ಬಳ್ಳಾರಿ; ಬಿಜೆಪಿ ಭ್ರಷ್ಟಚಾರವನ್ನು ಪ್ರಶ್ನಿಸಿದರೆ ಕ್ರಿಮಿನಲ್ ಕೇಸ್ ಹಾಕುತ್ತಾರೆ- ಸಿದ್ದರಾಮಯ್ಯ
ಬಳ್ಳಾರಿ, ಅಕ್ಟೋಬರ್, 11: ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಧರ್ಮ ಆಧಾರಿತ ಜಾತಿ ರಾಜಕಾರಣ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳ್ಳಾರಿಯಲ್ಲಿ ವಾಗ್ದಾಳಿ ಮಾಡಿದರು.
ಬಳ್ಳಾರಿಯ ಗುರು ಫಂಕ್ಷನ್ ಹಾಲ್‌ನಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ವಿರೋಧಿಸಿದರೆ, ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕುತ್ತಾರೆ. ಸಿಬಿಐ, ಇಡಿ, ಅದಾಯ ತೆರಿಗೆ ಇಲಾಖೆಯ ಮೂಲಕ ಹೆದರಿಸುತ್ತಾರೆ," ಎಂದು ಕಿಡಿಕಾರಿದರು.
40% ಕಮಿಷನ್ ಸರ್ಕಾರದ ವಿರುದ್ಧ ಯಾತ್ರೆ
ಭಾರತ್ ಜೋಡೊ ಯಾತ್ರೆ ರಾಜಕೀಯ ಲಾಭಕ್ಕಾಗಿ ನಡೆಯುತ್ತಿಲ್ಲ, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆಯನ್ನು ಮಾಡುತ್ತಿಲ್ಲ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಭಯದ ವಾತಾವರಣದಲ್ಲಿ ಬದುಕುವ ಜನರಿಗೆ ಆತ್ಮವಿಶ್ವಾಸ ತುಂಬಬೇಕಾಗಿದೆ. ಈ ಹಿನ್ನಲೆಯಲ್ಲಿ ಭಾರತ ಜೋಡೊ ಯಾತ್ರೆ ನಡೆಯುತ್ತಿದೆ. ರಾಜ್ಯದಲ್ಲಿ 40% ಕಮಿಷನ್ ನಡೆಯುತ್ತಿದೆ ಎಂದು ಹೇಳಿದರೆ, ಅದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ದಾಖಲೆ ಕೇಳುತ್ತಾರೆ. ಆದರೆ ಕಳೆದ ಬಾರಿ ಚುನಾವಣೆಯ ಪ್ರಚಾರದಲ್ಲಿ ಮೋದಿಯವರು ರಾಜ್ಯ ಸರ್ಕಾರ 10% ಕಮಿಷನ್ ಎಂದು ಆರೋಪ ಮಾಡಿದ್ದರು. ಆಗ ಮೋದಿ ಬಳಿ ಏನಾದರೂ ದಾಖಲಾತಿ ಇತ್ತ? ಎಂದು ಪ್ರಶ್ನಿಸಿದರು.

