ ಹುದ್ದೆ ಖರೀದಿಸಬಹುದು. ಹಣವಿಲ್ಲದಿದ್ದರೆ ಜೀವನಪೂರ್ತಿ ನಿರುದ್ಯೋಗಿಗಳಾಗಿರುತ್ತೀರಿ. ಸಹಕಾರಿ ಬ್ಯಾಂಕುಗಳಲ್ಲಿ, ಸಹಾಯಕ ಪ್ರಾದ್ಯಾಪಕ ಹುದ್ದೆ ನೇಮಕಾತಿಯಲ್ಲಿ ಹಗರಣ ನಡೆಯುತ್ತಿದೆ. ಇದಕ್ಕಾಗಿ ರಾಜ್ಯ ಸರಕಾರಕ್ಕೆ 40% ಕಮಿಷನ್ ಸರಕಾರ ಎಂದು ಬಿರುದು ನೀಡಲಾಗಿದೆ. ಏನೇ ಕೆಲಸ ಆಗಬೇಕಾದರೂ 40% ಕಮಿಷನ್ ನೀಡಬೇಕು.

ಇಂಧನ, ತೈಲ ಬೆಲೆ ಐತಿಹಾಸಿಕ ಏರಿಕೆ
ಈ ಯಾತ್ರೆ ನಿರುದ್ಯೋಗ ವಿರುದ್ಧ ಧ್ವನಿ ಎತ್ತಲು ಆರಂಭಿಸಲಾಗಿದೆ. ನಿರುದ್ಯೋಗ, ದ್ವೇಷದ ಜತೆಗೆ ಬೆಲೆ ಏರಿಕೆ ಮೂಲಕ ನಿಮ್ಮ ಬದುಕು ದುಸ್ಥರವಾಗಿದೆ. ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಇದು ಸಧ್ಯಕ್ಕೆ ನಿಲ್ಲುವುದಿಲ್ಲ. ಪ್ರಧಾನಮಂತ್ರಿಗಳು ಅಧಿಕಾರಕ್ಕೆ ಬರುವ ಮುನ್ನ ತಮ್ಮ ಭಾಷಣದಲ್ಲಿ ಅಡುಗೆ ಅನಿಲದ ಸಿಲಿಡಂರ್ 400 ರೂ. ಇದೆ. ಇದರಿಂದ ದೇಶದ ಮಹಿಳೆಯರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು. ಇಂದು ಅದೇ ಸಿಲಿಂಡರ್ 1000 ರೂ. ಆಗಿದೆ. ಇಂಧನ ತೈಲ ಬೆಲೆ ಐತಿಹಾಸಿಕ ಏರಿಕೆ ಆಗಿದೆ. ಈಗ ಪ್ರಧಾನಿಗಳು ನಮ್ಮ ಮಹಿಳೆಯರು ಏನು ಮಾಡಬೇಕು ಎಂದು ಹೇಳುತ್ತಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದರು.

ರೈತರಿಗೆ ಬೆಂಬಲ ಬೆಲೆ ಅಗತ್ಯ
ನನ್ನ ಯಾತ್ರೆಯಲ್ಲಿ ರೈತರನ್ನು ಭೇಟಿಯಾಗುತ್ತಿದ್ದು, ಎಲ್ಲಾ ರೈತರ ಪರಿಸ್ಥಿತಿ ಕೇಳುತ್ತಿದ್ದೇನೆ. ಅವರು ಕೃಷಿಗೆ ಎಷ್ಟು ಹಣ ಹಾಕುತ್ತಾನೆ, ಅದರಿಂದ ಎಷ್ಟು ಗಳಿಸುತ್ತಾರೆ ಎಂದು ಕೇಳುತ್ತೇನೆ. ಆಗ ಅವರು ಆರ್ಥಿಕ ಸಹಾಯ ವಿಲ್ಲದೆ ರೈತರು ಬದುಕಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಾರೆ. ರೈತರಿಗೆ ನೆರವಾಗುವ ಬದಲು, ದೇಶದ ಇತಿಹಾಸದಲ್ಲಿ ರೈತ ಶೇ.5 ರಷ್ಟು ರಸಗೊಬ್ಬರಕ್ಕೆ, ಶೇ.12ರಷ್ಟು ಟ್ರ್ಯಾಕ್ಟರ್‌ಗಳ ಮೇಲೆ, ಶೇ. 18ರಷ್ಟು ತೆರಿಗೆಯನ್ನು ಕೀಟನಾಶಕಗಳಿಗೆ ನೀಡಬೇಕಿದೆ. ರೈತರು ತಮಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದಿದ್ದು, ಇದು ರಾಜ್ಯ ಹಾಗೂ ದೇಶದ ರೈತರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರು.

ಬಳ್ಳಾರಿ ಜನರ ಪ್ರೀತಿ ಮರೆಯಲು ಸಾಧ್ಯವಿಲ್ಲ
ಅಂತಿಮವಾಗಿ ನನ್ನ ಕುಟುಂಬಕ್ಕೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಲು ಬಯಸುತ್ತೇನೆ. ನನ್ನ ತಾಯಿ ಸೋನಿಯಾ ಗಾಂಧಿ ಅವರು ಇಲ್ಲಿಂದ ಸ್ಪರ್ಧಿಸಿ ಇಲ್ಲಿನ ಜನರ ಬೆಂಬಲದೊಂದಿಗೆ ಗೆದ್ದರೆ, ನನ್ನ ಅಜ್ಜಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರಿನಿಂದ ಗೆದ್ದು ಬಂದಿದ್ದರು. ನಾನಿದನ್ನು ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ನನ್ನ ಜತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಳ್ಳಾರಿಯ ಬಿಸಿಲಿನ ಪ್ರಭಾವ ಅನುಭಿಸಿದ್ದೇನೆ. ಬಳ್ಳಾರಿಯ ರೈತರು, ಕಾರ್ಮಿಕರು ಬೇಸಿಗೆ ಸಮಯದಲ್ಲಿ ಎಷ್ಟು ಸಮಸ್ಯೆ ಅನುಭವಿಸುತ್ತಾರೆ ಎಂದು ಅರಿತಿದ್ದೇನೆ. ಬಳ್ಳಾರಿಯ ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರಿಗೆ ಒಂದು ಭರವಸೆ ನೀಡಲು ಬಯಸುತ್ತೇನೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ನಿಮಗೆ ಎಲ್ಲ ರೀತಿಯ ನೆರವು ನೀಡುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.












Click it and Unblock the Notifications