ಜವಳಿ ಇಲಾಖೆಯಲ್ಲಿ 12 ಲಕ್ಷ ಉದ್ಯೋಗ ಸೃಷ್ಟಿ; ಸಚಿವರು
ಬಳ್ಳಾರಿ, ಅಕ್ಟೋಬರ್ 29; "ಜವಳಿ ಇಲಾಖೆಯಲ್ಲಿ 12 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ" ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಹೇಳಿದರು.
ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ವಿಭಾಗ ಮಟ್ಟದ ಕೈಮಗ್ಗ ಮತ್ತು ಜವಳಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
"ಪ್ರಧಾನಮಂತ್ರಿ ನರೇಂದ್ರ ಮೋದಿ ನ್ಯಾಷನಲ್ ಹ್ಯಾಂಡಲೂಮ್ ಡೆವಲಪ್‍ಮೆಂಟ್ ಪ್ರೋಗ್ರಾಂ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ನಮ್ಮ ರಾಜ್ಯಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.

"ರಾಜ್ಯದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 132 ಕೋಟಿ ರೂ. ಸಬ್ಸಿಡಿ ಹಣ ಅರ್ಹ ಫಲಾನುಭವಿಗಳಿಗೆ ನೀಡಿದ್ದು, ಪರಿಶಿಷ್ಟ ವರ್ಗಗಳ ಹೊರತುಪಡಿಸಿ 2020-21ನೇ ಸಾಲಿನಲ್ಲಿ 121 ಕೋಟಿ ಸಾಲಮನ್ನಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮೆಗಾ ಜವಳಿ ಪಾರ್ಕ್ ಆರಂಭಕ್ಕೆ ಚಿಂತನೆ ನಡೆದಿದೆ" ಎಂದು ತಿಳಿಸಿದರು.
"ಜವಳಿ ಇಲಾಖೆಯು ನೇಕಾರ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ನ್ಯಾಷನಲ್ ಹ್ಯಾಂಡಲೂಮ್ ಡೆವಲಪ್‍ಮೆಂಟ್ ಪ್ರೋಗ್ರಾಂ ಎಂಬ ಮಹತ್ವಾಕಾಂಕ್ಷಿ ಯೋಜನೆ ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಕೈಮಗ್ಗ ಮತ್ತು ಜವಳಿ ಇಲಾಖೆಗೆ ರೂ.10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಿದ್ದು, ಇದರಿಂದ ಇಲಾಖೆಯ ಪುನಶ್ಚೇತನವಾಗಲಿದೆ" ಎಂದು ಸಚಿವರು ಮಾಹಿತಿ ನೀಡಿದರು.
"ಜವಳಿ ಇಲಾಖೆ ಶೇ 90ರಷ್ಟು ಸಬ್ಸಿಡಿ ನೀಡುವ ಮೂಲಕ ನೇಕಾರ ಸಮುದಾಯದ ನೆರವಿಗೆ ನಿಲ್ಲುವ ಕೆಲಸ ಮಾಡಲಾಗುತ್ತಿದೆ. ಸಮಾಜದ ಎಲ್ಲರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಬ್ಸಿಡಿ ಹೆಚ್ಚಿಸಲಾಗಿದೆ. ಆಯುಷ್ಮಾನ ಯೋಜನೆಯ ಮುಖಾಂತರ ಬಿಪಿಎಲ್ ಪಡಿತರ ಚೀಟಿ ಹೊಂದಿದವರೆಗೆ ಉಚಿತ ಆರೋಗ್ಯ ಸೇವೆ ನಿಡಲಾಗುತ್ತದೆ. ಇದರ ಕುರಿತು ಹಲವರಿಗೆ ಮಾಹಿತಿಯ ಕೊರತೆಯಿದೆ. ಇದರ ಕುರಿತು ಅರಿವು ಮೂಡಿಸುವ ಕೆಲಸ ಮಾಡಿ" ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
"ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ 20 ರಿಂದ 30 ಯೋಜನೆಗಳಿದ್ದು, ಅವುಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಮೂಲಕ ನೇಕಾರ ಸಮುದಾಯದ ಕಟ್ಟ ಕಡೆಯ ವ್ಯಕ್ತಿಯ ಜೀವನ ಸುಧಾರಣೆಗೆ ಕ್ರಮಹಿಸಲಾಗುವುದು" ಎಂದು ಸಚಿವರು ಹೇಳಿದರು.