ಗೋಡ್ಸೆ ಒಬ್ಬ ಕೊಲೆಗಡುಕ-ಸಿದ್ದರಾಮಯ್ಯ
ಬಿಜೆಪಿಯವರು ಸಾವರ್ಕರ್ ಮತ್ತು ಗೋಡ್ಸೆ ಪೋಟೋ ಹಾಕಿ ಗಣೇಶ ಹಬ್ಬದಲ್ಲಿ ಪೂಜೆ ಮಾಡುತ್ತಾರೆ. "ನಾಥುರಾಮ್ ಗೋಡ್ಸೆ ಗಾಂಧಿ ಕೊಂದ ಕೊಲೆಗಡುಕ. ಇನ್ನು ಸಾವರ್ಕರ್ ಬ್ರಿಟೀಷ್ ಸರ್ಕಾರದಿಂದ ಪೆನ್ಷನ್ ಪಡೆದುಕೊಳುತ್ತಿದ್ದ. ಇವರು ಸ್ವಾತಂತ್ಯಕ್ಕಾಗಿ ಹೋರಾಟ ಮಾಡಿಲ್ಲ. ಸಾವರ್ಕರ್ ಹಿಂದೂ, ಮುಸ್ಲಿಂ ಒಟ್ಟಾಗಿ ಇರುವುದಕ್ಕೆ ಆಗುವುದಿಲ್ಲ, ಎರಡು ದೇಶ ಆಗಬೇಕು ಎಂದು ಹೇಳಿದ ಮೇಲೆಯೇ ಜಿನ್ನಾ ಇಬ್ಬಾಗದ ಬಗ್ಗೆ ಹೇಳಿದ್ದರು. ನಮ್ಮ ಕಾಲದಲ್ಲಿ ಎಸ್‌ಸಿ ಎಸ್‌ಟಿಗೆ ಮೀಸಲಾತಿ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಲಾಗಿತ್ತು. ಶ್ರೀರಾಮುಲು ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಿಸುತ್ತೇವೆ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇವೆ ಎಂದಿದ್ದರು. ಅಧಿಕಾರಕ್ಕೆ ಬಂದು ಇಷ್ಟು ದಿನಗಳವರೆಗೆ ರಕ್ತ ಇರಲಿಲ್ಲವಾ?," ಎಂದು ಪ್ರಶ್ನಿಸುವ ಮೂಲಕ ಶ್ರೀರಾಮುಲು ಅವರನ್ನು ಗೇಲಿ ಮಾಡಿದರು.
ಬಳ್ಳಾರಿ ಕಾಂಗ್ರೆಸ್‌ನ ಭದ್ರ ಕೋಟೆ
ಅಕ್ಟೋಬರ್ 15ರಂದು ನಡೆಯುವ ಭಾರತ್ ಜೋಡೋ ಯಾತ್ರೆಯಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ. ಬಳ್ಳಾರಿ ಕಾಂಗ್ರೆಸ್‌ನ ಭದ್ರ ಕೋಟೆ ಆಗಿದ್ದು, ಇಲ್ಲಿನ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ. ಮೋದಿ, ಅಮಿತ್ ಶಾ, ಬೊಮ್ಮಾಯಿ ಅವರನ್ನು ಯಾರು ಪ್ರಶ್ನೆ ಮಾಡುವಂತಿಲ್ಲ. ನಾವು 40 ಪರ್ಸೆಂಟ್ ಸರ್ಕಾರ ಎಂದು ಪೋಸ್ಟ್ ಅಂಟಿಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕುತ್ತೇವೆ ಎಂದಿದ್ದರು. ಜನ ಅವರಿಗೆ ವೋಟು ಕೊಟ್ಟಿಲ್ಲ. "ಕೋಟ್ಯಂತರ ಲಂಚದ ಹಣ ಕೊಟ್ಟು ಸರ್ಕಾರ ನಡೆಸುತ್ತಿದ್ದಾರೆ. ನಮ್ಮ 14 ಜನ ಶಾಸಕರು ಹಾಗೂ ಮೂರು ಜನ ಜೆಡಿಎಸ್‌ನವರನ್ನು ದುಡ್ಡು ಕೊಟ್ಟು ಕೊಂಡುಕೊಂಡಿದ್ದಾರೆ. ಆನಂದ್ ಸಿಂಗ್ ನಮ್ಮ ಪಕ್ಷಕ್ಕೆ ಬಂದಿದ್ದ ಗಿರಾಕಿ ಆಗಿದ್ದು, ಹಣ ತೆಗೆದದುಕೊಂಡು ಹೋಗಿಬಿಟ್ಟ. ಇವರೆಲ್ಲ ಸೇರಿಕೊಂಡು ಸಮಾಜವನ್ನು ಹೊಡೆಯುತ್ತಿದ್ದಾರೆ," ಎಂದು ಆರೋಪಿಸಿದರು.












Click it and Unblock the Notifications