ಹಣ ಬಿಡುಗಡೆಯಾಗಿದೆ; "ಪ್ರಸಕ್ತ ಸಾಲಿನಲ್ಲಿ ಎಲ್ಲ ಕಬ್ಬುಬೆಳೆಗಾರರಿಗೆ ಹಣ ಬಿಡುಗಡೆ ಮಾಡಲಾಗಿದೆ. ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ಈ ಹಿಂದೆ ಬಾಕಿ ಇರುವ ಹಣದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ" ಎಂದು ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ತಿಳಿಸಿದರು.
ಸಭೆಯ ಬಳಿಕ ಸಚಿವರು ಬಳ್ಳಾರಿ ನಗರದ ಪೊಲೇಕ್ಸ್ ಜೀನ್ಸ್ ತಯಾರಿಕಾ ಘಟಕ ಮತ್ತು ವಾಶಿಂಗ್ ಯೂನಿಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಲೀಕರು ಹಾಗೂ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ಫಲಾನುಭವಿಗಳಿಗೆ ಹಣ ತಲುಪಿಸಿ; "ಕೋವಿಡ್ ಸಮಯದಲ್ಲಿ ನೇಕಾರರ ನೆರವಿಗಾಗಿ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಈ ಯೋಜನೆಯಡಿ ಬಿಡುಗಡೆ ಮಾಡಿದ ಹಣ ಎಲ್ಲ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಯಾಕೆ ಮಾಡಿಲ್ಲ, ಕೂಡಲೇ ಬಾಕಿ ಉಳಿದ ಖಾತೆಗಳಿಗೆ ಹಣ ಸಂದಾಯ ಮಾಡುವ ಕೆಲಸ ಮಾಡಿ" ಎಂದು ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
"ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಿ, ನೇಕಾರ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಅನುದಾನ ಬಳಕೆಯ ಬಗ್ಗೆ ಮಾಹಿತಿ ನೀಡಿ. ಸರ್ಕಾರದಿಂದ ಸಬ್ಸಿಡಿ ಪಡೆದವರು ಅನುದಾನದಡಿಯಲ್ಲಿ ಸೌಲಭ್ಯ ಪಡೆದ ಬಗ್ಗೆ ನಾಮಫಲಕ ಅಳವಡಿಸುತ್ತಿಲ್ಲ. ಹಲವೆಡೆ ನಾಮಫಲಕ ತೆರವುಗೊಳಿಸಿದ್ದು, ಅಧಿಕಾರಿಗಳು ಈ ಕುರಿತು ಗಮನಹರಿಸಿ" ಎಂದು ನಿರ್ದೇಶನ ನೀಡಿದರು.
"ಅನುದಾನ ಬಾಕಿ ಉಳಿಯದಂತೆ ನೋಡಿಕೊಳ್ಳಿ. ಭ್ರಷ್ಟಾಚಾರ ಮುಕ್ತವಾಗಿ ಎಲ್ಲಾ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದುವರೆಗೂ ಇಲಾಖೆಯ ಹಲವಾರು ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದ್ದು, ಅರಿವು ಮೂಡಿಸುವ ಕೆಲಸ ಮಾಡಿ" ಎಂದು ಹೇಳಿದರು.
ಕಾಟನ್ ಅಸೋಸಿಯೇಷನ್‍ನ ಅಧ್ಯಕ್ಷ ದೊಡ್ಡನಗೌಡ ಮಾತನಾಡಿ, "ಬಳ್ಳಾರಿಯಲ್ಲಿ 85 ಜಿನ್ನಿಂಗ್ ಫ್ಯಾಕ್ಟರಿಗಳಿದ್ದು, ನಗರದ ಕೈಗಾರಿಕಾ ಪ್ರದೇಶಲ್ಲಿಯೇ 45 ಫ್ಯಾಕ್ಟರಿಗಳಿವೆ. ನಗರದಿಂದ ದೂರವಿರುವ ಪ್ರಯುಕ್ತ ಏನಾದರೂ ಅಗ್ನಿ ಅವಘಡಗಳು ಸಂಭವಿಸಿದರೆ ಶೀಘ್ರವಾಗಿ ಸ್ಪಂದಿಸಲು ಆಗುತ್ತಿಲ್ಲ. ಹೀಗಾಗಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣ ಮಾಡಬೇಕು" ಎಂದು ಮನವಿ ಮಾಡಿದರು.












Click it and Unblock the Notifications